Lok Sabha Election ಶಿವಮೊಗ್ಗ ಜಿಲ್ಲಾ ಜಾಗೃತ ಮತದಾರರ ವೇದಿಕೆ ಶಿವಮೊಗ್ಗ ಶಿವಮೊಗ್ಗ ಜಿಲ್ಲಾ ಜಾಗ್ರತ ಮತದಾರರ ವೇದಿಕೆಯು ಕಳೆದ 20 ದಿನಗಳಿಂದ ಜಿಲ್ಲಾಡಳಿತದ ಸಹಕಾರದಿಂದ ಮತದಾರರ ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತ್ತು ಮತದಾರರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಬಹಿರಂಗವಾಗಿ ಮನವಿ ಮಾಡಿಕೊಳ್ಳುತ್ತಿದೆ.
ಚುನಾವಣೆಗೆ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಸ್ವತಂತ್ರ ಉಮೇದುವಾರರು ಬೇಡಿಕೆಗಳನ್ನು ಈಡೇರಿಸಲು ತಾವು ಕೈಗೊಳ್ಳುವ ಕ್ರಮಗಳ ಬಗ್ಗೆ ಚುನಾವಣಾ ಪೂರ್ವದಲ್ಲಿಯೇ ಬಹಿರಂಗವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕಾಗಿ ಅವರಲ್ಲಿ ವಿನಯಪೂರ್ವಕವಾಗಿ ಆಗ್ರಹಿಸಲಾಗಿದೆ.
Lok Sabha Election ಬೇಡಿಕೆಗಳು ಹೀಗಿವೆ. 1.ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನೀವು ಮಾಡಬೇಕೆಂದಿರುವ ಕಾರ್ಯಗಳ ಬಗ್ಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮಟ್ಟದಲ್ಲಿ ನಿಮ್ಮದೇ ಆದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಬೇಕು. 2.ಯುವಜನರಲ್ಲಿ ವೃತ್ತಿ ಕೌಶಲ್ಯ ಹೆಚ್ಚಿಸಲು ಪ್ರತಿ ತಾಲ್ಲೂಕಿಗೊಂದು ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ಪಾಲಿಟೆಕ್ನಿಕ್ ಕಾಲೇಜ್ ಸ್ಥಾಪಿಸಬೇಕು. 3. ಚುನಾವಣಾ ಸುಧಾರಣೆಗೆ ಆದ್ಯತೆ ನೀಡಿ ಅಭ್ಯರ್ಥಿಗಳು ಪರಸ್ಪರ ವೈಯಕ್ತಿಕ ಟೀಕೆ ಗಳಿಗೆ ಆಸ್ಪದ ನೀಡದೇ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಾರದರ್ಶಕವಾಗಿ ಕೆಲಸ ಮಾಡಲು ಆದ್ಯತೆ ನೀಡಬೇಕು.4. ಅಭ್ಯರ್ಥಿಗಳು ಚುನಾವಣಾ ಅಕ್ರಮ ಎಸಗದಂತೆ ಮತ್ತು ಮತದಾರರು ಭ್ರಷ್ಟತೆಗೆ ಒಳಗಾಗದಂತೆ ಮೌಲ್ಯಯುತ ಮತದಾನ ನಡೆಯಲು ಅವಕಾಶ ಕಲ್ಪಿಸಬೇಕು. 5. ಕೃಷಿ ಆಧಾರಿತ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಬತ್ತ , ಮೆಕ್ಕೆ ಜೋಳ ಮತ್ತು ಅಡಿಕೆಯ ಉಪ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡಲು ಸಂಶೋಧನಾ ಕೇಂದ್ರಗಳನ್ನು ಮತ್ತು ಮಾರುಕಟ್ಟೆ ಸೌಲಭ್ಯವನ್ನು ಪ್ರತಿ ತಾಲ್ಲೂಕು ಮಟ್ಟದಲ್ಲಿ ಒದಗಿಸಬೇಕು .6. ಬೆಂಗಳೂರು ಕೇಂದ್ರೀತವಾಗಿರುವ ಕೈಗಾರಿಕೆಗಳನ್ನು ಶಿವಮೊಗ್ಗಕ್ಕೆ ಕರೆತರಲು ಕ್ರಮ ಕೈಗೊಳ್ಳಬೇಕು . 7. ವಿದೇಶಗಳಲ್ಲಿ ದೊರೆಯುವ ಉದ್ಯೋಗ ಅವಕಾಶಗಳ ಬಗ್ಗೆ ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ ಮಾಹಿತಿ ಒದಗಿಸಲು ಶಿವಮೊಗ್ಗದಲ್ಲಿ ಮಾಹಿತಿ ಕೇಂದ್ರ ತೆರೆಯಬೇಕು. 8. ಜಿಲ್ಲೆಯ ವಿಐಎಸ್ಎಲ್, ಎಂಪಿಎಂ ಕಾರ್ಖಾನೆಗಳನ್ನು ಪುನಸ್ಕೆತನ ಗೊಳಿಸಿ ಹೊಸ ಸಾರ್ವಜನಿಕ ಕೈಗಾರಿಕೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. 9. ಕುವೆಂಪು ವಿಶ್ವ ವಿದ್ಯಾಲಯದ ಸಮಗ್ರ ಅಭಿರುದ್ದಿಗೆ ಆದ್ಯತೆ ನೀಡಬೇಕು.10. ಪ್ರತಿ ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಂಡು ಮಕ್ಕಳಿಗೆ ಉಚಿತ ಬಸ್ ಒದಗಿಸಬೇಕು.11. ಜಿಲ್ಲೆಯಲ್ಲಿ ನೀಲಗಿರಿ ಮತ್ತು ಅಕೇಶಿಯ ಗಿಡಗಳನ್ನು ಸಂಪೂರ್ಣ ನಿಷೇಧಿಸಿ ನೈಸರ್ಗಿಕ ಅರಣ್ಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು.12. ಜಿಲ್ಲೆಯಲ್ಲಿ ಎಲ್ಲಾ ರೀತಿಯ ಗಣಿಗಾರಿಕೆಗೆ ಅವಕಾಶ ಕಲ್ಪಿಸದೇ ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು ಎಂಬ ಹೆಸರನ್ನು ಉಳಿಸಿ ಬೆಳೆಸಲು ಪ್ರಥಮ ಆದ್ಯತೆ ನೀಡಬೇಕು. 13. ಪ್ರತಿ ವರ್ಷ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಟ 50 ಕೆರೆಗಳ ಹೂಳು ತೆಗೆಸಿ ಕೆರೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. 14.ಜಿಲ್ಲೆಯಲ್ಲಿ ಅಂತರ್ ಜಲ ಹೆಚ್ಚಿಸಲು ಬೋರ್ ವೆಲ್ ಹೊಂದಿರುವ ರೈತರಿಗೆ ಜಲ ಮರು ಪೂರಣಕ್ಕಾಗಿ ಶೇಕಡಾ 90 ರಷ್ಟು ಸಬ್ಸಿಡಿ ಒದಗಿಸಬೇಕು. 15. ಪಂಪ್ ಸೆಟ್ ಗಳಿಗೆ, ಗೃಹ ವಿದ್ಯುತ್ ಗೆ, ನೀರನ್ನು ಬಿಸಿ ಮಾಡಲು , ಸೋಲಾರ್ ಆಧಾರಿತ ವಾಹನಗಳ ಖರೀದಿಗೆ ಮತ್ತು ಪ್ರತಿ ಮನೆ ಗಳಲ್ಲಿ ಹಾಗೂ ರೈತರ ಪಂಪ್ ಸೆಟ್ ಗಳಲ್ಲಿ ಸೋಲಾರ್ ಅಳವಡಿಸಲು ಸರ್ಕಾರದಿಂದ ಶೇಕಡಾ 90 ರಷ್ಟು ಸಬ್ಸಿಡಿ ಒದಗಿಸಬೇಕು. 16. ಜಿಲ್ಲೆಯ ಶರಣರ ಕ್ಷೇತ್ರಗಳನ್ನು ಅಭಿರುದ್ದಿ ಪಡಿಸಲು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಆದ್ಯತೆ ನೀಡಿ ಸ್ಥಳೀಯ ಉದ್ಯೋಗ ಅವಕಾಶ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. 17. ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಯನ್ನು ಹಾಗೂ ತಾಲ್ಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳನ್ನು ಉನ್ನತ ದರ್ಜೆಗೆ ಏರಿಸಿ ಬಡವರಿಗೆ ಎಲ್ಲಾ ರೀತಿಯ ಚಿಕಿತ್ಸೆಗಳು ಉಚಿತವಾಗಿ ದೊರಕುವಂತೆ ಮಾಡಬೇಕು. 18.ಜಿಲ್ಲೆಯ ಪಶು ಸಂಪತ್ತನ್ನು ಉಳಿಸಿ ಬೆಳೆಸಲು ಮಲೆನಾಡು ಗಿಡ್ಡ ಮುಂತಾದ ಸ್ಥಳೀಯ ಹಸು ಗಳನ್ನು ಖರೀದಿಸಲು ರೈತರಿಗೆ ಶೇಕಡಾ 75 ರಷ್ಟು ಸಬ್ಸಿಡಿ ಒದಗಿಸಬೇಕು. 19. ಇದುವರೆಗೆ ಮಾಡಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಒದಗಿಸಿ ಮುಂದೆ ಯಾವುದೇ ಹೊಸ ಒತ್ತುವರಿ ಆಗದಂತೆ ಜಿಲ್ಲೆಯ ಬಡ ಜನರಿಗೆ ಬದಲೀ ಉದ್ಯೋಗ ಅವಕಾಶ ಗಳನ್ನೂ ಒದಗಿಸಬೇಕು. 20.ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮತ್ತು ಎಲ್ಲಾ ರಂಗದಲ್ಲಿ ಲಂಚ ಮತ್ತು ಎಲ್ಲಾ ರೀತಿಯ ಬ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಬೇಕು ಎಂದುವಕೀಲರು ಮತ್ತು ಸಂಚಾಲಕರು, ಶಿವಮೊಗ್ಗ ಜಿಲ್ಲಾ ಜಾಗೃತ ಮತದಾರರ ವೇದಿಕೆ ಮತ್ತು ಸದಸ್ಯರುಗಳಾದ ಕೆ.ಸಿ. ಬಸವರಾಜ್ ಅವರು ತಿಳಿಸಿದ್ದಾರೆ.
. ಸಂಪರ್ಕ ದೂರವಾಣಿ -9483003823