Kateel Ashok Pai Memorial College ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ದಿನಾಂಕ 25ಮೇ 2024 ರಿಂದ ದಿನಾಂಕ 31 ಮೇ 2024ರ ವರೆಗೆ ಬಾಳೆಕೊಪ್ಪ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರವನ್ನು ಉದ್ಘಾಟಿಸಿದ ಕುವೆಂಪು ವಿ ವಿಯ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ. ಶುಭ ಮರವಂತೆ,ಯವರು ತಮ್ಮ ಉದ್ಘಾಟನಾ ಭಾಷಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಮತ್ತು ದೂರದೃಷ್ಟಿಯನ್ನು ವಿವರಿಸಿದರು. ಗಾಂಧಿಯ ತತ್ವಗಳನ್ನು ಅಡಿಪಾಯವಾಗಿಟ್ಟು ಸ್ವಾತಂತ್ಯೋತ್ತರದಲ್ಲಿ ಪ್ರಾರಂಭಿಸಿದ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ‘ಸಮನ್ವಯತೆ ಸೌಹಾರ್ದತೆ’ ಹಾಗೂ ಸ್ವಯಂಸೇವೆಯ ಮನೋಭಾವವನ್ನು ಮೂಡಿಸುತ್ತದೆ ಎಂದರು.
‘ನನಗಲ್ಲ ನಿಮಗೆ’ ಎಂಬ ಧ್ಯೇಯ ವಾಕ್ಯವು ಒಂದು ಬಹಳ ದೊಡ್ಡ ಮೌಲ್ಯವನ್ನು ವ್ಯಕ್ತಿತ್ವದಲ್ಲಿ ಸೇರ್ಪಡೆಗೊಳಿಸುತ್ತದೆ ಎಂದು ಅವರು ಉದಾಹರಣೆಗಳೊಂದಿಗೆ ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಬಾಳೆಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಕವಿತಾ ವಾಸು, ಉಪಾಧ್ಯಕ್ಷರಾದ ಆಶಾ ಬಾಗೇಶ, ಸದಸ್ಯರಾದ ಶ್ರೀಮತಿ ಆಶಾ ಜಯಣ್ಣ, ಶ್ರೀ ರುದ್ರಪ್ಪ, ಶ್ರೀಧರ್ಮಪ್ಪ, ಶ್ರೀ ಪ್ರಕಾಶ್, ಶ್ರೀಮತಿ ಕವಿತಾ ಗುತ್ತೇರ್ ಹಾಗೂ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ. ರಾಜೇಂದ್ರ ಚೆನ್ನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ ಸಂಧ್ಯಾ ಕಾವೇರಿ ವಹಿಸಿದ್ದರು. ಏಳು ದಿನಗಳ ಶಿಬಿರದಲ್ಲಿ ಗ್ರಾಮ ಸ್ವಚ್ಛತೆ ಅರಿವಿನ ಕಾರ್ಯಕ್ರಮಗಳು, ಪಥ ಸಂಚಲನ, ಸುಬ್ಬಯ್ಯ ಮೆಡಿಕಲ್ ಕಾಲೇಜು ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಹಾಗೂ ರೋಟರಿ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲಾ ಆವರಣದಲ್ಲಿ ನಡೆದ ಈ ಶಿಬಿರದಲ್ಲಿ ಶಿಬಿರಾರ್ಥಿಗಳು ಶಾಲೆಯ ಗೋಡೆಗಳಿಗೆ ಹಸೆ ಚಿತ್ತಾರಗಳನ್ನು ಬರೆದರು. ದಿನಾಂಕ 31 ಮೇ 2024 ರಂದು ಶಿಬಿರದ ಸಮಾರೋಪ ನೋಡಿಗಳನ್ನು ಆಡಿದ ಕಾಲೇಜಿನ ಆಡಳಿತ ಅಧಿಕಾರಿಗಳಾದ ಪ್ರೊಫೆಸರ್ ರಾಮಚಂದ್ರ ಬಾಳಿಗಾ ಅವರು ‘ಈ ಶಿಬಿರದಿಂದ ವಿದ್ಯಾರ್ಥಿಗಳು ಅತ್ಯುತ್ತಮವಾದ ಅನುಭವಗಳನ್ನು ಪಡೆದುಕೊಂಡಿದ್ದಾರೆ.
Kateel Ashok Pai Memorial College ಇಂತಹ ಒಂದು ಸಂಘಟನಾ ಕೌಶಲ್ಯ, ಸಂಯೋಜನೆಯ ಮನೋಭಾವ, ಹೊಂದಾಣಿಕೆಯ ಸಾಮರ್ಥ್ಯ ಇಂದು ಸಮಾಜವನ್ನು ಮುನ್ನಡೆಸಲು ಬಹಳ ಅಗತ್ಯ, ಈ ಕಲಿಕೆ ರಾಷ್ಟ್ರೀಯ ಸೇವಾ ಯೋಜನೆಯಿಂದ ಮಾತ್ರ ಸಾಧ್ಯ’ ಎಂದು ತಿಳಿಸಿದರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಾಳೆಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಲಿಂಗಪ್ಪನವರು ಶಿಬಿರದ ಕಲಿಕೆ ಒಂದು ಕಾರ್ಯಾನುಭವದ ಕಲಿಕೆ ಎಂದು ವಿಶ್ಲೇಷಿಸಿದರು. ಊರಿನ ಮುಖಂಡರು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳು ಮಾದರಿ ನಡತೆಯನ್ನು ತೋರಿದ್ದಾರೆ ಇವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಶಿಬಿರ ಅಧಿಕಾರಿಗಳಾದ ಡಾಕ್ಟರ್ ಸುಕೀರ್ತಿ ಹಾಗೂ ಶ್ರೀ ರಾಬರ್ಟ್ರಾಯಪ್ಪ ರವರು ಶಿಬಿರದ ಅತ್ಯುತ್ತಮ ತಂಡ ಶರಾವತಿ ತಂಡವೆಂದು, ಅತ್ಯುತ್ತಮ ಸ್ವಯಂಸೇವಕ ಶ್ರೀ ಜನಾರ್ಧನ್ ಹಾಗೂ ಅತ್ಯುತ್ತಮ ಸ್ವಯಂ ಸೇವಕಿ ಕುಮಾರಿ ಪ್ರಜ್ಞಾದೀಪ್ತಿ ಎಂದು ಘೋಷಿಸಿದರು.
ಸಮಾರೋಪ ಸಮಾರಂಭದಲ್ಲಿ ಗ್ರಾಮದ ಮುಖಂಡರು, ಶಾಲೆಯ ಶಿಕ್ಷಕರು, ಕಾಲೇಜಿನ ಉಪನ್ಯಾಸಕರುಗಳು ಭಾಗವಹಿಸಿದ್ದರು. ಕಾಲೇಜಿನ ಹಿರಿಯ ಸ್ವಯಂಸೇವಕರಾದ, ಗಣರಾಜ್ಯ ಪಥಸಂಚಲನದಲ್ಲಿ ವಿ ವಿಯನ್ನು ಪ್ರತಿನಿಧಿಸಿದ್ದ ಶ್ರೀ ಹರ್ಷವರ್ಧನ್ ಹಾಗೂ ಕು. ಸಂಧ್ಯಾ ಶಿಬಿರದ ನಾಯಕತ್ವವನ್ನು ವಹಿಸಿದ್ದರು. ಒಟ್ಟಿನಲ್ಲಿ 7 ದಿನಗಳ ಗ್ರಾಮವಾಸ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಬಾಳೆಕೊಪ್ಪ ಗ್ರಾಮದ ಜನರೊಂದಿಗೆ ಒಡನಾಡಲು, ಹಲವಾರು ಕೌಶಲ್ಯಗಳನ್ನು ಕಲಿಯಲು ಹಾಗೂ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಹಕಾರಿಯಾಯಿತು.