Karnataka State Commission for Women ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ ಪರಮೇಶ್ವರ್ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
“ಹಾಸನ ಜಿಲ್ಲೆಯಲ್ಲಿ ಪೆನ್‌ಡ್ರೈವ್ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಹಲವು ಮಹಿಳೆಯರನ್ನು ಬಲವಂತದಿಂದ ಲೈಂಗಿಕ ಕ್ರಿಯೆಗೆ ಒತ್ತಾಯಪಡಿಸುವ ಮೂಲಕ ಚಿತ್ರೀಕರಿಸಲಾಗಿದೆ ಎನ್ನಲಾಗುತ್ತಿದ್ದು, ಚಿತ್ರೀಕರಣ ಮಾಡಿದ ವ್ಯಕ್ತಿ ಮತ್ತು ಅದನ್ನು ಸಾರ್ವಜನಿಕಗೊಳಿಸಿದ ವ್ಯಕ್ತಿಯನ್ನು ತನಿಖೆಗೆ ಒಳಪಡಿಸುವ ಮೂಲಕ ಮಹಿಳೆಯರ ಮಾನಹಾನಿ ಉಂಟು ಮಾಡಿದವರನ್ನು ಶೀಘ್ರವಾಗಿ ಪತ್ತೆ ಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಬೇಕು ಮತ್ತು ಮಹಿಳೆಯರ ಮೇಲೆ ನೀಚ ಕೃತ್ಯವೆಸಗಿರುವವರ ವಿರುದ್ದ ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳವಂತೆ ಕೋರುತ್ತೇನೆ” ಎಂದು ನಾಗಲಕ್ಷೀ ಚೌದರಿ ಅವರು ಪತ್ರದಲ್ಲಿ ಹೇಳಿದ್ದಾರೆ.
ಹಾಸನದ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೋರಿ ಹಲವು ಸಂಘಟನೆಗಳು ಮಹಿಳಾ ಆಯೋಗ ಮತ್ತು ಪೊಲೀಸರಿಗೆ ಮನವಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
Karnataka State Commission for Women ಏಪ್ರಿಲ್ 25ರಂದು ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ ಎಸ್‌ಡಿಪಿಐ ಕಾನೂನು ಘಟಕದ ರಾಜ್ಯ ಉಸ್ತುವಾರಿ ಬಿ.ಆರ್ ಭಾಸ್ಕರ್ ಪ್ರಸಾದ್ ಅವರು, “ಪೋಲಿಸ್ ಮಹಾ ನಿರ್ದೇಶನಕರು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಎಸ್‌ಡಿಪಿಐ ದೂರು ನೀಡಿ, ಹಾಸನದ ಪೆನ್ ಡ್ರೈವ್ ಲೈಂಗಿಕ ಹಗರಣದ ಬಗ್ಗೆ ಸೂಕ್ತ ತನಿಖೆಗೆ ಮತ್ತು ಮಹಿಳೆಯರ ರಕ್ಷಣೆಗೆ ಮನವಿ ಮಾಡಿತ್ತು. ದೂರಿಗೆ ಸ್ಪಂದಿಸಿದ ಮಹಿಳಾ ಆಯೋಗವು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆಗಾಗಿ ವಿಶೇಷ ತನಿಖಾ ತಂಡ ಎಸ್‌ಐಟಿ ರಚಿಸಲು ಕೋರಿ ಸರ್ಕಾರಕ್ಕೆ ಪತ್ರ ಬರೆದು ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದೆ” ಎಂದು ತಿಳಿಸಿದ್ದರು.