Lokshabha Elections 2024 ಮಹತ್ವದ ಬೆಳವಣಿಗೆಯೊಂದರಲ್ಲಿ ಮಧ್ಯ ಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬಾಮ್ ಅವರು ಬಿಜೆಪಿ ಹಾಲಿ ಶಾಸಕ ರಮೇಶ್ ಮೆಂಡೋಲಾ ಅವರೊಂದಿಗೆ ನಾಮಪತ್ರ ಹಿಂಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದರು ಎಂದು ವರದಿಗಳು ಹೇಳಿವೆ.
ಅಕ್ಷಯ್ ಕಾಂತಿ ಬಾಮ್ ಅವರು ಕಾಂಗ್ರೆಸ್ ತೊರೆದಿರುವುದನ್ನು ದೃಢೀಕರಿಸಿರುವ ಮಧ್ಯಪ್ರದೇಶ ಸರ್ಕಾರದ ಸಂಪುಟ ಸಚಿವ ಕೈಲಾಶ್ ವಿಜಯವರ್ಗಿಯ, ಬಾಮ್ ಅವರನ್ನು ಬಿಜೆಪಿಗೆ ಸ್ವಾಗತಿಸಿದ್ದಾರೆ.
Lokshabha Elections 2024 “ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ರಾಜ್ಯಾಧ್ಯಕ್ಷ ವಿಡಿ ಶರ್ಮಾ ನೇತೃತ್ವದ ಬಿಜೆಪಿಗೆ ಸೇರ್ಪಡೆಯಾಗಿರುವ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರನ್ನು ನಾವು ಪಕ್ಷಕ್ಕೆ ಸ್ವಾಗತಿಸುತ್ತೇವೆ” ಎಂದು ವಿಜಯವರ್ಗಿಯಾ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅಕ್ಷಯ್ ಕಾಂತಿ ಬಾಮ್ ಅವರು ನಾಮಪತ್ರ ಸಲ್ಲಿಸುವಾಗ ಅವರ ವಿರುದ್ದ 17 ವರ್ಷಗಳ ಹಿಂದೆ ಐಪಿಸಿ ಸೆಕ್ಷನ್ 307ರ ಅಡಿ ದಾಖಲಾಗಿರುವ ಪ್ರಕರಣದ ಕುರಿತು ಉಲ್ಲೇಖಿಸಿಲ್ಲ ಎಂದು ಬಿಜೆಪಿ ಕಾನೂನು ಘಟಕದವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಜಿಲ್ಲಾಧಿಕಾರಿ ಆಕ್ಷೇಪಣೆಯನ್ನು ತಿರಸ್ಕರಿಸಿ ನಾಮಪತ್ರ ಸ್ವೀಕರಿಸಿದ್ದರು ಮತ್ತು ನಾಮಪತ್ರ ಸಲ್ಲಿಸುವಾಗ ಆ ಪ್ರಕರಣದ ಕುರಿತು ಸೇರಿಸಿದ್ದರು.
ಆದರೆ, ಕಾಂಗ್ರೆಸ್‌ನ ಮೂವರು ಬದಲಿ ಅಭ್ಯರ್ಥಿಗಳ ನಾಮಪತ್ರಗಳನ್ನು ಜಿಲ್ಲಾಧಿಕಾರಿ ತಿರಸ್ಕರಿಸಿದ್ದಾರೆ.
ಇಂದೋರ್‌ನಲ್ಲಿ ಮತದಾನಕ್ಕೆ ಮೂರು ದಿನಗಳ ಮೊದಲು, ಅಂದರೆ, ಮೇ 10 ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಇಂದೋರ್ ಲೋಕಸಭಾ ಕ್ಷೇತ್ರದ ಮತದಾನ ನಾಲ್ಕನೇ ಹಂತದಲ್ಲಿ ಮೇ 13 ರಂದು ನಡೆಯಲಿದೆ.
ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಬಿಜೆಪಿ ಸೇರ್ಪಡೆಯಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ವಕ್ತಾರ ಅಮೀನ್ ಉಲ್ ಖಾನ್ ಸೂರಿ, ” ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಬೇಕು. ಬಾಮ್ ಇಂದೋರ್‌ನಲ್ಲಿ ಯಾವುದೇ ರಾಜಕೀಯ ಪ್ರಭಾವ ಹೊಂದಿರಲಿಲ್ಲ. ಆದರೂ, ಕಾಂಗ್ರೆಸ್ ಪಕ್ಷ ಅವರನ್ನು ಇಂದೋರ್ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು. ಇದನ್ನು ಲಘುವಾಗಿ ಪರಿಗಣಿಸಬಾರದು. ಏಕೆಂದರೆ, ಇದು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ” ಎಂದಿದ್ದಾರೆ