National Students’ Union of India ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ರಾಜ್ ಸಂಪತ್ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಹೊರವಲಯದ ನೀರಾವರಿ ಟ್ಯಾಂಕ್ ಬಳಿ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿದ್ದ ಸಂಪತ್(36) ಲೋಕಸಭೆ ಚುನಾವಣೆಗೆ ಕೇರಳದಲ್ಲಿ ಎನ್‌ಎಸ್‌ಯುಐ ಉಸ್ತುವಾರಿಯನ್ನು ವಹಿಸಿದ್ದರು ಮತ್ತು ರಾಹುಲ್ ಗಾಂಧಿಯವರ ಐದು ತಿಂಗಳ ಭಾರತ್ ಜೋಡೋ ಯಾತ್ರೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.
ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ರಾಜ್ ಸಂಪತ್‌ಗೆ ಅವರ ಸ್ನೇಹಿತರು ಕೊನೆಯ ಬಾರಿ ನೋಡಿದ್ದರು. ಆ ಬಳಿಕ ಅವರು ನಾಪತ್ತೆಯಾಗಿದ್ದರು. ಸ್ಥಳೀಯರು ಮೃತದೇಹವೊಂದು ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬಯಲಾಗಿದೆ.
National Students’ Union of India ಪ್ರಾಥಮಿಕ ತನಿಖೆಯಿಂದ ಸಂಪತ್‌ನನ್ನು ಬೇರೆಡೆ ಕೊಲೆ ಮಾಡಿ ಶವವನ್ನು ಪಟ್ಟಣದ ಹೊರವಲಯದ ತೊಟ್ಟಿಯ ಬಳಿ ಎಸೆದು ಹೋಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಡಿಎಸ್ಪಿ ಶ್ರೀನಿವಾಸ ರಾವ್, ವಿಧಿವಿಜ್ಞಾನ ತಂಡದೊಂದಿಗೆ ಶವ ಪತ್ತೆಯಾದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಸಂಪತ್‌ಗೆ ಸಹ ವಕೀಲರೊಬ್ಬರ ಜತೆ ಜಮೀನು ವಿವಾದವಿದ್ದು, ಈ ಕುರಿತು ಇತ್ತೀಚೆಗೆ ಹಿರಿಯ ಪೊಲೀಸ್ ಅಧಿಕಾರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದರು ಎಂದು ಸಂಪತ್ ಅವರ ಆಪ್ತ ಮೂಲಗಳು ತಿಳಿಸಿವೆ. ಈ ಕುರಿತು ಎಲ್ಲಾ ಕೋನಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.