Dr. G. Parameshwar ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಗತ್ಯ ಬಿದ್ದರೆ ಸಿಐಡಿ ಅಧಿಕಾರಿಗಳು ಬಂಧಿಸಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸ್ವಾಭಾವಿಕವಾಗಿ ಯಡಿಯೂರಪ್ಪ ಅವರು ಬಂಧಿಸದಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಜೂನ್ 15ರ ಒಳಗೆ ಚಾರ್ಜ್ ಶೀಟ್ ಸಲ್ಲಿಸಬೇಕಿದೆ. ಅಷ್ಟರ ಒಳಗೆ ಯಡಿಯೂರಪ್ಪ ಅವರಿಂದಲೂ ಹೇಳಿಕೆ ಪಡೆಯುತ್ತಾರೆ ಎಂದು ಹೇಳಿದ್ದಾರೆ.
ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಸಿಐಡಿ ಪರ ವಾದ ಮಂಡಿಸಲು ವಕೀಲ ಅಶೋಕ್ ನಾಯಕ್ ಅವರನ್ನು ನೇಮಿಸಿ ಈ ಮೊದಲು ಸರಕಾರ ಆದೇಶಿಸಿತ್ತು.
ಫೆಬ್ರವರಿ 2ರಂದು ಬೆಂಗಳೂರಿನ ಸಂಜಯನಗರದ ತಮ್ಮ ಮನೆಯಲ್ಲಿ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಯಡಿಯೂರಪ್ಪ ಮೇಲಿದೆ. ಈ ಸಂಬಂಧ ಬಾಲಕಿಯ ತಾಯಿ ಮಾರ್ಚ್ 14ರಂದು ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾಯ ಕೊಡಿಸುವಂತೆ ಕೋರಿ ಬಾಲಕಿ ಮತ್ತು ಆಕೆಯ ತಾಯಿ ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಯಡಿಯೂರಪ್ಪ ಅವರೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದ ಗಂಭೀರತೆ ಪರಿಗಣಿಸಿದ ಸರಕಾರ ಸಿಐಡಿ ತನಿಖೆಗೆ ವಹಿಸಿತ್ತು.
ಇದಲ್ಲದೆ ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಬಾಲಕಿಯ ಸಹೋದರನ ಮನವಿ ಮೇರೆಗೆ ವಕೀಲ ಎಸ್ ಬಾಲನ್ ಅವರು ಜೂನ್ 10ರಂದು ಅರ್ಜಿ ಸಲ್ಲಿಸಿದ್ದಾರೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 164ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಬಾಲಕಿಯ ಹೇಳಿಕೆಯನ್ನು ಈಗಾಗಲೇ ದಾಖಲಿಸಲಾಗಿದೆ ಎಂದು ರಿಟ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
Dr. G. Parameshwar ಬಾಲಕಿಯ ತಾಯಿ ಏಪ್ರಿಲ್ 29ರಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ಪತ್ರ ಬರೆದು ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಮನವಿ ಮಾಡಿದ್ದರು.
ಎರಡು ತಿಂಗಳ ನಂತರವೂ, ಯಡಿಯೂರಪ್ಪ ವಿರುದ್ಧದ ತನಿಖೆಯು ಸಿಆರ್‌ಪಿಸಿಯ ಸೆಕ್ಷನ್ 2 (ಹೆಚ್) ಅಡಿಯಲ್ಲಿ ವ್ಯಾಖ್ಯಾನಿಸಲ್ಪಟ್ಟಂತೆ ಪ್ರಗತಿಯಾಗಿಲ್ಲ. ಸೆಕ್ಷನ್ 41(ಎ) ಅಡಿಯಲ್ಲಿ ಅವರಿಗೆ ನೋಟಿಸ್ ಕೂಡ ನೀಡಿಲ್ಲ. ಆದ್ದರಿಂದ ನ್ಯಾಯಾಲದ ಮೊರೆ ಹೋಗುವುದರ ಹೊರತು ಬೇರೆ ಪರಿಹಾರವಿರಲಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.