Department of School Education ರಾಜ್ಯದ ಎಲ್ಲಾ ಶಾಲೆಗಳ 5, 8 ಹಾಗೂ 9 ನೇ ತರಗತಿಯ ವಿದ್ಯಾರ್ಥಿಗಳನ್ನು ಮುಂದಿನ ಶೈಕ್ಷಣಿಕ ತರಗತಿಯಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ.ಕಾವೇರಿ ಆದೇಶ ಹೊರಡಿಸಿದ್ದು, “ಮಕ್ಕಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಶಾಲೆಗಳಲ್ಲಿ ನಡೆದಿರುವ ಪರೀಕ್ಷೆಗಳ ಮೌಲ್ಯಾಂಕನ ಆಧರಿಸಿ ಮುಂದಿನ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುವಂತೆ” ಸೂಚಿಸಿದ್ದಾರೆ.
2023–24ನೇ ಸಾಲಿನ ಫಲಿತಾಂಶವನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಏಪ್ರಿಲ್ 8 ರಂದು ಪ್ರಕಟಿಸುವಂತೆ ಈ ಹಿಂದೆ ಆದೇಶಿಸಲಾಗಿತ್ತು. ಆದರೆ, ಫಲಿತಾಂಶ ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಇನ್ನೂ ಫಲಿತಾಂಶ ಪ್ರಕಟಗೊಂಡಿಲ್ಲ.
ಪ್ರಸ್ತುತ 2023-24ನೇ ಸಾಲಿನ ಶೈಕ್ಷಣಿಕ ವರ್ಷ ಅಂತ್ಯಗೊಳ್ಳುತ್ತಿದ್ದು, ಇದೇ ಮೇ 29 ರಿಂದ 2024-25ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. 2023-24 ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ 5, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸದೇ ಇದ್ದಿದ್ದರಿಂದ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ತರಗತಿಗೆ ಪ್ರವೇಶ, ದಾಖಲಾತಿ, ಪ್ರವೇಶ ಶುಲ್ಕ ಪಾವತಿ ಹಾಗೂ ಬೇರೆ ಸ್ಥಳಗಳಿಗೆ ವರ್ಗಾವಣೆಗೆ ಪ್ರಮಾಣ ಪತ್ರ, ಪ್ರಗತಿ ಪತ್ರ, ವ್ಯಾಸಂಗ ಪ್ರಮಾಣ ಪತ್ರ ವಿತರಿಸಲು ಶಾಲೆಗಳಿಗೆ ಸಾಧ್ಯವಾಗಿರಲಿಲ್ಲ.
Department of School Education ಹಾಗಾಗಿ, ಮಕ್ಕಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಶಾಲೆಗಳಲ್ಲಿ ನಡೆದಿರುವ ಪರೀಕ್ಷೆಗಳ ಮೌಲ್ಯಾಂಕನ ಆಧರಿಸಿ ಮುಂದಿನ ತರಗತಿಯಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸುವಂತೆ ಆದೇಶಿಸಲಾಗಿದೆ.
ನ್ಯಾಯಾಲಯದ ಮಧ್ಯಂತರ ತೀರ್ಪಿನಂತೆ, 2023-24 ನೇ ಸಾಲಿನ 5, 8 ಮತ್ತು 9 ನೇ ತರಗತಿ SA-2 ಮೌಲ್ಯಾಂಕನವನ್ನು ತಡೆಹಿಡಿದಿರುವ ಹಿನ್ನೆಲೆ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈಗಾಗಲೇ ಶಾಲೆಗಳಲ್ಲಿ ನಡೆದಿರುವ FA- 1, FA-2, FA-3, FA-4 ಮತ್ತು SA-1 ಮೌಲ್ಯಾಂಕನದ ಆಧಾರದ ಮೇಲೆ ತರಗತಿಗೆ ಮುಂದುವರೆಸಲು ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ