Mamata Banerjee ಕೇಂದ್ರದಲ್ಲಿ ಸರ್ಕಾರ ರಚಿಸಲು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ತಮ್ಮ ಪಕ್ಷವು ಬಾಹ್ಯ ಬೆಂಬಲ ನೀಡಲಿದೆ ಪ.ಬಂಗಾಳ ಸಿಎಂ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಹೂಗ್ಲಿಯ ಚಿನ್ಸುರಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಗಿಳಿದ ತಕ್ಷಣ ಸಿಎಎ, ಎನ್‌ಆರ್‌ಸಿ ಮತ್ತು ಯುಸಿಸಿಯನ್ನು ರದ್ದುಗೊಳಿಸುವುದಾಗಿ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗಳಿಸುವ ಬಿಜೆಪಿಯ ಗುರಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಜನರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಎಂದು ಹೇಳಿದ್ದಾರೆ.
400 ಸೀಟು ಗೆಲ್ಲುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ, ಆದರೆ ಜನ ಇದು ನಡೆಯುವುದಿಲ್ಲ ಎಂದು ಹೇಳುತ್ತಿದ್ದಾರೆ. ಬಿಜೆಪಿ ಕಳ್ಳರಿಂದ ತುಂಬಿರುವ ಪಕ್ಷ ಎಂದು ಇಡೀ ದೇಶವೇ ಅರ್ಥ ಮಾಡಿಕೊಂಡಿದೆ. ಕೇಂದ್ರದಲ್ಲಿ ಸರ್ಕಾರ ರಚಿಸಲು ನಾವು ಹೊರಗಿನಿಂದ ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸುತ್ತೇವೆ. ಆದ್ದರಿಂದ ಪಶ್ಚಿಮ ಬಂಗಾಳದಲ್ಲಿ, ನಮ್ಮ ತಾಯಂದಿರು ಮತ್ತು ಸಹೋದರಿಯರು ಎಂದಿಗೂ ಸಮಸ್ಯೆಯನ್ನು ಎದುರಿಸುವುದಿಲ್ಲ, 100 ದಿನಗಳ ಉದ್ಯೋಗ ಯೋಜನೆಯಲ್ಲಿ ಕೆಲಸ ಮಾಡುವವರು ಸಹ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಹೇಳಿದ್ದಾರೆ.
ತಮ್ಮ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಐ(ಎಂ)ನ್ನು ಬೆಂಬಲಿಸುವುದಿಲ್ಲ. ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಈ ಎರಡೂ ಪಕ್ಷಗಳು ರಾಜ್ಯದಲ್ಲಿ ಬಿಜೆಪಿಗೆ ಸಹಾಯ ಮಾಡುತ್ತಿವೆ. ಬಂಗಾಳದಲ್ಲಿ ಸಿಪಿಐ(ಎಂ) ಮತ್ತು ಕಾಂಗ್ರೆಸ್‌ನ್ನು ಲೆಕ್ಕಿಸಬೇಡಿ. ಅವರು ನಮ್ಮೊಂದಿಗಿಲ್ಲ, ಇಲ್ಲಿ ಬಿಜೆಪಿ ಜೊತೆಗಿದ್ದಾರೆ. ನಾನು ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
2004ರ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋಲನ್ನು ಸ್ಮರಿಸಿದ ಬ್ಯಾನರ್ಜಿ, ಬಿಜೆಪಿಯ ‘ಇಂಡಿಯಾ ಶೈನಿಂಗ್’ ಘೋಷಣೆಯ ಹೊರತಾಗಿಯೂ 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಸೋಲನ್ನು ಕಂಡಿದ್ದರು. ಈ ಸೋಲನ್ನು ಯಾರೂ ಊಹಿಸಿರಲಿಲ್ಲ. ಜನರು ಅವರಿಗೆ ಮತ ಹಾಕಿರಲಿಲ್ಲ ಎಂದು ಹೇಳಿದ್ದಾರೆ.
ಎರಡು ತಿಂಗಳ ಅವಧಿಯಲ್ಲಿ ಏಳು ಹಂತಗಳಲ್ಲಿ ಚುನಾವಣೆಯನ್ನು ನಿಗದಿಪಡಿಸಿದ್ದಕ್ಕಾಗಿ ಚುನಾವಣಾ ಆಯೋಗವನ್ನು ಟೀಕಿಸಿದ ಮಮತಾ ಬ್ಯಾನರ್ಜಿ, ಈ ನಿರ್ಧಾರವು ಕೇಸರಿ ಪಕ್ಷಕ್ಕೆ ಅನುಕೂಲಕರವಾಗಿದೆ ಮತ್ತು ಅತಿಯಾದ ತಾಪಮಾನದಿಂದ ಸಾಮಾನ್ಯ ಜನರು ಎದುರಿಸುತ್ತಿರುವ ಕಷ್ಟಗಳನ್ನು ಕಡೆಗಣಿಸಿದ್ದಾರೆ. ಚುನಾವಣಾ ಆಯೋಗವು ಕೈಗೊಂಬೆಯಾಗಿದ್ದು, ಮೋದಿಯವರ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತದೆ. ಎರಡೂವರೆ ತಿಂಗಳಿನಿಂದ ಚುನಾವಣೆ ನಡೆಯುತ್ತಿದೆ, ಚುನಾವಣಾ ಅಧಿಕಾರಿಗಳು ಎಂದಾದರೂ ಜನಸಾಮಾನ್ಯರ ಕಷ್ಟಗಳನ್ನು ಅರಿತುಕೊಂಡಿದ್ದೀರಾ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
Mamata Banerjee 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಯೋಜನೆಯನ್ನು ವಿಸ್ತರಿಸುವ ಯೋಜನೆಗಳನ್ನು ಘೋಷಿಸುವ ಮೂಲಕ ಮೋದಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ್ದಾರೆ. ಚುನಾವಣೆ ನಡೆಯುತ್ತಿರುವಾಗ ಈಗ ಯಾಕೆ ಹೀಗೆ ಹೇಳುತ್ತಿದ್ದೀರಿ? ನೀವು ಇದನ್ನು ಮೊದಲೇ ಘೋಷಿಸಬೇಕಿತ್ತು, ಮೋದಿ ಅವರೇ, ನೀವು ಚುನಾವಣಾ ನೀತಿ ಸಂಹಿತೆಯ್ನು ಉಲ್ಲಂಘಿಸುತ್ತಿದ್ದೀರಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.