Consumer Disputes Redressal Commission ಅರ್ಜಿದಾರರಾದ ರಮೇಶ್ ಡಿ., ಭಾವನ ಡಿ. ಮತ್ತು ಅನನ್ಯ ಡಿ.ಆರ್ ಎಂಬುವವರು ರಾಯಲ್ ಓಕ್ ಸೋನಾ ಡೇಕಾರ್, ಶಿವಮೊಗ್ಗ ಮತ್ತು ಬೆಂಗಳೂರು ಇವರ ವಿರುದ್ಧ ಸೇವಾನ್ಯೂನ್ಯತೆಗಾಗಿ ಆಪಾದಿಸಿ, ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಸೂಕ್ತ ಪರಿಹಾರ ಕೋರಿ ಸಲ್ಲಿಸಿದ್ದ ಮೂರು ಪ್ರಕರಣಗಳಲ್ಲಿ ಆಯೋಗವು ಎದುರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.
ಅರ್ಜಿದಾರರು ರಾಯಲ್ ಓಕ್ ಸೋನಾ ಡೇಕಾರ್, ಶಿವಮೊಗ್ಗ ಇವರ ಫರ್ನಿಚರ್ ಅಂಗಡಿಯಲ್ಲಿ ದಿ:12/07/2022 ರಂದು ರೂ. 54.487/-, ರೂ.56,900/- ಮತ್ತು 56.900/- ಗಳನ್ನು ಪಾವತಿಸಿ ಫ್ಯಾಬ್ರಿಕ್ ರೀಕ್ಲೈನೆರ್ಸ್ ಮತ್ತು ಡಿಸ್ಕವರಿ ಮಾರ್ಬಲ್ ಡೈನಿಂಗ್ ಟೇಬಲ್ ಹಾಗೂ ವಿವಿಧ ಪಿಠೋಪಕರಣಗಳನ್ನು ಖರೀದಿಸಿರುತ್ತಾರೆ. ಮರುದಿನ ಈ ಪಿಠೋಪಕರಣಗಳನ್ನು ಅರ್ಜಿದಾರರು ತೆರೆದು ನೋಡಿದಾಗ ಖರೀದಿಸಿದ ಎಲ್ಲಾ ಪಿಠೋಪಕರಣಗಳಲ್ಲಿ ಸೀಳು ಉಂಟಾಗಿದ್ದು, ಹಾನಿಗೊಂಡಿರುತ್ತವೆ. ಈ ಬಗ್ಗೆ ತಕ್ಷಣಕ್ಕೆ ಎದುರುದಾರರಲ್ಲಿ ತಿಳಿಸಿ, ಈ ಪೀಠೊಪಕರಣಗಳನ್ನು ಬದಲಿಸಿಕೊಡುವಂತೆ ಕೋರಿರುತ್ತಾರೆ.
ಎದುರುದಾರರು ಪ್ರಾರಂಭದಲ್ಲಿ ಪೀಠೊಪಕರಣಗಳ ಬದಲಾವಣೆಗೆ ಎಸ್.ಎಂ.ಎಸ್. ಮುಖಾಂತರ ಒಪ್ಪಿಕೊಂಡಿದ್ದು, ನಂತರದಲ್ಲಿ ನಿರ್ಲಕ್ಷ್ಯವನ್ನು ತೋರಿರುತ್ತಾರೆ. ಇದರಿಂದ ನೊಂದ ಪಿರ್ಯಾದುದಾರರು ವಕೀಲರ ಮುಖಾಂತರ ಕಾನೂನಿನ ನೋಟೀಸ್‍ನ್ನು ಕೂಡಾ ಕಳುಹಿಸಿತ್ತಾರೆ. ಆದಾಗ್ಯೂ ಕೂಡಾ ಎದುರುದಾರರು ಹಾನಿಗೊಂಡ ಪಿಠೋಪಕರಣಗಳನ್ನು ಬದಲಾಯಿಸಿ ಕೊಟ್ಟಿರುವುದಿಲ್ಲ. ಇದರಿಂದಾಗಿ ಮೂರೂ ಜನ ಅರ್ಜಿದುದಾರರು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಪ್ರತ್ಯೇಕವಾಗಿ ಮೂರು ದೂರುಗಳನ್ನು ದಾಖಲಿಸುವ ಮುಖಾಂತರ ಸೇವಾ ನ್ಯೂನತೆ ಅಡಿ ಆಪಾದಿಸಿ, ಸೂಕ್ತ ಪರಿಹಾರವನ್ನು ಎದುರುದಾರರರಿಂದ ಕೊಡಿಸುವಂತೆ ಕೋರಿರುತ್ತಾರೆ.
ಪ್ರಕರಣವನ್ನು ಕೂಲಂಕುಂಶವಾಗಿ ಪರಿಶೀಲಿಸಿದ ಆಯೋಗವು ಅರ್ಜಿದಾರರು ಮತ್ತು ಎದುರುದಾರರು ಹಾಜರು ಪಡಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ನೋಡಿದಾಗ, ಅರ್ಜಿದಾರರು ಹಾಜರುಪಡಿಸಿದ ಛಾಯಚಿತ್ರಗಳಲ್ಲಿ ಪಿಠೋಪಕರಣಗಳು ಸೀಳಿನಿಂದ ಹಾಳಾಗಿರುವುದು ಕಂಡು ಬಂದಿರುತ್ತದೆ ಮತ್ತು ಎದುರುದಾರರು ತಮ್ಮ ಸಾಕ್ಷ್ಯ ವಿಚಾರಣೆಯಲ್ಲಿ ತಾವು ಅರ್ಜಿದಾರರ ಮನೆಗೆ ಪಿಠೋಪಕರಣಗಳಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸುವ ಉದ್ದೇಶದಿಂದ ಸಾಕಷ್ಟು ಬಾರಿ ಭೇಟಿ ಕೊಟ್ಟಿರುವುದಾಗಿ ಹೇಳಿರುತ್ತಾರೆ ಮತ್ತು ಪಾಟೀ ಸವಾಲಿನಲ್ಲಿ ಹಾನಿಗೊಳಗಾದ ಪಿಠೋಪಕರಣದ ಭಾಗಗಳನ್ನು ಸರಿಪಡಿಸಿಕೊಡುವುದಾಗಿ ಅಥವಾ ಬದಲಿಸಿಕೊಡುವುದಾಗಿ ಒಪ್ಪಿಕೊಂಡಿರುತ್ತಾರೆ. ಇದರಿಂದ ಎದುರುದಾರರು ಮಾರಾಟ ಮಾಡಿದ ಪಿಠೋಪಕರಣಗಳು ಹಾನಿಗೊಳಗಾಗಿರುವುದು ಮತ್ತು ಪಿಠೋಪಕರಣಗಳನ್ನು ಬದಲಿಸಿಕೊಡುವಲ್ಲಿ ಎದುರುದಾರರು ನಿರ್ಲಕ್ಷ ತೋರಿರುವುದು ರುಜುವಾತುಗೊಂಡಿರುತ್ತದೆ. ಆದ್ದರಿಂದ ಆಯೋಗವು ಎದುರುದಾರರಿಂದ ಸೇವಾ ನ್ಯೂನತೆಯಾಗಿದೆ ಎಂದು ಮೂರು ಪ್ರಕರಣಗಳನ್ನು ಬಾಗಶ: ಪುರಸ್ಕರಿಸಿ ಪರಿಹಾರ ನೀಡುವಂತೆ ಆದೇಶಿಸಿದೆ.
Consumer Disputes Redressal Commission ಎದುರದಾರರು ಅರ್ಜಿದಾರರಿಗೆ ಪಿಠೋಪಕರಣಗಳ ಖರೀದಿಗಾಗಿ ಪಾವತಿಸಿದ ಮೊತ್ತದಲ್ಲಿ ಜಿ.ಎಸ್.ಟಿ.ಯನ್ನು ಕಡಿತಗೊಳಿಸಿ ರೂ.47,188/-ಗಳನ್ನು, ರೂ.48.220/-ಗಳನ್ನು ಮತ್ತು ರೂ.33,3031/- ಗಳನ್ನು ಹಾಗೂ ಎರಡು ಪ್ರಕರಣಗಳಲ್ಲಿ ತಲಾ ರೂ.25,000/-ಗಳನ್ನು ಹಾಗೂ ಒಂದು ಪ್ರಕರಣದಲ್ಲಿ ರೂ.15,000/-ಗಳನ್ನು ಮಾನಸಿಕ ಹಾನಿಗಾಗಿ ದಂಡ ಅಥವಾ ಪರಿಹಾರವಾಗಿ ಹಾಗೂ ತಲಾ ರೂ.10,000/-ಗಳನ್ನು ವ್ಯಾಜ್ಯದ ಖರ್ಚು-ವೆಚ್ಚ ಬಾಬು ಎಂದು ಪಾವತಿಸಬೇಕೆಂದು ಎಂದು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಶ್ರೀ.ಟಿ. ಶಿವಣ್ಣ, ಮಹಿಳಾ ಸದಸ್ಯೆ ಶ್ರೀಮತಿ ಸವಿತಾ. ಬಿ. ಪಟ್ಟಣಶೆಟ್ಟಿ ಮತ್ತು ಸದಸ್ಯ ಶ್ರೀ. ಬಿ.ಡಿ. ಯೋಗಾನಂದ ಇವರ ಪೀಠವು ಏ. 25 ರಂದು ಆದೇಶಿಸಿದೆ.
Consumer Disputes Redressal Commission ಗ್ರಾಹಕರೇ, ಈ ವರದಿ ಓದಲೇಬೇಕು ದಿನನಿತ್ಯ ಮೋಸ ಹೋಗುವುದು ತಪ್ಪುತ್ತದೆ
Date: