Department of Food Technology and Quality Control ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯು ಎರಡು ಭಾರತೀಯ ಮಸಾಲೆ ಬ್ರಾಂಡ್‌ಗಳಾದ ಎವರೆಸ್ಟ್ ಮತ್ತು ಎಂಡಿಎಂಹೆಚ್‌ಗಳ ಆಮದು, ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಅಲ್ಲದೆ ಈ ಮಸಾಲೆಗಳಲ್ಲಿನ ಎಥಿಲೀನ್ ಆಕ್ಸೈಡ್ ಮಟ್ಟವನ್ನು ಪರೀಕ್ಷಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಉತ್ಪನ್ನಗಳಲ್ಲಿ ಹೆಚ್ಚಿನ ಮಟ್ಟದ ಎಥಿಲೀನ್ ಆಕ್ಸೈಡ್ ಕುರುಹುಗಳ ಬಗ್ಗೆ ಸುದ್ದಿಯಾದ ನಂತರ ನೇಪಾಳ ಈ ಎರಡು ಮಸಾಲೆ ಬ್ರಾಂಡ್‌ಗಳನ್ನು ನಿಷೇಧಿಸಿದೆ.
ಎವರೆಸ್ಟ್ ಮತ್ತು ಎಂಡಿಹೆಚ್ ಬ್ರಾಂಡ್ ಮಸಾಲೆಗಳಲ್ಲಿ ಹಾನಿಕಾರಕ ರಾಸಾಯನಿಕಗಳ ಕುರುಹುಗಳ ಬಗ್ಗೆ ಸುದ್ದಿ ಬಂದ ನಂತರ ಒಂದು ವಾರದ ಹಿಂದೆ ಅವುಗಳ ಆಮದು ಮತ್ತು ಮಾರಾಟವನ್ನು ನಿಷೇಧಿಸಿದ್ದೇವೆ ಎಂದು ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯ ವಕ್ತಾರ ಮೋಹನ್ ಕೃಷ್ಣ ಮಹಾರ್ಜನ್ ಅವರು ಎಎನ್‌ಐಗೆ ದೂರವಾಣಿಯಲ್ಲಿ ಹೇಳಿದ್ದಾಗಿ ವರದಿಯಾಗಿದೆ.
“ಈ ಎರಡು ನಿರ್ದಿಷ್ಟ ಬ್ರಾಂಡ್‌ಗಳ ಮಸಾಲೆಗಳ ರಾಸಾಯನಿಕಗಳ ಪರೀಕ್ಷೆಗಳು ನಡೆಯುತ್ತಿವೆ. ಅಂತಿಮ ವರದಿ ಬರುವವರೆಗೆ ನಿಷೇಧವು ಜಾರಿಯಲ್ಲಿರುತ್ತದೆ. ಹಾಂಗ್ ಕಾಂಗ್ ಮತ್ತು ಸಿಂಗಾಪುರವು ಈಗಾಗಲೇ ಈ ಮಸಾಲೆಗಳನ್ನು ನಿಷೇಧಿಸಿವೆ” ಎಂದು ಮಹಾರ್ಜನ್ ಹೇಳಿದ್ದಾರೆ.
ಎಥಿಲೀನ್ ಆಕ್ಸೈಡ್ ಬಳಕೆಯನ್ನು ವಿವಿಧ ದೇಶಗಳಲ್ಲಿ ಶೇಕಡಾ 0.73 ರಿಂದ ಶೇಕಡಾ 7 ರವರೆಗೆ ಅನುಮತಿಸಲಾಗಿದೆ ಎಂದು ಭಾರತ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಹೇಳಿದೆ.
Department of Food Technology and Quality Control ಎವರೆಸ್ಟ್ ಮತ್ತು ಎಂಡಿಹೆಚ್ ಮಸಾಲೆಗಳನ್ನು ನ್ಯೂಜಿಲೆಂಡ್, ಅಮೆರಿಕ, ಆಸ್ಟ್ರೇಲಿಯಾ ದೇಶಗಳಲ್ಲಿಯೂ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಮಧ್ಯ ಪೂರ್ವ ದೇಶಗಳು ಸೇರಿ ಹಲವು ದೇಶಗಳಿಗೆ ಭಾರತ ಮೂಲದ ಎಂಡಿಹೆಚ್ ಹಾಗೂ ಎವರೆಸ್ಟ್ ಪದಾರ್ಥಗಳನ್ನು ರಫ್ತು ಮಾಡಲಾಗುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಹಾಂಕಾಂಗ್ ಹಾಗೂ ಸಿಂಗಾಪುರ ದೇಶಗಳು ಈ ಉತ್ಪನ್ನಗಳನ್ನು ನಿಷೇಧಿಸಿದ್ದವು.