Lok Sabha Election ಶಿವಮೊಗ್ಗ ಗ್ರಾಮಾಂತರದ ಹಿಟ್ಟೂರು, ನಾರಾಯಣಪುರ ಮತ್ತು ಬೈರನಕೊಪ್ಪ ಗ್ರಾಮದಲ್ಲಿ 13 ಕೆರೆಗಳಿದ್ದು ಇವುಗಳಿಗೆ ನೀರು ತುಂಬಿಸುವಲ್ಲಿ ಮತ್ತು ಆ ಮೂಲಕ ವ್ಯವಸಾಯಕ್ಕೆ, ಜನ-ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಡುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿರುವುದನ್ನು ಖಂಡಿಸಿ ಆ ಗ್ರಾಮಗಳ ಮತದಾರರು ಚುನಾವಣಾ ಬಹಿಷ್ಕಾರ ಹಾಕಿರುವುದಾಗಿ ಹೇಳಿದ್ದಾರೆ.
ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಗ್ರಾಮದ ಮುಖಂಡ ಹಿಟ್ಟೂರು ರಾಜು, ಈ ಕೆರೆಗಳಿಗೆ ನೀರು ತುಂಬಿಸಿದ್ದರೆ ಸುಮಾರು ೫೦೦ ಎಕ್ರೆ ಜಮೀನಿಗೆ ಅನುಕೂಲವಾಗುತ್ತಿತ್ತು. ಆದರೆ ಆಯ್ಕೆಯಾದವರೆಲ್ಲ ಒಂದೊAದು ಭರವಸೆ ಕೊಡುತ್ತ ಕಾಲಕಳೆದರು. ಇದನ್ನು ಪ್ರತಿಭಟಿಸಿ ಗ್ರಾಮಸ್ಥರೆಲ್ಲ ಸೇರಿ ಮತದಾನ ಬಹಿಷ್ಕಾರ ಹಾಕಲು ತೀರ್ಮಾನಿಸಿದ್ದಾಗಿ ವಿವರಿಸಿದರು.
ಶಾರದಾ ಪೂರ‍್ಯಾ ನಾಯ್ಕ್ ಶಾಸಕಿಯಾಗಿದ್ದಾಗ ೬ ಕೋಟಿ ರೂ. ಗಳ ಎಸ್ಟಿಮೇಶನ್ ಮಾಡಿಸಿದ್ದರು. ಆದರೆ ಕೆರೆ ಕಾಮಗಾರಿ ನಡೆಯಲಿಲ್ಲ. ೨೦೧೬ರಲ್ಲಿ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇದರ ಅನುದಾನ ಬಿಡುಗಡೆಗೆ ಕಡತದಲ್ಲಿ ಸೇರಿಸಿದ್ದರು ಮತ್ತು ಜಲಸಂಪನ್ಮೂಲ ಇಲಾಖೆಗೆ ಶಿಫಾರಸ್ಸು ಮಾಡಿದ್ದರು.
ನಾವು ಆಗಿನ ಸಣ್ಣ ನೀರಾವರಿ ಸಚಿವರಾದ ಪುಟ್ಟರಾಜು ಮತ್ತು ಎಂ.ಬಿ ಪಾಟೀಲ್ ಅವರಿಗೆ ಮನವಿ ಕೊಟ್ಟರೂ ಸಹ ಕ್ರಮಕೈಗೊಳ್ಳಲಿಲ್ಲ ಎಂದರು.
Lok Sabha Election ನಂತರ ಬಿ.ಜಿ.ಪಿ ಸರ್ಕಾರ ಆಡಳಿತಕ್ಕೆ ಬಂದಾಗ ಶಾಸಕರಾಗಿದ್ದ ಅಶೋಕ್ ನಾಯ್ಕ ನನ್ನನ್ನು ಗೆಲ್ಲಿಸಿದರೆ ವರ್ಷದಲ್ಲಿ ನಾನು ಈ ಕೆರೆಗಳನ್ನು ತುಂಬಿಸುತ್ತೇನೆ ಎಂದು ಆಶ್ವಾಸನೆ ಕೊಟ್ಟರು. ಆದರೆ ಗೆದ್ದ ನಂತರ ಮಂಜೂರಾಗದೆ ಇರುವ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಜನರಿಗೆ ನಂಬಿಕೆ ದ್ರೋಹವನ್ನು ಎಸಗಿದರು.
ಇದನ್ನು ಒಂದು ಕಾರ್ಯಕ್ರಮದಲ್ಲಿ ಪ್ರಶ್ನಿಸಿದಾಗ ಅಲ್ಲಿ ಹಾಜರಿದ್ದ ಸಂಸದ ಬಿ.ವೈ ರಾಘವೇಂದ್ರ ಈ ಯೋಜನೆ ಬಗ್ಗೆ ಚರ್ಚಿಸಿ ಇನ್ನೂ 15 ದಿನಗಳಲ್ಲಿ ಈ ಯೋಜನೆಯನ್ನು ಮಂಜೂರು ಮಾಡಿಸುತ್ತೇನೆಂದು ಸಾರ್ವಜನಿಕರ ಮುಂದೆ ಹೇಳಿಕೆನೀಡಿ ಇಲ್ಲಿಯವರೆಗೆ ನಯಾಪೈಸೆ ಬಿಡುಗಡೆ ಮಾಡಿಸಿಲ್ಲ ಎಂದು ವಿವರಿಸಿದರು.
ಅಭಿವೃದ್ಧಿಯ ಹರಿಕಾರ ಎಂದೇ ಕರೆಸಿಕೊಂಡಿರುವ ಸಂಸದರು ಕೇವಲ ನಗರದ ಕಡೆ ಗಮನಕೊಟ್ಟರೆ ಹೊರತು ಹಳ್ಳಿಗಳ ಅಭಿವೃದ್ಧಿಯ ಕಡೆ ಸ್ವಲ್ಪವು ಗಮನ ಹರಿಸಲಿಲ್ಲ. ಗ್ರಾಮಾಂತರ ಪ್ರದೇಶದ ಮತದಾರರ ಅವಶ್ಯಕತೆ ಇಲ್ಲವೆಂಬುದು ಮೇಲ್ನೋಟಕ್ಕೆ ಅರ್ಥವಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಎಸ್ ಎಂ ಪ್ರಶಾತ್, ಎಚ್ ಎಂ ಮಲ್ಲಿಕಾರ್ಜುನ, ಎನ್. ಪ್ರಶಾಂತ್, ಎಚ್. ಎಸ್.ಬಸವರಾಜಪ್ಪ, ಎಚ್ ಜಿ ನಾಗರಾಜಪ್ಪ, ಚಂದ್ರಶೇಖರಪ್ಪ ಮೊದಲಾದವರಿದ್ದರು.