Meteorological Department ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟ ಶುರುವಾಗಿದ್ದು, ಶನಿವಾರ ಸುರಿದ ಭಾರೀ ಮಳೆಗೆ ನಗರದ ತಗ್ಗುಪ್ರದೇಶಗಳು ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.
ನಗರದಲ್ಲಿ ರಾತ್ರಿ 8.30ರವರೆಗೆ 13.4 ಮಿ.ಮೀ ಮಳೆ ದಾಖಲಾಗಿದೆ. ಭಾರೀ ಮಳೆಯಿಂದಾಗಿ ಯಲಚೇನಹಳ್ಳಿ ಮತ್ತು ರಾಮಕೃಷ್ಣನಗರದಲ್ಲಿ ಅವಾಂತರ ಸೃಷ್ಟಿಯಾಗಿತ್ತು. ಚರಂಡಿಯ ನೀರು ಅನೇಕ ಪ್ರದೇಶಗಳಿಗೆ ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.
ಇದರಿಂದ ಬೇಸತ್ತ ಸ್ಥಳೀಯರು ಯಲಚೇನಹಳ್ಳಿ ಮತ್ತು ರಾಮಕೃಷ್ಣನಗರದಲ್ಲಿ ಉಂಟಾಗಿರುವ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಪಟ್ಟು ಬಿಡದ ಕಾರಣ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
Meteorological Department ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಜಂಟಿ ಆಯುಕ್ತ ಅಜಿತ್ ಎಂ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.