Tuesday, October 1, 2024
Tuesday, October 1, 2024

Covaxin Vaccine ಕೋವ್ಯಾಕ್ಸೀನ್ ಲಸಿಕೆ ಅಡ್ಡ ಪರಿಣಾಮ ಶಂಕೆ, ಈರ್ವರು ವ್ಯಕ್ತಿಗಳ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆಯ ನಿಗಾ

Date:

Covaxin Vaccine ಕೋವಿಶೀಲ್ಡ್ ಅಡ್ಡಪರಿಣಾಮಗಳ ಕುರಿತು ಸ್ವತಃ ಅಸ್ಟ್ರಾಜೆನಿಕಾ ಕಂಪನಿಯು ಒಪ್ಪಿಕೊಂಡಿದ್ದರ ಬೆನ್ನಲ್ಲೇ ಇದೀಗ ಕೋವಾಕ್ಸಿನ್‌ ಲಸಿಕೆಯಿಂದಲೂ ಅಡ್ಡ ಪರಿಣಾಮಗಳಾಗಿವೆ ಎಂಬ ಅಂಶವನ್ನು ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಅಧ್ಯಯನ ವರದಿ ಹೊರಗೆಡವಿದೆ.
ಈ ಬೆಳವಣಿಗೆ ನಡುವೆಯೇ ರಾಜ್ಯದ ಸಾಗರ ತಾಲೂಕಿನ ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಬ್ಬರಿಗೂ ಕೋವಾಕ್ಸಿನ್‌ ಲಸಿಕೆ ಅಡ್ಡ ಪರಿಣಾಮಗಳು ಆಗಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ.
ಕೋವ್ಯಾಕ್ಸಿನ್‌ ಲಸಿಕೆ ಪಡೆದು 6 ದಿನಗಳವರೆಗೆ ಆರೋಗ್ಯವಾಗಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದ ಮನುಚಂದ್ರ ಎಂಬ ವಿದ್ಯಾರ್ಥಿಗೆ ಏಳನೇ ದಿನಕ್ಕೆ ಕಾಲು ಬಾವು ಕಾಣಿಸಿಕೊಂಡಿತ್ತು. ಇದಾಗಿ 4 ದಿನಗಳ ನಂತರ ಮೂತ್ರ ವಿಸರ್ಜನೆಯೂ ನಿಂತಿತ್ತು ಎಂದು ಆರೋಗ್ಯ ಮತ್ತು ಕುಟುಂಬ ಸೇವೆಗಳ ನಿರ್ದೇಶನಾಲಯದ ಉಪ ನಿರ್ದೇಶಕ (ಲಸಿಕೆ)ರು ನೀಡಿದ್ದ ವರದಿಗೀಗ ಮಹತ್ವ ಬಂದಂತಾಗಿದೆ.
ಕೈಕಾಲು ಸ್ವಾಧೀನ ಕಳೆದುಕೊಂಡಿರುವುದಕ್ಕೆ ಕೋವ್ಯಾಕ್ಸಿನ್‌ ಲಸಿಕೆ ಪಡೆದಿರುವುದು ಕಾರಣವೇ ಅಥವಾ ಇಲ್ಲವೇ ಎಂಬುದನ್ನು ರಾಷ್ಟ್ರಮಟ್ಟದಲ್ಲಿ ಚರ್ಚಿಸಿ ನಿರ್ಣಯಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿರ್ಧರಿಸಿತ್ತು. ಹೀಗಾಗಿ ಲಸಿಕೆಯ ಅಡ್ಡ ಮತ್ತು ವ್ಯತಿರಿಕ್ತ ಪರಿಣಾಮಗಳ ಕುರಿತು ನಿರ್ಣಯ ಕೈಗೊಳ್ಳುವ ಸಂಬಂಧ ರಾಜ್ಯದ ಪ್ರಕರಣವನ್ನು ಹಿಂದಿನ ಬಿಜೆಪಿ ಸರ್ಕಾರವು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿದಿತ್ತು. ಇದಕ್ಕೆ ಸಂಬಂಧಿಸಿದಂತೆ ಸಮಗ್ರ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.
ಆದರೆ ಅಂತಿಮ ವರದಿಯನ್ನು ಹಿಂದಿನ ಬಿಜೆಪಿ ಸರ್ಕಾರವು ಬಹಿರಂಗಗೊಳಿಸಲಿಲ್ಲ. ಅಂದು ಸಚಿವರಾಗಿದ್ದ ಡಾ ಕೆ ಸುಧಾಕರ್‍‌ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ.
ಈ ಪ್ರಕರಣದ ಕುರಿತು ಸಚಿವ ದಿನೇಶ್‌ ಗುಂಡೂರಾವ್‌ ಅವರು ಅಧಿಕಾರಿಗಳೊಂದಿಗೆ ಪ್ರಾಥಮಿಕವಾಗಿ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಹಾಗೆಯೇ ಲಸಿಕೆ ಅಡ್ಡ/ವ್ಯತಿರಿಕ್ತ ಪರಿಣಾಮದಿಂದ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಾಯ ಮತ್ತು ವೈದ್ಯಕೀಯ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಈಗಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ವಿದ್ಯಾರ್ಥಿಗಳ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಆರೋಗ್ಯ ಇಲಾಖೆಯು ಭರಿಸಿರುವುದು ಗೊತ್ತಾಗಿದೆ.
ಬಾಧಿತ ವಿದ್ಯಾರ್ಥಿಗಳಿಬ್ಬರ ತಾಯಿ ಶಾಂತಿಬಾಯಿ ಅವರಿಗೆ ಎಣ್ಣೆಕೊಪ್ಪದದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಗ್ರೂಪ್‌ ಡಿ ಹುದ್ದೆ ನೀಡಲಾಗಿದೆ. ಮತ್ತು ವಿದ್ಯಾರ್ಥಿಗಳಿಬ್ಬರ ವೈದ್ಯಕೀಯ ಪರಿಸ್ಥಿತಿಯನ್ನು ಅನವಟ್ಟಿಯ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಯು ಗಮನಿಸುತ್ತಿದ್ದಾರೆ ಎಂದು ಗೊತ್ತಾಗಿದೆ

ವರದಿಯ ಪೂರ್ಣ ವಿವರ

Covaxin Vaccine ಸಾಗರ ತಾಲೂಕು ಆವಿನಹಳ್ಳಿಯ ಜೋಸೆಫ್‌ ನಗರದಲ್ಲಿನ ಅಟಲ್‌ ಬಿಹಾರಿ ವಾಜೇಪೇಯಿ ವಸತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮನುಚಂದ್ರ (16) ಎಂಬಾತನಿಗೆ 2022ರ ಜನವರಿ 12ರಂದು ಕೋವಾಕ್ಸಿನ್‌ ಲಸಿಕೆ ನೀಡಲಾಗಿತ್ತು. ಆ ದಿನದಂದು ಕೋವ್ಯಾಕ್ಸಿನ್‌ (ಬ್ಯಾಚ್‌ನಂ;37ಎಚ್‌21153ಎ, ಎಫ್‌ಎಫ್‌ಜಿ 11/2021. EXP DATE 10/2022) ಲಸಿಕೆ ನೀಡಲಾಗಿತ್ತು. ಇದೇ ಲಸಿಕೆಯನ್ನು 84 ಮಕ್ಕಳಿಗೂ ನೀಡಲಾಗಿತ್ತು. ಮನುಚಂದ್ರ ಅವರನ್ನು ಹೊರತುಪಡಿಸಿ ಉಳಿದ 83 ಮಕ್ಕಳು ಆರೋಗ್ಯದಿಂದಿರುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಲಸಿಕೆ ಪಡೆದ 6 ದಿನಗಳ ಕಾಲ ಮನುಚಂದ್ರ ಅವರು ಯಾವುದೇ ರೋಗ ಲಕ್ಷಣಗಳು/ಅಡ್ಡಪರಿಣಾಮಗಳು ಇಲ್ಲದೇ ಆರೋಗ್ಯವಾಗಿದ್ದರು. 2022ರ ಜನವರಿ 18ರಂದು ಇವರಿಗೆ ಕಾಲು ಭಾವು ಕಾಣಿಸಿಕೊಂಡಿದ್ದು, ಸಾಗರ ಉಪ ವಿಭಾಗ ಆಸ್ಪತ್ರೆಯಲ್ಲಿ ಹೊರವಿಭಾಗ ರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. 2022ರ ಜನವರಿ 22ರಂದು ಮೂತ್ರ ವಿಸರ್ಜನೆ ನಿಂತಿದ್ದರಿಂದ ಪುನಃ ಸಾಗರ ಉಪ ವಿಭಾಗ ಆಸ್ಪತ್ರೆಯಲ್ಲಿ ಒಳ ವಿಭಾಗ ರೋಗಿಯಾಗಿ ದಾಖಲಾಗಿದ್ದರು. ದಾಖಲಾದ ಸಮಯದಲ್ಲಿ ಮನುಚಂದ್ರ ಬಿಪಿ 123/60mmhg ಮತ್ತು ರಕ್ತ ಪರೀಕ್ಷೆ ವರದಿ ಹಾಗೂ ಇತರ ಪರೀಕ್ಷೆಗಳ ರಿಪೋರ್ಟ್‌ ನಾರ್ಮಲ್‌ ಇತ್ತು. ಅಲ್ಲದೆ ಜೀವನಿರೋಧಕ, ಐವಿ ಫ್ಲ್ಯೂಡ್ಸ್‌ನಿಂದ ಚಿಕಿತ್ಸೆ ನೀಡಲಾಗಿತ್ತು ಎಂದು ವರದಿಯಲ್ಲಿ ವಿವರಿಸಿದ್ದಾರೆ.
2022ರ ಜನವರಿ 23ರಂದು ಪೋಷಕರು ಮನುಚಂದ್ರ ಅವರನ್ನು ವೈದ್ಯಕೀಯ ಸಲಹೆ ವಿರುದ್ಧ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಸ್ವಂತ ಊರಾದ ಎಣ್ಣೆಕೊಪ್ಪಕ್ಕೆಗೆ ಕರೆದೊಯ್ದಿದ್ದರು. ಆ ನಂತರ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ್ದರಲ್ಲದೆ ಕಿಡ್ನಿ ಸಮಸ್ಯೆ ಇದೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದರು. ವೈದ್ಯರ ಸೂಚನೆ ಮೇರೆಗೆ ಮೆಗ್ಗಾನ್‌ ಆಸ್ಪತ್ರೆಯಲ್ಲಿ 2022ರ ಜನವರಿ 24ರಂದು ದಾಖಲಾಗಿ, ಆ ನಂತರ ನಂಜಪ್ಪ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದು ವರದಿಯಲ್ಲಿ ಚಿಕಿತ್ಸೆ ವಿವರಗಳ ಮಾಹಿತಿ ಒದಗಿಸಿದ್ದಾರೆ.
ನಂಜಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಕಾಲಿನ ಬಾವಿನ ಜತೆಯಲ್ಲಿ ದೇಹದ ಇತರೆ ಭಾಗಗಳು ಬಾವು ಬಂದಿದೆ ಮತ್ತು ಇತರೆ ವೈಟಲ್ಸ್‌ ಆದ ಬಿ ಪಿ , ಪಲ್ಸ್‌ ರೇಟ್‌, ಸ್ಯಾಚುರೇಷನ್‌, ನಾರ್ಮಲ್‌ ಇದೆ ಎಂದು ಆಸ್ಪತ್ರೆಯ ವರದಿಯಲ್ಲಿ ದಾಖಲಾಗಿದೆ. ಆ ನಂತರ ಮನುಚಂದ್ರ ಅವರಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿತ್ತು. ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಮೆಗ್ಘಾನ್‌ ಬೋಧನಾ ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿತ್ತು. ಆದರೆ ಅವರ ತಂದೆ, ತಾಯಿ ಇಂದಿರಾಗಾಂಧಿ ಸರ್ಕಾರಿ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಲ್ಲದೆ ಅಲ್ಲಿ ಒಳ ರೋಗಿಯಾಗಿ ದಾಖಲು ಮಾಡಿದ್ದರು ಎಂಬ ಮಾಹಿತಿ ವರದಿಯಿಂದ ತಿಳಿದು ಬಂದಿದೆ.

2022ರ ಫೆ.14ರಂದು ಜಿಲ್ಲಾ ಎಎಎಫ್‌ಐ ಸಮಿತಿಯು ಸದಸ್ಯರೊಂದಿಗೆ ಈ ಕುರಿತು ಸಭೆ ನಡೆಲಾಗಿತ್ತು. ಲಭ್ಯವಿದ್ದ ಎಲ್ಲಾ ದಾಖಲೆಗಳನ್ನು ಪರಿಸೀಲಿಸಿದ ನಂತರ ಮನುಚಂದ್ರ ಅವರಲ್ಲಿ ಅಕ್ಯೂಟ್‌ ರೆನಲ್‌ ಫೈಲ್ಯೂರ್‌/ನೆಫ್ರೋಟಿಕ್‌ ಸಿಂಡ್ರೋಮ್‌ ರೋಗ ಲಕ್ಷಣಗಳು ಕಂಡುಬಂದಿದೆ ಎಂದು ತೀರ್ಮಾನ ಮಾಡಲಾಗಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.
‘ಲಸಿಕಾಕರಣದ ನಂತರ ಯಾವುದೇ ತೀವ್ರ ಮತ್ತು ಗಂಭೀರ ಎಇಎಫ್‌ಐ ಪ್ರಕರಣಗಳು ವರದಿಯಾದ ತಕ್ಷಣವೇ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಜಿಲ್ಲಾಮಟ್ಟದ ಎಇಎಫ್‌ಐ ಸಮಿತಿ ಸಭೆ ನಡೆಸಬೇಕು ಮತ್ತು ಸಂಬಂಧಪಟ್ಟ ವರದಿಯನ್ನು ರಾಜ್ಯಮಟ್ಟಕ್ಕೆ ಸಲ್ಲಿಸಬೇಕು,’ ಎಂದು ಸೂಚಿಸಲಾಗಿತ್ತು ಎಂಬುದು ತಿಳಿದು ಬಂದಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...