K.S. Eshwarappa ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಅಲ್ಲಿ ಟಿಕೆಟ್ ಪಡೆದು ಸೋಲನುಭವಿಸಿ ಕೊನೆಗೆ ತಮ್ಮ ತವರು ಪಕ್ಷಕ್ಕೆ ವಾಪಸ್ ಆಗಿ ಲೋಕಸಭೆಯ ಚುನಾವಣೆಯಲ್ಲಿ ಸಂಸದರಾಗಿದ್ದಾರೆ.ಇವರಂತೆಯೇ ಇದೀಗ ಕೆ.ಎಸ್ ಈಶ್ವರಪ್ಪ ಸಹ ಬಿಜೆಪಿಗೆ ಘರ್ ವಾಪಸಿ ಮಾಡಲಿದ್ದಾರೆಯೇ ಎಂಬ ಕುತೂಹಲ ಉಂಟಾಗಿದೆ.
ಪುತ್ರನಿಗೆ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ತಿರುಗಿ ಬಿದ್ದು, ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಠೇವಣಿಕಳೆದುಕೊಂಡ ಕೆ.ಎಸ್ ಈಶ್ವರಪ್ಪ ಇದೀಗ ಚುನಾವಣೆ ನಂತರ ಮತ್ತೆ ಬಿಜೆಪಿಗೆ ಹತ್ತಿರವಾಗಲಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ. ಜಗದೀಶ ಶೆಟ್ಟರ್ ಮಾದರಿಯಲ್ಲೇ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಬಿಜೆಪಿಗೆ ವಾಪಸ್ ಕರೆತರಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರೋಧಿ ಬಣ ಸಿದ್ಧತೆ ನಡೆಸುತ್ತಿದೆ ಎಂಬ ಮಾತುಕತೆ ಬಿಜೆಪಿ ಅಂಗಳದಲ್ಲಿ ನಡೆಯುತ್ತಿದೆ.
ತಮ್ಮ ಪುತ್ರನಿಗೆ ಹಾವೇರಿ ಟಿಕೆಟ್ ಸಿಗದಿದ್ದಕ್ಕೆ ರೊಚ್ಚಿಗೆದ್ದ ಕೆಎಸ್ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಿಂದ ಮೋದಿ ಹೆಸರಿನಲ್ಲಿಯೇ ಸ್ಪರ್ಧಿಸಿ, ಸೋತರು. ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ವಿರುದ್ಧ ಬಂಡಾಯ ಹೂಡಿದ್ದರು. ಶಿವಮೊಗ್ಗದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ಸಮಾವೇಶಕ್ಕೂ ಹೋಗಿರಲಿಲ್ಲ. ಬದಲಿಗೆ ಮೋದಿಯವರೇ ತಮ್ಮ ನಾಯಕ ಎಂದು ಪ್ರಚಾರ ಮಾಡಿದ್ದರು. ನೋಟಿಸ್ ಗೂ ಬಗ್ಗದ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.
K.S. Eshwarappa ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರನ್ನುಪಕ್ಷಕ್ಕೆ ಸೇರಿಸಿಕೊಂಡಂತೆ ಈಗ ಈಶ್ವರಪ್ಪ ಪಕ್ಷಕ್ಕೆ ಸೇರ್ಪಡೆಯಾಗಲಿ ಏನಾಗುತ್ತೆ ಎಂದು ಒಂದು ಗುಂಪು ಹೇಳಿಕೊಳ್ಳುತ್ತಿದೆ. ಇದು ಯಡಿಯೂರಪ್ಪಅವರ ವಿರೋಧಿ ಗುಂಪು. ಈಶ್ವರಪ್ಪ ಅವರಂತಹ ಹಿಂದುಳಿದ ನಾಯಕರ ಅಗತ್ಯ ಪಕ್ಷಕ್ಕಿದೆ ಎನ್ನುವುದು ಈ ಗುಂಪಿನ ವಾದ. ಇದಕ್ಕೆ ಎಂದಿನಂತೆ ಬಿಎಸ್ ವೈ ಗುಂಪಿನ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಬಾಯಿಗೆ ಬಂದಂತೆ ಬೈದ ಈಶ್ವರಪ್ಪ ಮತ್ತೆ ಪಕ್ಷಕ್ಕೆ ಬೇಡ. ಚುನಾವಣೆಯಲ್ಲಿ ಠೇವಣಿ ಉಳಿಸಿಕೊಳ್ಳಲೂ ಆಗದಿರುವ ಅವರಿಂದ ಏನು ಉಪಯೋಗ ಎನ್ನುವುದು ಈ ಗುಂಪಿನ ಅಭಿಪ್ರಾಯ. ಹೀಗಾಗಿ ಕೆಎಸ್ ಈಶ್ವರಪ್ಪ ಮತ್ತೆ ಬಿಜೆಪಿ ಸೇರುತ್ತಾರೆಯೇ ಅಥವಾ ತಟಸ್ಥವಾಗಿ ಉಳಿಯುತ್ತಾರೆಯೇ ಅವರ ನಿರ್ಧಾರವೇನೆಂಬುದು ತಿಳಿಯಬೇಕಾದರೇ ಸ್ವಲ್ಪ ದಿನ ಕಾಯಬೇಕಿದೆ.