Hongirana Ranga tanda ಶಿವಮೊಗ್ಗ ನಗರದ ಹೊಂಗಿರಣ ರಂಗತಂಡವು ಜೂನ್ 1ರಂದು ದನಾ ಕಾಯೋರ ದೊಡ್ಡಾಟ ಶ್ರೀಕೃಷ್ಣ ಸಂಧಾನ ಎಂಬ ಹಾಸ್ಯ ನಾಟಕವನ್ನು ಕುವೆಪು ರಂಗಮಂದಿರದಲ್ಲಿ ಸಂಜೆ 7ಕ್ಕೆ ಏರ್ಪಡಿಸಿದೆ. ಜೊತೆಗೆ ಎಸ್ಸೆಸೆಲ್ಸಿ ಮತ್ತು ಪಿಯುನಲ್ಲಿ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿದ ಈ ನಾಟಕ ತಂಡದ ಸದಸ್ಯರ ಮಕ್ಕಳನ್ನು ಗೌರವಿಸಲಾಗುವುದು ಎಂದು ಹೊಂಗಿರಣ ತಂಡದ ಅಧ್ಯಕ್ಷ ಸಾಸ್ವೆಹಳ್ಳಿ ಸತೀಶ್ ಹೇಳಿದರು.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 27 ವರ್ಷಗಳಿಂದ ಹೊಂಗಿರಣ, ಶಿವಮೊಗ್ಗ ತಂಡವು ನಿರಂತರ ರಂಗ ಚಟುವಟಿಕೆಗಳ ಮೂಲಕ ನಾಡಿನಾದ್ಯಂತ ಹೆಸರಾಗಿದೆ. ತಂಡದ ಹೆಸರಿನ ಅಡಿ ಬರಹವೇ ಹೇಳುವ ‘ಸೃಜನಶೀಲ ರಂಗ ಪಯಣ’ ದ ಮೂಲಕ ನೂರಾರು ಹೊಸತನದ ನಾಟಕಳನ್ನು ರಂಗಕ್ಕೆ ತಂದು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಶಿವಮೊಗ್ಗಕ್ಕೆ ತಂದ ಕೀರ್ತಿ ತಂಡದ್ದು. ರಂಗಭೂಮಿಗಷ್ಟೆ ಸಿಮಿತವಾಗದೇ ಪುಸ್ತಕ ಪ್ರಕಟಣೆ, ಕಿರುಚಿತ್ರ, ಸಾಕ್ಷ್ಯಚಿತ್ರ ನಿರ್ಮಾಣ, ಸಿನಿಮಾ ಪ್ರದರ್ಶನ ಆಯೋಜನೆ, ಬೀದಿ ನಾಟಕ, ಸ್ವಯಂ ಪ್ರೇರಿತ ಜಾಗೃತಿ ಕಾರ್ಯಕ್ರಮ, ಸಂಗೀತ ಕಛೇರಿ ಕಾರ್ಯಕ್ರಮ, ಮಸ್ತಕ ಬಿಡುಗಡೆ ಕಾರ್ಯಕ್ರಮ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ತಂಡವು ನಿರಂತರತೆಯನ್ನು ಕಾಯ್ದುಕೊಂಡು ಬಂದಿದೆ ಎಂದರು.
ಜೂನ್ 1 ರಂದು ‘ದನಾ ಕಾಯೋರ ದೊಡ್ಡಾಟ ಮತ್ತು ಶ್ರೀ ಕೃಷ್ಣ ಸಂಧಾನ’ ಎಂಬ ಹಾಸ್ಯ ನಾಟಕ ಪ್ರದರ್ಶಿತವಾಗಲಿದೆ. ಈ ನಾಟಕವನ್ನು ಕಾಮಿಡಿ ಕಿಲಾಡಿಗಳು ಸೀಸನ್ -3 ರ ಫೈನಲಿಸ್ಟ್ ಆಗಿದ್ದ ಮತ್ತು ಹಲವು ಸಿನಿಮಾಗಳಲ್ಲಿ ನಟಿಸಿರುವ ತಂಡದ ‘ಚಂದ್ರಶೇಖರ ಹಿರೇಗೋಳಿನಲ್ (ಹೊಂಗಿರಣ ಚಂದ್ರು ನಿರ್ದೇಶನ ಮಾಡಿ ನಟಿಸಿದ್ದಾರೆ. ‘ಲಕ್ಷ್ಮೀ ನಿವಾಸ’ ಧಾರವಾಹಿಯ ವೆಂಕಿ ಪಾತ್ರದಲ್ಲಿ ಮಿಂಚುತ್ತಿರುವ ತಂಡದ ಕಲಾವಿದ ಚಂದ್ರಶೇಖರ ಶಾಸ್ತ್ರಿ ಜೊತೆಗೆ ಹಲವು ಕಿರುತೆರೆ-ಹಿರಿತೆರೆಯಲ್ಲಿ ಗುರುತಿಸಿಕೊಂಡ ತಂಡದ ಕಲಾವಿದರು ಅಭಿನಯಿಸಲಿದ್ದಾರೆ ಎಂದರು.
Hongirana Ranga tanda ಈ ಪ್ರದರ್ಶನಕ್ಕೆ ಒಬ್ಬರಿಗೆ ರೂ 50 ನ್ನು ಪ್ರೋತ್ಸಾಹ ದರವನ್ನಾಗಿ ನಿಗದಿ ಮಾಡಲಾಗಿದೆ. ಮುಂಗಡ ಟಿಕೆಟ್‌ಗಳು ಕ್ರೀಡಾ ಲೋಕ (ಉಲ್ಲಾಸ್ ಸ್ಪೋರ್ಟ್ಸ್) ಶ್ರೀನಿಧಿ ಕಾಂಪ್ಲೆಕ್ಸ್, ಗೋಪಿ ಸರ್ಕಲ್, ಶಿವಮೊಗ್ಗ ಇಲ್ಲಿ ದೊರೆಯುತ್ತವೆ. ಈಗಾಗಲೇ ಈ ನಾಟಕ ಸುಮಾರು 95 ಕ್ಕೂ ಹೆಚ್ಚಿನ ಪ್ರದರ್ಶನ ಕಂಡಿದ್ದು ನಾಡಿನ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದೆ ಎಂದ ಅವರು, ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ರ‍್ಯಾಂಕ್ ಬಂದ ತಂಡದ ಕಲಾವಿದರಾದ ಕೆ.ಸಿ ಚುಕ್ಕಿ ಹಾಗೂ ನಾದ ಹಾಲಸ್ವಾಮಿ ಜೊತೆಗೆ ರಂಗಭೂಮಿ ವಿಷಯದಲ್ಲಿ ಪಿ ಹೆಚ್ ಡಿ ಪಡೆದ ಲವ ಜಿ ಆರ್, ಡಿಲಿಟ್ ಪದವಿ ಪಡೆದ ಗಣೇಶ್ ಕೆಂಚನಾಳ ಅವರನ್ನು ಸನ್ಮಾನಿಸಲಾಗುವುದು ಎಂದರು.