Friday, November 22, 2024
Friday, November 22, 2024

Zilla Panchayat ಅಧಿಕಾರಿಗಳು ಕ್ಷೇತ್ರಗಳಲ್ಲಿ ಹಾಜರಿದ್ದು ಜನಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು- ಬಿ.ಬಿ.ಕಾವೇರಿ

Date:

Zilla Panchayat ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ, ಜನರೊಂದಿಗೆ ಉತ್ತಮವಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಬೇಕು ಹಾಗೂ ಇಲಾಖೆಗಳ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿ.ಪಂ ಆಡಳಿತಾಧಿಕಾರಿಗಳಾದ ಬಿ.ಬಿ.ಕಾವೇರಿ ತಿಳಿಸಿದರು.
ಜೂನ್ 14 ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧಿಕಾರಿಗಳು ಕ್ಷೇತ್ರದಲ್ಲಿ ಜನರಿಗೆ ಲಭ್ಯವಿದ್ದು ಅವರಿಗೆ ಸ್ಪಂದಿಸಬೇಕು. ಜನರನ್ನು ಅಲೆದಾಡಿಸದೇ ಅವರ ಕೆಲಸಗಳನ್ನು ಮಾಡಿಕೊಡಬೇಕು. ಎಸ್‍ಸಿಪಿ/ಟಿಎಸ್‍ಪಿ ಕಾರ್ಯಕ್ರಮಗಳನ್ನು ಸುಗಮವಾಗಿ ನಿರ್ವಹಿಸಿ ಗುರಿ ಸಾಧಿಸಬೇಕು. ಹಾಗೂ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಕಾಮಗಾರಿ/ಕೆಲಸಗಳನ್ನು ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಜಿಲ್ಲೆಯಲ್ಲಿ ಜನವರಿ 1 ರಿಂದ ಮೇ 31 ರವರೆಗೆ ವಾಡಿಕೆ 129 ಮಿ.ಮೀ ಗೆ 201 ಮಿ.ಮೀ ವಾಸ್ತವ ಮಳೆಯಾಗಿದೆ. 2024 ರ ಮುಂಗಾರು ಹಂಗಾಮಿನಲ್ಲಿ ಒಟ್ಟು 123580 ಹೆ. ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಿದ್ದು 4500 ಹೆ. ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಕಾರ್ಯ ನಡೆದಿದೆ. ಪ್ರಸಕ್ತ ವರ್ಷದಲ್ಲಿ ಈವರೆಗೆ 21198 ಮೆ.ಟನ್ ರಸಗೊಬ್ಬರ ವಿತರಣೆಯಾಗಿದ್ದು, 54084 ಮೆ.ಟನ್ ದಾಸ್ತಾನು ಇದೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇಲ್ಲ.
ಉಸ್ತುವಾರಿ ಕಾರ್ಯಕದರ್ಶಿಗಳು, ಅಧಿಕಾರಿಗಳು ಕ್ಷೇತ್ರದಲ್ಲಿ ಲಭ್ಯವಿದ್ದು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಬೆಳೆ ವಿಮೆ ಕುರಿತಂತೆ ವಿಮೆ ಕಂಪೆನಿಯೊಂದಿಗೆ ಸಭೆ ನಡೆಸಿ, ಸಕಾಲದಲ್ಲಿ ರೈತರಿಗೆ ವಿಮೆ ಲಭಿಸುವಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಕಾಶ್, ಜಿಲ್ಲೆಯ ಮುಖ್ಯ ಬೆಳೆಯಾದ ಅಡಿಕೆಗೆ ಕಳೆದ 2 ವರ್ಷದಲ್ಲಿ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಬಂದು ಹಾನಿಗೊಳಗಾಗಿತ್ತು. ತೀರ್ಥಹಳ್ಳಿ, ಹೊಸನಗರ, ಸಾಗರದ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಈ ರೋಗ ಹೆಚ್ಚು ಕಂಡುಬರುತ್ತದೆ. ಕಳೆದ ವರ್ಷ ಉಚಿತವಾಗಿ ಔಷಧಿಯನ್ನು ವಿತರಣೆ ಮಾಡಲಾಗಿತ್ತು. ಈ ಬಾರಿ ಮುಂಜಾಗೃತಾ ಕ್ರಮವಾಗಿ ರೋಗ ನಿರ್ವಹಣೆ ಬಗ್ಗೆ, ಔಷಧಿ ಸಿಂಪಡಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಹಾಗೂ ಕೃಷಿ ವಿಶ್ವವಿದ್ಯಾಲಯ ಅಡಿಕೆ ಸಂಶೋಧನಾ ಕೇಂದ್ರಕ್ಕೆ ಇಲಾಖೆಯಿಂದ ರೂ.43 ಲಕ್ಷ ಬಿಡುಗಡೆಯಾಗಿದ್ದು ರೈತರ ತಾಕಿನಲ್ಲಿ ಪ್ರಾತ್ಯಕ್ಷಿಕೆ, ತರಬೇತಿಯಂತರ ಕಾರ್ಯಕ್ರಮ ವಿಶ್ವವಿದ್ಯಾಲಯದಿಂದ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 10 ಹೆ.ಬಾಳೆ ಹಾನಿಯಾಗಿದ್ದು ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
Zilla Panchayat ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ಮಾತನಾಡಿ, ಜಾನುವಾರುಗಳ ಕೃತಕ ಗರ್ಭಧಾರಣೆ ಹಾಗೂ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆ ನೀಡುವಲ್ಲಿ ಶೇ.90 ಪ್ರಗತಿ ಸಾಧಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ವಿವಿಧ ಕಾರಣಗಳಿಗಾಗಿ ಇದುವರೆಗೆ 247 ಜಾನುವಾರು(ದನ, ಕರು, ಎಮ್ಮೆ) ಮರಣ ಹೊಂದಿದ್ದು ಪರಿಹಾರ ನೀಡಲು ಕ್ರಮ ವಹಿಸಲಾಗಿದೆ ಎಂದರು.
ಶಿಕ್ಷಣಾಧಿಕಾರಿ ಲೋಕೇಶಪ್ಪ ಮಾತನಾಡಿ, ಶೇ.99.3 ಸಮವಸ್ತ್ರ ವಿತರಣೆಯಾಗಿದೆ. ಶೇ.78 ಉಚಿತ ಪುಸ್ತಕ ವಿತರಣೆ ಆಗಿದೆ. ತಾಲ್ಲೂಕುಗಳ ಬಿಇಓ ಗಳಿಂದ ಶಾಲೆಗಳ ದುರಸ್ತಿ ಮತ್ತು ಮಳೆಗಾಲದಲ್ಲಿ ಹಾನಿಗೊಳಗಾಗಬಹುದಾದ ಶಾಲೆಗಳ ಪಟ್ಟಿಯನ್ನು ಪಡೆದು ಕ್ರಿಯಾ ಯೋಜನೆ ಸಿದ್ದಪಡಿಸಿ ಇಲಾಖೆಗೆ ಕಳುಹಿಸಿ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲೆಯಲ್ಲಿ ಶಾಲಾ ದಾಖಲಾತಿ ಪ್ರಮಾಣ ಹೆಚ್ಚಬೇಕು. ಆ ನಿಟ್ಟಿನಲ್ಲಿ ಬಿಇಓ ಮತ್ತು ಇತರೆ ಅಧಿಕಾರಿಗಳು, ಶಿಕ್ಷಕರು ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ಆಸಕ್ತಿ ವಹಿಸಿ ಶಿಕ್ಷಣದ ಗುಣಮಟ್ಟ ಹೆಚ್ಚುವಂತೆ ಕ್ರಮಗಳನ್ನು ಕೈಗೊಳ್ಳಬೇಕು, ಶಿಕ್ಷಕರ ಹಾಜರಾತಿ ಬಗ್ಗೆಯೂ ನಿಗಾ ವಹಿಸಬೇಕು ಎಂದರು.
ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಪ್ರತಿಕ್ರಿಯಿಸಿ, ಮಳೆಗಾಲದಲ್ಲಿ ಮಲೆನಾಡು ಭಾಗಗಳಲ್ಲಿ ಮಕ್ಕಳು ಶಾಲೆಗೆ ಬರುವುದು ಮತ್ತು ಮನೆಗೆ ತೆರಳುವುದರ ಬಗ್ಗೆ ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು.
ಡಿಹೆಚ್‍ಓ ಡಾ.ನಟರಾಜ್ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 10220 ಕೆಎಫ್‍ಡಿ ಪರೀಕ್ಷೆ ನಡೆಸಿದ್ದು, 63 ಪಾಸಿಟಿವ್ ಪ್ರಕರಣಗಳಿವೆ. ಹೊಸನಗರದಲ್ಲಿ 01 ಸಾವು ಸಂಭವಿಸಿದೆ. ಪ್ರಸ್ತುತ ಸಾಗರ ತಾಲ್ಲೂಕಿನ ತಾಳಗುಪ್ಪದ ಹಿರೇಮನೆ ಕೆಎಫ್‍ಡಿ ಹಾಟ್‍ಸ್ಪಾಟ್ ಆಗಿದ್ದು, ಕೆಎಫ್‍ಡಿ ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನ ಇಲ್ಲಿಯವರೆಗೆ 221 ಡೆಂಗ್ಯು ಪ್ರಕರಣ ವರದಿಯಾಗಿದೆ. ಡೆಂಗ್ಯು ನಿಯಂತ್ರಣಕ್ಕೆ ಪ್ರತಿ ಮನೆ ಮನೆಗೆ ತೆರಳಿ ಲಾರ್ವಾ ಪರೀಕ್ಷೆ, ನಿಯಂತ್ರಣ ಕ್ರಮದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಗುಣಮಟ್ಟವನ್ನು ಸ್ಥಳೀಯ ಸಂಸ್ಥೆಗಳು ಮತ್ತು ಕುಡಿಯುವ ನೀರು ಸರಬರಾಜು ಮಂಡಳಿಯವರು ಪರೀಕ್ಷಿಸಬೇಕು. ಕುಡಿಯುವ ನೀರಿನ ಬಗ್ಗೆ ಯಾವುದೇ ರಾಜೀ ಮಾಡಿಕೊಳ್ಳದೇ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಬಿಸಿಎಂ, ಅಲ್ಪಸಂಖ್ಯಾತ ಹಾಗೂ ಪ,ಜಾ ಮತ್ತು ಪ,ವ ವರ್ಗಗಳ ಹಾಸ್ಟೆಲ್‍ಗಳಲ್ಲಿ ಶೌಚಾಲಯ ಸೇರಿದಂತೆ ಮೂಲಭೂತ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು, ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಈ ಬಾರಿ ಎಸ್‍ಎಸ್‍ಎಲ್‍ಸಿ ಶೇ 97.23 ರಷ್ಟು ಫಲಿತಾಂಶ ಹಾಗೂ ಪಿಯುಸಿ ಶೇ 92 ರಷ್ಟು ಫಲಿತಾಂಶ ಬಂದಿದೆ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಶೇ. 94 ರಷ್ಟು ಹಾಗೂ ಪಿಯುಸಿಯಲ್ಲಿ ಶೇ 96 ರಷ್ಟು, ಪ,ವ ಮತ್ತು ಅಲ್ಪಸಂಖ್ಯಾತ ಹಾಸ್ಟೆಲ್‍ಗಳಲ್ಲಿ ಎಸ್ ಎಸ್ ಎಲ್ ಸಿ ಶೇ.98 ಮತ್ತು ಶೇ. 97 ಬಂದಿದೆ. ಎಲ್ಲಾ ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳಿಗೆ 8ನೇ ತರಗತಿಯಿಂದಲೇ ಉತ್ತಮ ಶಿಕ್ಷಣ ನೀಡಿ ಮತ್ತು ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲೆಯಾದ್ಯಂತ ಕುಡಿಯುವ ನೀರಿಗಾಗಿ 2.68 ಲಕ್ಷ ನೀರಿನ ಸಂಪರ್ಕ ನೀಡಲಾಗಿದ್ದು, ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮ ನಡೆಸುತ್ತಿದ್ದು ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಎಲ್ಲೆಡೆ ನಡೆಯುತ್ತಿದೆ. ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಗ್ರಾ.ಕು.ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಅಭಿಯಂತರರು ತಿಳಿಸಿದರು.
ಗ್ರಾಮೀಣ ವಸತಿ ಯೋಜನೆಯ ಬಸವ ವಸತಿ ಶೇ. 81 ರಷ್ಟು, ಅಂಬೇಡ್ಕರ್ ವಸತಿ ಶೇ. 72 ರಷ್ಟು, ದೇವರಾಜ್ ಅರಸ್ ವಸತಿ ಶೇ. 51 ರಷ್ಟು ಹಾಗೂ ಪ್ರಧಾನ ಮಂತ್ರಿ ವಸತಿ ಶೇ. 54 ರಷ್ಟು ಪ್ರಗತಿ ಸಾಧಿಸಲಾಗಿದೆ. ಹಾಗೂ ನಗರ ವಸತಿ ಯೋಜನೆಯಲ್ಲಿ ಅಂಬೇಡ್ಕರ್ ಮತ್ತು ವಾಜಪೇಯಿ ಯೋಜನೆಯಡಿ ಶೇ. 92 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಡಿಯುಡಿಸಿ ಯೋಜನಾ ನಿರ್ದೇಶಕರು ತಿಳಿಸಿದರು.
ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಮಾತನಾಡಿ, ಗೋವಿಂದಾ ಪುರದಲ್ಲಿ 3000 ಮನೆಗಳ ನಿರ್ಮಾಣ ಯೋಜನೆಯಡಿ 620 ಮನೆಗಳು ಪೂರ್ಣಗೊಂಡು ಫಲಾನುಭವಿಗಳು ವಾಸಿಸುತ್ತಿದ್ದಾರೆ. 700 ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದು ಹಂಚಿಕೆ ಆಗಬೇಕಿದೆ. ಆದರೆ ಇಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಕೆಲವು ತೊಡಕುಗಳಿದ್ದು ನಿವಾರಣೆಗೆ ಕ್ರಮ ಕೈಗೊಳ್ಳಬೇಕಿದೆ. ಗೋಪಿಶೆಟ್ಟಿಕೊಪ್ಪ ಆಶ್ರಯ ಯೋಜನೆಯು ವ್ಯಾಜ್ಯವೊಂದರ ಕಾರಣದಿಂದ ತೆಡೆಯಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ಮಾತನಾಡಿ ಜನವರಿ ಯಿಂದ ಮೇ ವರೆಗೆ ವಾಡಿಕೆಗಿಂತ ಶೇ. 27 ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ. ತುಂಗಾ ಅಣೆಕಟ್ಟು ತುಂಬಲು 1 ಅಡಿ ಬಾಕಿ ಇದೆ. ಭದ್ರಾ ಜಲಾಶಯದಲ್ಲಿ 1395 ಕ್ಯೂ.ಒಳ ಹರಿವು ಇದೆ.
ಮಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇದುವರೆಗೆ 4 ಜನರು ಮೃತಪಟ್ಟಿದ್ದು ಪರಿಹಾರ ತಲಾ ರೂ.5 ಲಕ್ಷ ಒದಗಿಸಲಾಗಿದೆ ಹಾಗೂ 14 ಪ್ರಾಣಿಗಳ ಮರಣವಾಗಿದ್ದು ಪರಿಹಾರ ಕ್ರಮ ವಹಿಸಲಾಗಿದೆ. ಮಳೆಯಿಂದ ಸುಮಾರು 24 ಮನೆಗಳಿಗೆ ಹಾನಿಯಾಗಿದ್ದು, ಸೂಕ್ತ ದಾಖಲೆಯನ್ನು ನೀಡಿದವರಿಗೆ ಪರಿಹಾರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಉಪವಿಭಾಗಾಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರಿಗೆ, ಅಧಿಕಾರಿಕರಿಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ಉಸ್ತುವಾರಿ ಕಾರ್ಯದರ್ಶಿಗಳು ಅಂಗನವಾಡಿಗಳು, ಶಾಲೆಗಳು ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಎಲ್ಲ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...

M.B.Patil 2025 ಫೆಬ್ರವರಿ 11.ಜಾಗತಿಕ ಹೂಡಿಕೆದಾರರ ಸಮಾವೇಶ.ಪೂರ್ವಸಿದ್ಧತೆ- ಸಚಿವ ಎಂ.ಬಿ.ಪಾಟೀಲ್

M.B.Patil 2025ರ ಫೆಬ್ರವರಿ 11 ರಿಂದ 14ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ...