Rain in Shivamogga ಮಲೆನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಚುರುಕುಗೊಂಡಿರುವ ಮುಂಗಾರು ಪೂರ್ವ ಮಳೆ ಮತ್ತಷ್ಟು ಬಿರುಸುಗೊಂಡಿದೆ. ಹಲವೆಡೆ ಮಳೆಯ ಅಬ್ಬರ ಜೋರಾಗಿದೆ.
ಈ ನಡುವೆ ಶಿವಮೊಗ್ಗ ನಗರದಲ್ಲಿಯೂ ವರ್ಷಧಾರೆ ಮುಂದುವರಿದಿದೆ. ಭಾನುವಾರ ಮಧ್ಯಾಹ್ನ ನಗರ ವ್ಯಾಪ್ತಿ ಸೇರಿದಂತೆ ಹೊರವಲಯದ ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಸರಿಸುಮಾರು 1 ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆಯಾಯಿತು.
ಎಡೆಬಿಡದೆ ಸುರಿದ ಮಳೆಯಿಂದ ಹಲವೆಡೆ ರಸ್ತೆಗಳು ಕೆರೆಯಂತಾಗಿ ಪರಿವರ್ತಿತವಾಗಿದ್ದವು. ಹಲವೆಡೆ ಚರಂಡಿಗಳಲ್ಲಿ ಸರಾಗವಾಗಿ ಮಳೆ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಯ ಮೇಲೆಯೇ ಹರಿದು ಹೋಗುತ್ತಿದ್ದ ದೃಶ್ಯ ಕಂಡುಬಂದಿತು.
ಜೈಲ್ ರಸ್ತೆಯ ಮೇಲೆಯೇ ಭಾರೀ ಪ್ರಮಾಣದ ಮಳೆ ನೀರು ಹರಿಯಿತು. ಇದರಿಂದ ತಗ್ಗು ಪ್ರದೇಶಗಳಲ್ಲಿನ ಕಟ್ಟಡಗಳಿಗೆ ನೀರು ನುಗ್ಗಿದ ಮಾಹಿತಿಗಳು ಬಂದಿವೆ.
ಕೆರೆಗಳಿಗೆ ನೀರು :
Rain in Shivamogga ತೀವ್ರ ಸ್ವರೂಪದ ಬಿಸಿಲು ಹಾಗೂ ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯ ಹಲವೆಡೆ ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಿದ್ದವು. ಆದರೆ ಪ್ರಸ್ತುತ ಬೀಳುತ್ತಿರುವ ಭಾರೀ ಮಳೆಯಿಂದ ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಕಂಡುಬರಲಾರಂಭಿಸಿದೆ.
ಮುನ್ಸೂಚನೆ :
ಮುಂದಿನ ಕೆಲ ದಿನಗಳವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಹಲವು ತಿಂಗಳುಗಳಿಂದ ವರ್ಷಧಾರೆ ಕಣ್ಮರೆಯಾಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಮುಂಗಾರು ಪೂರ್ವ ಮಳೆಯು ನಾಗರೀಕರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.