J.N.N Engineering College ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ತಮ್ಮ ಬದುಕಿನಲ್ಲಿ ಒಂದು ಗಿಡ ನೆಟ್ಟು ಪೋಷಿಸುವ ಜವಾಬ್ದಾರಿ ಮೂಡಬೇಕಿದೆ ಎಂದು ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಅರಣ್ಯ ಇಲಾಖೆ, ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ, ಎನ್.ಎಸ್.ಎಸ್ ಘಟಕ, ರೆಡ್ ಕ್ರಾಸ್ ಘಟಕದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರ ಮತ್ತು ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಯುವ ಸಮೂಹ ತಮ್ಮ ಪರಿಸರವನ್ನು ಕಾಪಾಡಿಕೊಳ್ಳಬೇಕಿದೆ. ಆಧುನಿಕತೆ ವ್ಯಾಮೋಹ ಎಂದಿಗೂ ನಮ್ಮ ಪರಿಸರವನ್ನು ಹಾಳು ಮಾಡದಿರಲಿ ಎಂದು ಹೇಳಿದರು.
ಅರಣ್ಯ ವಲಯ ಸಂರಕ್ಷಣಾಧಿಕಾರಿ ಸುಧಾಕರ್ ಮಾತನಾಡಿ, ಮರ ಗಿಡಗಳಿಲ್ಲದೆ ಭೂಮಿ ಮರುಭೂಮಿಯಾಗುತ್ತಿದೆ. ಹವಾಮಾನ ವೈಪರಿತ್ಯ ಜಗತ್ತನ್ನು ತಲ್ಲಣಗೊಳಿಸುತ್ತಿದೆ ಎಂದು ಹೇಳಿದರು.
ಕಾಲೇಜಿನ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಡಾ.ಹೆಚ್.ಬಿ.ಸುರೇಶ್ ಮಾತನಾಡಿ, ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿತ ಕೇಂದ್ರವು ಕಳೆದ ೧೫ ವರ್ಷದಿಂದ ಪರಿಸರ ಸಂರಕ್ಷಣೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ರೈತರಿಗೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆಯಲ್ಲಿ ಅರಿವು ಮೂಡಿಸುತ್ತಿದೆ. ೨೦,೦೦೦ ಲೀಟರ್ ಜೈವಿಕ ಇಂಧನ ಉತ್ಪಾದನೆ ಮಾಡಿ ಮಾರಾಟ ಮಾಡುತ್ತಾ ಬಂದಿದೆ ಎಂದು ವಿವರಿಸಿದರು.
J.N.N Engineering College ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರದ ಸಂಚಾಲಕರಾದ ಡಾ.ಚೇತನ್.ಎಸ್.ಜಿ, ಪ್ರಾತ್ಯಕ್ಷಿಕೆ ಕೇಂದ್ರದ ಡಾ.ರವಿಕುಮಾರ್, ರೆಡ್ ಕ್ರಾಸ್ ಘಟಕ ಸಂಚಾಲಕರಾದ ಅರುಣ್ ಕುಮಾರ್ ಮತ್ತು ಎನ್.ಎಸ್.ಎಸ್ ಘಟಕ ಸಂಚಾಲಕರಾದ ಆನಂದ್ ರಾಜ್ ಉಪಸ್ಥಿತರಿದ್ದರು.
