Education Department ಎಲ್‌ಕೆಜಿ ದಾಖಲಾತಿಗೆ 4 ವರ್ಷ ಪೂರ್ಣಗೊಂಡಿರಲೇ ಬೇಕು ಎಂಬ ಹೊಸ ನಿಯಮ ಪಾಲಕರನ್ನು ಚಿಂತೆಗೀಡು ಮಾಡಿದೆ.
ಹೀಗಾಗಿ ಕೆಲವು ಪೋಷಕರು ದಾಖಲೆ ಪತ್ರದಲ್ಲಿ ಮಗುವಿನ ಜನ್ಮ ದಿನಾಂಕವನ್ನೇ ಬದಲಿಸಲು ಮುಂದಾಗಿದ್ದಾರೆ. ಇನ್ನು ಕೆಲವರು ಮಕ್ಕಳು ಒಂದು ವರ್ಷದ ಭವಿಷ್ಯ ಹಾಳಾಗಲಿದೆ ಎಂದು ಬೇಸರ ವ್ಯಕ್ತಪಡಿಸತೊಡಗಿದ್ದಾರೆ.
2024-25ನೇ ಸಾಲಿನಲ್ಲಿ ಎಲ್‌ಕೆಜಿಗೆ ದಾಖಲಾಗುವ ಮಗುವಿಗೆ 4 ವರ್ಷ ಹಾಗೂ ಯುಕೆಜಿಗೆ ದಾಖಲಾಗು ವವರಿಗೆ 5 ವರ್ಷ ಪೂರ್ಣ ತುಂಬಿರಬೇಕು. 1ನೇ ತರಗತಿಗೆ ದಾಖಲಾಗುವ ಮಗುವಿಗೆ 5.7 (ಐದು ವರ್ಷ ಏಳು ತಿಂಗಳು) ವರ್ಷ ತುಂಬಿದರೆ ಸಾಕು (ಗರಿಷ್ಠ 7 ವರ್ಷ ಮೀರುವಂತಿಲ್ಲ). 2025-26ನೇ ಸಾಲಿನಲ್ಲಿ 1ನೇ ತರಗತಿಗೆ ದಾಖಲಾಗುವ ಮಗುವಿಗೆ 6 ವರ್ಷ ತುಂಬಿರಲೇ ಬೇಕು ಎಂಬ ಸರಕಾರದ ನಿಯಮ ಕೆಲವು ಮಕ್ಕಳ ಪಾಲಕ, ಪೋಷಕರನ್ನು ಕಂಗೆಡಿಸಿದೆ.
Education Department ಅದರಲ್ಲೂ 2020ರ ಬಳಿಕ ಜೂನ್, ಜುಲೈ, ಆಗಸ್ಟ್‌ನಲ್ಲಿ ಹುಟ್ಟಿದ ಮಕ್ಕಳಿಗೆ ಸಮಸ್ಯೆ ಎದುರಾಗುತ್ತಿದೆ. 3.10 ವರ್ಷ, 3.11ವರ್ಷ ಮಾತ್ರವಲ್ಲದೆ 4 ವರ್ಷಕ್ಕೆ ಕೇವಲ 10-15 ದಿನ ಕಡಿಮೆ ಇದ್ದರೂ ಎಲ್ ಕೆಜಿಗೆ ಸೇರಲು ಸಾಧ್ಯವಾಗುವುದಿಲ್ಲ. ಇದರಿಂದ ಒಂದು ವರ್ಷ ವ್ಯರ್ಥವಾಗಲಿದೆ ಎನ್ನುವ ಆತಂಕ ಪೋಷಕರದ್ದು. ಜನ್ಮ ದಿನಾಂಕವನ್ನೇ ತಿದ್ದಿ ಮೂಲಕ ಮಕ್ಕಳನ್ನು ಶಾಲೆಗೆ ಸೇರಿಸಲು ಯೋಚಿಸುತ್ತಿದ್ದಾರೆ.
ಎಸೆಸೆಲ್ಸಿ ಪರೀಕ್ಷೆಗೆ ಸಮಸ್ಯೆ
ಕೆಲವು ಶಿಕ್ಷಣ ಸಂಸ್ಥೆಗಳು ಸರಕಾರದ ನಿಯಮವನ್ನು ಅನಿವಾರ್ಯವಾಗಿ ಪಾಲಿಸಲು ತೊಡಗಿದ್ದರೆ ಇನ್ನು ಕೆಲವು ಸಂಸ್ಥೆಗಳು 4 ವರ್ಷ ಪೂರ್ಣಗೊಳ್ಳದ ಮಕ್ಕಳನ್ನು ಕೂಡ ಎಲ್‌ಕೆಜಿಗೆ ಸೇರಿಸಿಕೊಳ್ಳುತ್ತಿವೆ.
ಈಗಿನ ನಿಯಮದ ಪ್ರಕಾರ 10ನೇ ತರಗತಿ ಪರೀಕ್ಷೆ ಬರೆಯಲು 15 ವರ್ಷ ಆಗಿರಬೇಕು. ಈಗ 4 ವರ್ಷ ತುಂಬಿರದ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಂಡರೆ ಅವರು ಎಸೆಸೆಲ್ಸಿ ಪರೀಕ್ಷೆ ಬರೆಯುವಾಗ ಸಮಸ್ಯೆ ಎದುರಾಗಲಿದೆ. ಹೀಗಾಗಿ ಬಹುತೇಕ ಶಾಲೆಗಳು ಭವಿಷ್ಯದಲ್ಲಿ ಮಕ್ಕಳಿಗೆ ಆಗಬಹುದಾದ ಸಮಸ್ಯೆಯನ್ನು ಪೋಷಕರಿಗೆ ಮನದಟ್ಟು ಮಾಡಿಕೊಡಲು ಪ್ರಯತ್ನಿಸುತ್ತಿವೆ. ಸರಕಾರದ ಈ ನಿಯಮವನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು, ತೀರ್ಪಿಗಾಗಿ ಕಾಯುವಂತಾಗಿದೆ.