B.S. Yediyurappa ಹಿರಿಯ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ, “ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ 17 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ” ಎಂದು ಆರೋಪಿಸಿ, ದೂರು ದಾಖಲಿಸಿದ್ದ ಮಹಿಳೆಯು (ಮೇ 26) ಬೆಂಗಳೂರಿನ ಹುಳಿಮಾವು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೂಲಗಳ ಪ್ರಕಾರ, 53 ವರ್ಷದ ಮಹಿಳೆ ಮೇ 26 ರಂದು ರಾತ್ರಿ ಉಸಿರಾಟದ ತೊಂದರೆ ಅನುಭವಿಸಿದ ನಂತರ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ಮೂಲಗಳು ತಿಳಿಸಿವೆ. ‘ಮಹಿಳೆ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು’ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮೃತ ಮಹಿಳೆಯ ಮಗಳು, ಆಕೆಯೊಂದಿಗೆ ಆಸ್ಪತ್ರೆಗೆ ಬಂದಿದ್ದಳು. ರಾತ್ರಿ 9.21ರ ಸುಮಾರಿಗೆ ತನ್ನ ತಾಯಿ ಆಸ್ಪತ್ರೆಯಲ್ಲಿದ್ದಾರೆ ಎಂದು 17 ವರ್ಷದ ಬಾಲಕಿ ಪೋಕ್ಸೊ ಪ್ರಕರಣದ ಸಾಕ್ಷಿಯೊಬ್ಬರಿಗೆ ಸಂದೇಶ ಕಳುಹಿಸಿದ್ದಳು. ನಂತರ ಆಕೆ ತನ್ನ ತಾಯಿ ಇನ್ನಿಲ್ಲ ಎಂದು ಸಂದೇಶ ಕಳುಹಿಸಿದ್ದಳು.
ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಜಿ ಸಿಎಂ ಯಡಿಯೂರಪ್ಪ ನಿರಾಕರಿಸಿದ್ದರು. “ತಾಯಿ-ಮಗಳಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದೆ” ಎಂದು ಹೇಳಿಕೊಂಡಿದ್ದಾರೆ.
B.S. Yediyurappa ಪ್ರಕರಣದ ಬೆನ್ನತ್ತಿದ ಮಹಿಳೆಗೆ ಸಹಾಯ ಮಾಡುತ್ತಿದ್ದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಬಿಜೆಎಂಎಸ್) ಕಾರ್ಯಕರ್ತರು ಶವದ ಮರಣೋತ್ತರ ಪರೀಕ್ಷೆಗೆ ಒತ್ತಾಯಿಸುತ್ತಿದ್ದಾರೆ. ಆದರೆ, ಪೊಲೀಸರು ಇದನ್ನು ಸಹಜ ಸಾವು ಎಂದು ವೈದ್ಯರು ಉಲ್ಲೇಖಿಸಿದ್ದಾರೆ. ಕಾನೂನು ಮಾರ್ಗದರ್ಶನ ಪಡೆಯಲು ದೂರುದಾರರು ಇಂದು (ಮೇ 27 ರಂದು) ವಕೀಲರನ್ನು ಭೇಟಿಯಾಗಬೇಕಿತ್ತು.