Adani Company ಕಡಿಮೆ ಗುಣಮಟ್ಟದ ಕಲ್ಲಿದ್ದಲನ್ನು ಹೆಚ್ಚಿನ ಮೌಲ್ಯದ ಇಂಧನವಾಗಿ ಮಾರಾಟ ಮಾಡುವ ಮೂಲಕ ಅದಾನಿ ಕಂಪೆನಿ ವಂಚನೆ ಮಾಡಿದೆ’ ಎಂದು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (OCCRP) ಮತ್ತು ಫೈನಾನ್ಷಿಯಲ್ ಟೈಮ್ಸ್‌ನ ತನಿಖಾ ವರದಿ ಬಹಿರಂಗಪಡಿಸಿತ್ತು. ಇದರ ಬೆನ್ನಲ್ಲಿ ಅದಾನಿ ಗ್ರೂಪ್‌ನ ವಂಚನೆಗೆ ಸಂಬಂಧಿಸಿ ‘ಸಿಬಿಐ’, ‘ಇಡಿ’ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಪಕ್ಷಗಳು ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.
ಗೌತಮ್ ಅದಾನಿ ಅವರ ಕಂಪನಿಯು ‘ಕಡಿಮೆ ಗುಣಮಟ್ಟದ ಕಲ್ಲಿದ್ದಲನ್ನು ಹೆಚ್ಚಿನ ಮೌಲ್ಯದ ಇಂಧನವಾಗಿ ಮಾರಾಟ ಮಾಡುವ ಮೂಲಕ ವಂಚನೆ ಮಾಡಿದೆ’ ಎಂದು ವರದಿಯು ಬಹಿರಂಗಪಡಿಸಿದ್ದು, ಬೆಲೆ ಏರಿಕೆಯ ಎಲ್ಲಾ ಆರೋಪಗಳನ್ನು ಅದಾನಿ ತಿರಸ್ಕರಿಸಿದ್ದಾರೆ.
Adani Company ದಾಖಲೆಗಳ ಪ್ರಕಾರ, ಜನವರಿ 2014ರಲ್ಲಿ ಅದಾನಿ ಕಂಪನಿ ಇಂಡೋನೇಷ್ಯಾದಿಂದ ಕಲ್ಲಿದ್ದಲು ಖರೀದಿಸಿತ್ತು. ಅದು ಗುಣಮಟ್ಟದಲ್ಲಿ ಪ್ರತಿ ಕಿಲೋಗ್ರಾಮ್‌ಗೆ 3,500 ಕ್ಯಾಲೊರಿಗಳನ್ನು ಹೊಂದಿತ್ತು. ಆದರೆ, ಆ ಕಲ್ಲಿದ್ದಲ್ಲನ್ನು ತಮಿಳುನಾಡು ಜನರೇಷನ್ ಅಂಡ್ ಡಿಸ್ಟ್ರಿಬ್ಯೂಷನ್ ಕಂಪನಿಗೆ (ತಂಗೆಡ್ಕೋ) ಅತ್ಯಮೂಲ್ಯ ದರ್ಜೆಯ 6,000 ಕ್ಯಾಲೋರಿಯ ಕಲ್ಲಿದ್ದಲು ಎಂದು ಮಾರಾಟ ಮಾಡಲಾಗಿದೆ. ಈ ಮೂಲಕ ಸಾರಿಗೆ ವೆಚ್ಚ ಹೊರತುಪಡಿಸಿ ಅದಾನಿ ಎರಡು ಪಟ್ಟು ಲಾಭ ಪಡೆದಿದೆ.
ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್‌ನ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಮಾರುಕಟ್ಟೆ ವಂಚನೆ ಬಗ್ಗೆ ಆರೋಪಿಸಿತ್ತು. ಈ ಬಗ್ಗೆ ವಿರೋಧ ಪಕ್ಷಗಳು ಹಲವು ಪ್ರಶ್ನೆಗಳನ್ನು ಎತ್ತಿದ್ದವು. OCCRP ಮತ್ತು ಫೈನಾನ್ಷಿಯಲ್ ಟೈಮ್ಸ್ ತನಿಖಾ ವರದಿ ಪ್ರಕಟಿಸಿದ ನಂತರ, 2024ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ವಿರೋಧ ಪಕ್ಷಗಳು ಹಗರಣದ ಪುರಾವೆಗಳು ಲಭ್ಯವಿದ್ದರೂ ಅದಾನಿ ಸಾಮ್ರಾಜ್ಯದ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.