Shree Ranganatha Swami ಸೊರಬ ಪಟ್ಟಣದ ಪುರದೈವ ಶ್ರೀ ರಂಗನಾಥ ಸ್ವಾಮಿ (ಕ್ಷೀರ ರುದ್ರ ದೇವರ) ಬ್ರಹ್ಮ ರಥೋತ್ಸವ ಗುರುವಾರ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ರಥೋತ್ಸವ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ, ಅಭಿಷೇಕ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಘನಪಾಠಿ ನಾರಾಯಣ ಭಟ್ ಮರಾಠೆ ಅವರು ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು.
ತಹಶೀಲ್ದಾರ್ ಹುಸೇನ್ ಸರಕಾವಸ್ ರಥೋತ್ಸವಕ್ಕೆ ಚಾಲನೆ ನೀಡಿದರು.
ಭಕ್ತರು ಕಳಸಕ್ಕೆ ಬಾಳೆಹಣ್ಣು, ಉತ್ತುತ್ತಿ , ಕಾಳು ಮೆಣಸು ಬೀರುವ ಮೂಲ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ರಥವು ಶಿಥಿಲವಾಗಿರುವುದರಿಂದ ತಜ್ಞರ ಸಲಹೆ ಮೇರೆಗೆ ದೇವಸ್ಥಾನದ ಮುಂಭಾಗದ ಕೆಲವೇ ದೂರ ಮಾತ್ರ ರಥವನ್ನು ಎಳೆಯಲಾಯಿತು. ನೂತನ ರಥ ನಿರ್ಮಾಣವಾಗಬಹುದು, ಪೂರ್ಣ ಪ್ರಮಾಣದಲ್ಲಿ ರಥವನ್ನು ಎಳೆಯಬಹುದು ಎನ್ನುವ ಭಕ್ತರ ಆಶಾಭಾವನೆಗೆ ನಿರಾಸೆ ಉಂಟಾಯಿತು.
Shree Ranganatha Swami ಪೊಲೀಸ್ ಇಲಾಖೆಯಿಂದ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಚಿಕ್ಕಪೇಟೆ ಮಾರ್ಗವಾಗಿ ಏಕ ಮುಖ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ರಥೋತ್ಸವದ ಅಂಗವಾಗಿ ಬ್ರಾಹ್ಮಣ ಸಮಾಜದಿಂದ ಸಮುದಾಯವರಿಗೆ ಮಾತ್ರ ಚಾಮರಾಜ ಪೇಟೆಯ ಗುರುಭವನದಲ್ಲಿ ಪ್ರತ್ಯೇಕವಾಗಿ ಭೋಜನ ವ್ಯವಸ್ಥೆ ಹಾಗೂ ಸಾರ್ವಜನಿಕರಿಂದ ಇತರೆ ಸಮುದಾಯದವರಿಗೆ ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ನಡೆಸಲಾಯಿತು.
ಹಿರೇಶಕುನ ಗ್ರಾಮಸ್ಥರು ರಥ ಕಟ್ಟುವ ಕಾರ್ಯ ಹಾಗೂ ಹಳೇ ಸೊರಬ ಗ್ರಾಮಸ್ಥರು ಚಪ್ಪರ ಸೇವೆ, ಸೊಪ್ಪಿನ ಕೇರಿಯ ದೇವಾಂಗ ಸಮುದಾಯದವರು ಹಾಗೂ ಮಡಿವಾಳ ಸಮುದಾಯದವರು ಪೂಜಾ ಕಾರ್ಯ ಮತ್ತು ಪಲ್ಲಕ್ಕಿ ಉತ್ಸವಕ್ಕೆ ಸಹಕಾರ ನೀಡಿದರು.