Dingaleshwar Swamiji ಧಾರವಾಡ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸೆಡ್ಡು ಹೊಡೆದಿರುವ ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ದಿಂಗಾಲೇಶ್ವರ ಸ್ವಾಮೀಜಿ ಕೊನೆಗೂ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಇದರೊಂದಿಗೆ ಹುಬ್ಬಳ್ಳಿ – ಧಾರವಾಡ ಲೋಕಸಭಾ ಕ್ಷೇತ್ರ ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.
ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರ ಸಹ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಡುತ್ತಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ, ಕಾಂಗ್ರೆಸ್ನಿಂದ ವಿನೋದ ಅಸೂಟಿ ಅಖಾಡಕ್ಕಿಳಿದಿದ್ದಾರೆ. ಇನ್ನು, ತಮಗೆ ಎಲ್ಲಾ ಜಾತಿ, ಧರ್ಮದವರು, ರೈತ ಸಂಘಟನೆಗಳ ಬೆಂಬಲ ಇದೆ ಎನ್ನುತ್ತಿರುವ ದಿಂಗಾಲೇಶ್ವರ ಶ್ರೀ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ದಿಂಗಾಲೇಶ್ವರ ಶ್ರೀಗಳು ಮಧ್ಯಾಹ್ನ ಯಾವುದೇ ಮೆರವಣಿಗೆ ಇಲ್ಲದೇ, ನಾಲ್ವರೊಂದಿಗೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
Dingaleshwar Swamiji ದಿಂಗಾಲೇಶ್ವರ ಶ್ರೀಗಳು ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಟೌನ್ ಹಾಲ್ನಿಂದ ಮೆರವಣಿಗೆ ನಡೆಸಬೇಕಿತ್ತು. ಆದರೆ, ಮರೆವಣಿಗೆ ಮಾಡದೆ ಮೊದಲು ಸಾಂಕೇತಿಕವಾಗಿ ಒಂದು ಸೆಟ್ ನಾಮಪತ್ರವನ್ನು ಸಲ್ಲಿಸಿದರು. ಬಳಿಕ ಮೆರವಣಿಗೆ ಮೂಲಕ ಮತ್ತೊಮ್ಮೆ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.
ಈ ವೇಳೆ, ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಮೆರವಣಿಗೆ ಮಾಡಿ ಭಕ್ತರನ್ನು ಉದ್ದೇಶಿಸಿ ಮಾತನಾಡಿ ಬಳಿಕ ಮಾಧ್ಯಮಗಳಿಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದಷ್ಟೇ ಹೇಳಿ ತೆರಳಿದರು.