Shivamogga Science PU College ಶಿವಮೊಗ್ಗ ನಗರಕ್ಕೆ ವಿಜ್ಞಾನ ಪಿಯು ಕಾಲೇಜಿನ ಅವಶ್ಯಕತೆಯನ್ನು ಮನಗಂಡು ಎಲ್ಲಾ ಸುಸಜ್ಜಿತ ಸೌಲಭ್ಯಗಳನ್ನು ಹೊಂದಿರುವ ಎಲ್‌ಬಿಎಸ್ ನಗರದ ಎರಡನೇ ತಿರುವಿನಲ್ಲಿ ಆರ್ಯ ವಿಜ್ಞಾನ ಪಿಯು ಕಾಲೇಜಿನ ನೂತನ ಕಟ್ಟಡವನ್ನು ಜೂ. 26ರಂದು ಬೆಳಿಗ್ಗೆ 9.30ಕ್ಕೆ ಶೃಂಗೇರಿ ಶ್ರೀಗಳಾದ ಜಗದ್ಗುರು ಶ್ರೀ ವಿಧುಶೇಖರಭಾರತೀರವರು ಉದ್ಘಾಟಿಸಲಿದ್ದಾರೆ.
ಈ ಕುರಿತು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕಾಲೇಜಿನ ಕಾರ್ಯದರ್ಶಿ ಎನ್. ರಮೇಶ್ ಕಾಲೇಜನ್ನು ಈ ವರ್ಷದಿಂದಲೇ ಆರಂಭಿಸಲಾಗಿದೆ. ಕಾಲೇಜಿನ ಕಟ್ಟಡದ ಉದ್ಘಾಟನೆ ಮಾತ್ರ ಜೂ. ೨೬ರ ಬೆಳಿಗ್ಗೆ ನಡೆಯಲಿದೆ ಎಂದರು.
ಶೃಂಗೇರಿ ಶ್ರೀಕ್ಷೇತ್ರದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರೆ ಬುದ್ಧಿವಂತರಾಗುತ್ತಾರೆ ಎಂಬ ಮಾತಿದೆ. ಈ ಹಿನ್ನಲೆಯಲ್ಲಿ ಅವರನ್ನು ನಮ್ಮ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ. ಉದ್ಘಾಟನೆಯ ದಿನ ಅವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಗುವುದು ಎಂದರು.
Shivamogga Science PU College ಶ್ರೀಗಳಿಂದ ಸರಸ್ವತಿ ಪೂಜೆ ನಡೆಸಲಾಗುವುದು. ಬಳಿಕ ಧೂಳಿ ಪೂಜೆ ನೆರವೇರಿಸಲಾಗುವುದು ಅನಂತರ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಶ್‌ರೀಗಳು ಅಲ್ಲಿ ಆಶೀರ್ವಚನ ನೀಡಿ, ಭಕ್ತರಿಗೆ ಫಲಮಂತ್ರಾಕ್ಷತೆ ನೀಡುವರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಶೃಂಗೇರಿ ಶಂಕರಮಠದ ಧರ್ಮದರ್ಶಿ ಡಾ. ಪಿ. ನಾರಾಯಣ್, ಶಾಸಕ ಎಸ್. ಎನ್.ಚನ್ನಬಸಪ್ಪ, ಡಾ. ಮಂಜುನಾಥ ಭಂಡಾರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಆರ್ಯ ಪಿಯು ಕಾಲೇಜಿನಲ್ಲಿ ಈಗ ೧೧೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು ೧೦ ಕ್ಲಾಸ್ ರೂಮ್‌ಗಳಿವೆ, ೩ ಸುಸಜ್ಜಿತ ಲ್ಯಾಬ್‌ಗಳಿವೆ ಪಿಯು ಪಾಠದ ಜೊತೆ ಜೊತೆಗೆಯೇ ನೀಟ್, ಜೆಇಇ ಪರೀಕ್ಷೆಗೂ ತರಬೇತಿ ನೀಡಲಾಗುವುದು. ಉತ್ತಮ ಉಪನ್ಯಾಸಕ ವರ್ಗದವರಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಆಡಳಿತ ಮಂಡಳಿ ಖಜಂಚಿ ಬಿ.ಜೆ.ಸುನೀತಾ ದೇವಿ, ಉಪನ್ಯಾಸಕರಾದ ಕಣ್ಣನ್, ಪ್ರಕಾಶ್ ಮೊದಲಾದವರಿದ್ದರು.