High Court of Karnataka ಕರ್ನಾಟಕ ಹೈಕೋರ್ಟ್ ನ ಹಿರಿಯ ಜಡ್ಜ್ ಗಳಲ್ಲಿ ಒಬ್ಬ ರಾದ, ನ್ಯಾಯನಿಷ್ಟುರತೆ, ದಕ್ಷತೆ, ಪ್ರಾಮಾಣಿಕತೆ, ಕಾನೂನು ಜ್ಞಾನ, ಸರಳತೆಗಳಿಗೆ ಹೆಸರಾದ ಡಾ.ಎಚ್.ಬಿ.ಪ್ರಭಾಕರ ಶಾಸ್ತ್ರೀ ಯವರು ನ್ಯಾಯಾಂಗದಲ್ಲಿ ಸುದೀರ್ಘ 22 ವರ್ಷಗಳ ಸೇವೆನಂತರ 04-04-2024ರಂದು ನಿವೃತ್ತರಾದರು.
“ಬೀಳ್ಕೊಡುಗೆ ಸರಳವಾಗಿರಲಿ, ಅದ್ದೂರಿ ಬೇಡ” ಎಂದ ಇವರು ಬೀಳ್ಕೊಡುಗೆ, ಗೌರವ ರಕ್ಷೆ ಸ್ವೀಕರಿಸಿದ ನಂತರ ಕೋರ್ಟ್ ಗೆ, ತನ್ನ ಕಚೇರಿಗೆ ಭಕ್ತಿಯಿಂದ ನಮಸ್ಕರಿಸಿ, ಹೈಕೋರ್ಟ್ ನ ಕಾರು, ಡ್ರೈವರು, ಅಂಗರಕ್ಷಕ, ಪೋಲಿಸ್ ಮುಂತಾಗಿ ಎಲ್ಲ ಸವಲತ್ತುಗಳನ್ನೂ (ನಿವೃತ್ತಿ ನಂತರ ಕೆಲ ದಿನಗಳ ಕಾಲ ಬಳಸಿಕೊಳ್ಳಲು ಅವಕಾಶವಿದ್ದರೂ ಸಹಾ) ತಕ್ಷಣ ಬಿಟ್ಟು ತಮ್ಮ ಸ್ವಂತದ ಪುಟ್ಟ ಕಾರನ್ನು ತಾವೇ ಡ್ರೈವ್ ಮಾಡಿಕೊಂಡು ಮನೆಗೆ ತೆರಳಿದ್ದು ಹೃದಯ ಮುಟ್ಟುವಂತಿತ್ತು.
High Court of Karnataka ಪದ್ಧತಿಯಂತೆ ಅಂದು ಸಂಜೆ ಕಬ್ಬನ್ ಪಾರ್ಕ್ ನ ಕೋರ್ಟ್ ಆವರಣದಲ್ಲಿ ನಡೆಯಬೇಕಾಗಿದ್ದ ‘ಅದ್ದೂರಿ ಬೀಳ್ಕೊಡುಗೆ’, ‘ಔತಣ ಕೂಟ’, ವಿಶೇಷ ‘ರಜತ ಸ್ಮರಣಿಕೆ’ ಇವಾವುವೂ ತಮಗೆ ಬೇಡ ಎಂದರು. ಮೂಲತಃ ಉಡುಪಿ ಜಿಲ್ಲೆಯವರಾಗಿ ದಾವಣಗೆರೆಯಲ್ಲಿ ಹುಟ್ಟಿಬೆಳೆದ ಇವರು ನನ್ನ ಕಿರಿಸಹೋದರರು ಎಂಬುದು ನನಗೆ ಸಂತೋಷ. ಇಂಗ್ಲೀಷ್ ಅಲ್ಲದೆ ಶುದ್ಧ ಕನ್ನಡದಲ್ಲಿಯೂ ತೀರ್ಪುಗಳನ್ನು ಕೊಟ್ಟಿದ್ದಕ್ಕಾಗಿ ಇವರಿಗೆ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು 2008ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದು, ದಶಕಗಳ ಹಿಂದೆ ಇವರು ಬೆಂಗಳೂರಲ್ಲಿ ನ್ಯಾಯವಾದಿಗಳಾಗಿದ್ದಾಗ ಅನೇಕ ನಿರ್ಗತಿಕ ನಿರ್ದೋಷಿ ವಿಚಾರಣಾ ಧೀನ ಖೈದಿಗಳಿಗೆ ಉಚಿತ ಕಾನೂನು ಸೇವೆ ನೀಡಿದ್ದಾರಲ್ಲದೆ ಬದುಕಿಗೆ ಹಣ ಸಹಾಯವನ್ನೂ ಸಹಾ ಮಾಡಿದ್ದಾರೆ.
ದಶಕಗಳಿಂದ ತಮ್ಮ ಜನ್ಮದಿನದಂದು ರಕ್ತದಾನ ಮಾಡುತ್ತಾ ಬಂದಿದ್ದಾರೆ. -ಎಚ್.ಬಿ.ಮಂಜುನಾಥ ದಾವಣಗೆರೆ-