Geeta Shivarajkumar ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಗೀತಾ ಶಿವರಾಜ್ ಕುಮಾರ್ ಅವರ ಪರ ಸ್ಯಾಂಡಲ್ವುಡ್ನ ನಟ ದುನಿಯಾ ವಿಜಯ್, ಚಿಕ್ಕಣ್ಣ, ಆ್ಯಂಕರ್ ಅನುಶ್ರೀ, ಶಿವರಾಜ್ ಕುಮಾರ್ ಶಿಕಾರಿಪುರದ ಈಸೂರು, ಗಾಮ, ಕಲ್ಮನೆ ಸೇರಿದಂತೆ ಅನೇಕ ಕಡೆ ಪ್ರಚಾರ ನಡೆಸಿದ್ದಾರೆ.
ಶತ್ರುವಿನ ಕೊನೆ ಅಸ್ತ್ರ ಅಪಪ್ರಚಾರ – ದುನಿಯಾ ವಿಜಯ್: “ಶತ್ರುಗೆ ಕೊನೆಯ ಅಸ್ತ್ರ ಎಂದರೆ ಅಪಪ್ರಚಾರ ಮಾಡುವುದು. ಸ್ವಾತಂತ್ರ್ಯ ಬಂದಾಗಿನಿಂದ ಹಿಂದೂ – ಮುಸ್ಲಿಂ ಎನ್ನದೇ ಎಲ್ಲರೂ ಒಂದಾಗಿ ಅಣ್ಣ ತಮ್ಮನ ರೀತಿ ಇದ್ದೆವು. ಆದರೆ, ಬಿಜೆಪಿರವರು ಹಿಂದು ಮುಸ್ಲಿಮರ ಮಧ್ಯೆ ಒಡಕು ತರುತ್ತಿದ್ದಾರೆ ಎಂದು ವಿಜಿ ಆರೋಪಿಸಿದರು. ಅಲ್ಲದೇ, ರಾಮ ಮಂದಿರ ಕಟ್ಟಲು ಇಟ್ಟಿಗೆ ಕೊಟ್ಟವರು ನಾವು. ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಮುಸಲ್ಮಾರು ಸಹ ಕೆಲಸ ಮಾಡಿದ್ದಾರೆ. ಎಲ್ಲ ಜನಾಂಗದಲ್ಲಿ ಒಳ್ಳೆಯವರು ಇದ್ದಾರೆ, ಕೆಟ್ಟವರು ಸಹ ಇದ್ದಾರೆ. ಬಂಗಾರಪ್ಪ ಕೇವಲ ಮುಖ್ಯಮಂತ್ರಿಯಲ್ಲದೇ, ಅವರು ದೊಡ್ಡ ಹೋರಾಟಗಾರರಾಗಿದ್ದರು, ಬಡವರ ಪರವಾಗಿದ್ದರು. ನೀವು ಅವರ ಮೇಲಿನ ಗೌರವಕ್ಕೆ ಬಂದು ಸೇರಿದ್ದಿರಿ. ಇಂದು ನಿಮ್ಮ ಮನೆ ಬಾಗಿಲಿಗೆ ಬಂಗಾರಪ್ಪನವರ ಮಗಳು ಬಂದಿದ್ದಾರೆ. ಆಶೀರ್ವಾದ ಮಾಡಬೇಕಾಗಿರುವುದು, ಸ್ವಾಭಿಮಾನ ಉಳಿಸಿಕೊಳ್ಳಬೇಕಾಗಿರುವುದು ನಿಮ್ಮ ಕೈಯಲ್ಲಿದೆ.
ಗೀತಕ್ಕನವರು ರಾಜಕೀಯಕ್ಕಾಗಿ ಅಲ್ಲ, ಬಡವರ, ಜನ ಪರ ಸೇವೆ ಮಾಡಬೇಕು ಎಂದು ಬಂದಿದ್ದಾರೆ” ಎಂದರು.
ನಟ ಚಿಕ್ಕಣ್ಣ ಪ್ರಚಾರ: “ಈಸೂರು ಗ್ರಾಮವು ಸ್ವಾತಂತ್ರಕ್ಕೂ ಮುಂಚೆಯೇ ಸ್ವಾತಂತ್ರವನ್ನು ಘೋಷಿಸಿಕೊಂಡು ಬಂದ ಗ್ರಾಮವಾಗಿದೆ. ಇಲ್ಲಿ ನೀವು ಇರಲು, ನಾವು ಬರಲು ಪುಣ್ಯ ಮಾಡಿದ್ದೇವೆ. ಯಾವುದೇ ನದಿ, ಕೆರೆ ಶುದ್ಧವಾಗಿರಬೇಕು ಅಂದರೆ ಹಳೆ ನೀರು ಹೋಗಬೇಕು ಹೊಸ ನೀರು ಬರಬೇಕು. ಶಿವಮೊಗ್ಗ ಇನ್ನಷ್ಟು ಅಭಿವೃದ್ಧಿ ಆಗುವುದಕ್ಕೆ ನೀವೆಲ್ಲ ಗೀತಾಕ್ಕನವರಿಗೆ ಆರ್ಶಿವಾದ ಮಾಡಿ. ಗೀತಾರವರು ಯಾವುದೇ ಹೆಸರು, ಹಣಕ್ಕಾಗಿ ಬಂದಿಲ್ಲ, ನಿಮ್ಮ ಸೇವೆಗಾಗಿ ಬಂದಿದ್ದಾರೆ. ಇದಕ್ಕೆ ನಿಮ್ಮ ಆರ್ಶಿವಾದ ಇರಲಿ. ಅವರು ಜಾಸ್ತಿ ಮಾತನಾಡಲ್ಲ ಅಂತ ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೆ. ನಮಗೆ ಅವರ ಕೆಲಸ ಮಾತನಾಡಿದರೆ ಸಾಕು” ಎಂದರು.
Geeta Shivarajkumar ಪುನೀತ್, ಶಿವಣ್ಣರವರ ಅಭಿಮಾನಿಯಾಗಿ ಬಂದಿದ್ದೇನೆ – ಆ್ಯಂಕರ್ ಅನುಶ್ರೀ: “ನನಗೆ ರಾಜಕೀಯ ಭಾಷೆಯಲ್ಲಿ ಮಾತನಾಡಲು ಬರಲ್ಲ, ನಾನು ಇಲ್ಲಿ ಪುನೀತ್, ಶಿವಣ್ಣ ಅವರ ಅಭಿಮಾನಿಯಾಗಿ ಬಂದಿದ್ದೇನೆ. ನಮ್ಮ ಕನ್ನಡ ಚಲನಚಿತ್ರದಲ್ಲಿ ಯಾವುದೇ ತೂಂದರೆಯಾದರೂ ಮೊದಲು ನಿಲ್ಲುತ್ತಿದ್ದದ್ದೇ ದೊಡ್ಮನೆ ಕುಟುಂಬ. ಈಗ ಶಿವಮೊಗ್ಗ ಜಿಲ್ಲೆಯ ಎಲ್ಲ ಸಮಸ್ಯೆಗಳಿಗೆ ಗೀತಾ ಅವರು ಸ್ಪಂದಿಸುತ್ತಾರೆ. ಕೆಲಸ ಮಾಡಲು ಒಂದು ಅವಕಾಶ ಕೊಟ್ಟು ನೋಡಲೇಬೇಕು. ಗೀತಕ್ಕ ಅವರನ್ನು ಗೆಲ್ಲಿಸಲು ಅವಕಾಶ ಸಿಕ್ಕಿದೆ. ಆ ಅವಕಾಶವನ್ನು ಆಕಾಶದ ಎತ್ತರಕ್ಕೆ ಬೆಳೆಸಬೇಕು ಎಂದು ಮನವಿ ಮಾಡಿದರು.
ಕೊನೆಯಲ್ಲಿ ಮಾತನಾಡಿದ ಶಿವಣ್ಣ, ಕಾಟಾಚಾರಕ್ಕೆ ಎಂಪಿ ಆಗಿರದೇ, ಕೆಲಸ ಮಾಡಿ ತೋರಿಸಬೇಕು. ಅಂತವರೇ ಗೀತಾರವರು. ಸರ್ಕಾರ ನಿಮಗೆ ಗ್ಯಾರಂಟಿ, ಗೀತಾರವರಿಗೆ ನಾನು ಗ್ಯಾರಂಟಿ ಎಂದು ಭರವಸೆ ನೀಡಿದರು. ಒಂದು ಸಲ ಅವರಿಗೆ ಕೆಲಸ ಮಾಡಲು ಅವಕಾಶ ನೀಡಿ. ನೀವು ಎಲ್ಲರಿಗೂ ಅವಕಾಶ ನೀಡಿದಂತೆ ನನ್ನ ಹೆಂಡತಿಗೂ ಅವಕಾಶ ನೀಡಿ. ನಿಮ್ಮ ಮನೆಗಳಿಗೆ ಬಂದು ಕೆಲಸ ಮಾಡುತ್ತೇವೆ ಎಂದರು.