Lok Sabha Election ವಿಶ್ವದ ಎಲ್ಲ ದೇಶಗಳಿಗಿಂತ ಭಾರತ ದೇಶದ ಚುನಾವಣಾ ಆಯೋಗವು ತುಂಬಾ ವ್ಯವಸ್ಥಿತವಾಗಿ ನಡೆಸುತ್ತದೆ ಎಂದು ಕೈಗಾರಿಕೋದ್ಯಮಿ ಹಾಗೂ ಸುರಭಿ ಗೋಶಾಲೆ ಪ್ರಮುಖರಾದ ಕೆ.ಸಿ.ನಟರಾಜ ಭಾಗವತ್ ಅನಿಸಿಕೆ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರದ ಗೋಪಾಳಗೌಡ ಬಡಾವಣೆಯ ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಗೋಪಾಳಗೌಡ ಬಡಾವಣೆ ನಿವಾಸಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಚುನಾವಣಾ ಜಾಗೃತಿ ಉಪನ್ಯಾಸ ಮತ್ತು ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಮತದಾನದ ಮಹತ್ವ ವಿಷಯ ಕುರಿತು ಮಾತನಾಡಿದರು.
ದೇಶದ ಆರ್ಥಿಕ ವ್ಯವಸ್ಥೆ ಹಾಗೂ ಉತ್ತಮ ನೆಮ್ಮದಿಯ ಜೀವನ ಸಾಗಿಸಲು, ನಮ್ಮನ್ನು ರಕ್ಷಣೆ ಮಾಡಿ ವ್ಯವಸ್ಥಿತವಾದ ಸರ್ಕಾರ ನಿರ್ಮಾಣ ಮಾಡಲು, ಯೋಗ್ಯ ವ್ಯಕ್ತಿ ಆಯ್ಕೆ ಮಾಡಿ ಪವಿತ್ರವಾದ ಮತದಾನ ಮಾಡಬೇಕು ಎಂದು ತಿಳಿಸಿದರು.
ಮತದಾರರ ಪಟ್ಟಿ ಕಾಲಕಾಲಕ್ಕೆ ಪರಿಷ್ಕರಣೆ ಆಗಬೇಕು. ಒಂದೊಂದು ಮತವು ದೇಶದ ರಾಜಕಾರಣಿಗಳ ಭವಿಷ್ಯವನ್ನು ನಿರ್ಧಾರ ಮಾಡುತ್ತವೆ. ಪ್ರಜ್ಞಾವಂತ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಪ್ರಮಾಣ ಹೆಚ್ಚಿಸಬೇಕು ಎಂದರು.
ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಬಾರದು. ಒಂದು ಮತದಿಂದಲೂ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋತಿರುವ ಉದಾಹರಣೆ ಇದೆ. ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಶೇ. 100 ಮತ ಪ್ರಮಾಣ ಆಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
Lok Sabha Election ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಎಚ್.ಕೆ.ಲೋಕೇಶ್ ಮಾತನಾಡಿ, ಮತದಾನ ನಮ್ಮನಿಮ್ಮೆಲ್ಲರ ಆದ್ಯ ಕರ್ತವ್ಯ. ಆಯೋಗವು ಮತದಾನ ಪ್ರಮಾಣ ಹೆಚ್ಚಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಂಘ ಸಂಸ್ಥೆಗಳ ಪಾತ್ರವೂ ಇದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೇಸಿ ನಟರಾಜ್ ಭಾಗವತ್ ಅವರಿಗೆ ಸನ್ಮಾನಿಸಲಾಯಿತು. ನಂತರ ಸಂವಾದ ನಡೆಯಿತು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್, ವೆಂಕಟೇಶ್, ವಿ.ನಾಗರಾಜ್, ಬಸವರಾಜ್, ಕಾರ್ಯದರ್ಶಿ ಮಲ್ಲಿಕಾರ್ಜುನ ಕಾನೂರು, ಬಡಾವಣೆ ನಿವಾಸಿಗಳ ಸಂಘಧ ಅಧ್ಯಕ್ಷ ಎಸ್.ಸಿ.ರಾಮಚಂದ್ರ, ಮಾಜಿ ಅಧ್ಯಕ್ಷರು, ಸದಸ್ಯರು, ಮಹಿಳಾ ಸದಸ್ಯರು ಉಪಸ್ಥಿತರಿದ್ದರು.