Lok Sabha Election ದೇಶದ ಸುಮಾರು 153 ಲೋಕಸಭಾ ಕ್ಷೇತ್ರಗಳಲ್ಲಿ ಈ ಬಾರಿಯ ಚುನಾವಣೆಗೆ ‘ಅರಣ್ಯ ಹಕ್ಕು’ಗಳೇ ನಿರ್ಣಾಯಕ ಅಂಶವಾಗಲಿದೆ ಎಂದು ಹೊಸ ವಿಶ್ಲೇಷಣೆ ಹೇಳಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಅರಣ್ಯದಂಚಿನ ಸಮುದಾಯಗಳ ಜನರು ಬಿಜೆಪಿಗೆ ಮತ ನೀಡಿದ್ದರು. ಪರಿಣಾಮ 153 ಕ್ಷೇತ್ರಗಳ ಪೈಕಿ 103ರಲ್ಲಿ ಬಿಜೆಪಿ ಗೆಲುವು ದಾಖಲಿಸಿತ್ತು.
2019ರಂತೆಯೇ ಈ ಬಾರಿಯೂ ‘ವಸುಂಧರಾ’ ಎನ್ನುವ ಸ್ವತಂತ್ರ ಸಂಸ್ಥೆಯ ಅರಣ್ಯ ಹಕ್ಕುಗಳ ಸಂಶೋಧಕರು ಶುಕ್ರವಾರ ಒಂದು ವಿಶ್ಲೇಷಣಾ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಈ ವರದಿಯಲ್ಲಿ 2006ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿತ್ತು. ಇದು ‘ಪರಿಶಿಷ್ಟ ಪಂಗಡ ಹಾಗೂ ಅರಣ್ಯವಾಸಿಗಳಿಗೆ ಶತಮಾನಗಳಿಂದ ಆಗುತ್ತಿದ್ದ ಅನ್ಯಾಯಗಳನ್ನು ನಿವಾರಿಸುವಲ್ಲಿ ಮೈಲುಗಲ್ಲು ಆಗಿತ್ತು. ಆದರೂ, 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 11 ಕ್ಷೇತ್ರಗಳನ್ನು ಗೆದ್ದುಕೊಂಡಿದೆ ಎಂದು ಹೇಳಲಾಗಿದೆ.
ಅರಣ್ಯ ಹಕ್ಕು ಕಾಯ್ದೆ(ಎಫ್‌ಆರ್‌ಎ) ವ್ಯಾಪ್ತಿಯ 153 ಕ್ಷೇತ್ರಗಳ ಪೈಕಿ 2019ರ ಚುನಾವಣೆಯಲ್ಲಿ ಬಿಜೆಪಿ 103, ಕಾಂಗ್ರೆಸ್ ಕೇವಲ 11 ಸ್ಥಾನಗಳನ್ನು ಗೆದ್ದಿತ್ತು. ಸುಮಾರು 79 ಕ್ಷೇತ್ರಗಳಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಬುಡಕಟ್ಟು ಜನರ ಹಕ್ಕುಗಳಿಗಾಗಿ ಮತ್ತು ಚಳವಳಿಗಳ ಒತ್ತಡದಿಂದ ಕಾಂಗ್ರೆಸ್ ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸಿತ್ತು. ಅತ್ಯಂತ ಮಹತ್ವದ ಈ ಕಾಯ್ದೆ 2019ರಲ್ಲಿ ಕಾಂಗ್ರೆಸ್‌ನ ಕೈ ಬಲಪಡಿಸುವಲ್ಲಿ ಸಹಕಾರಿಯಾಗಲಿಲ್ಲ.
ಅಂದಾಜು 40 ಮಿಲಿಯನ್ ಹೆಕ್ಟೇರ್ ಅರಣ್ಯ ಭೂಮಿ. ಅಂದರೆ, ಒಟ್ಟು ಅರಣ್ಯ ಪ್ರದೇಶದ ಶೇ. 50 ಕ್ಕಿಂತ ಹೆಚ್ಚು ಪ್ರದೇಶಗಳ ವಿವಿಧ ಸಮುದಾಯಗಳ ಜನರು ಗ್ರಾಮ ಸಭೆಗಳ ಮೂಲಕ ತಮ್ಮ ಹಕ್ಕುಗಳನ್ನು ಕೊಡಿಸುವಂತೆ ಆಗ್ರಹಿಸಿದ್ದಾರೆ.
‘ನಮ್ಮ ಅರಣ್ಯ ಹಕ್ಕುಗಳನ್ನು ನಮಗೆ ನೀಡಿ’ ಎಂದು ಬುಡಕಟ್ಟು ಹಾಗೂ ಅರಣ್ಯವಾಸಿ ಸಮುದಾಯಗಳು 86 ಲೋಕಸಭಾ ಕ್ಷೇತ್ರಗಳಲ್ಲಿ ಬೇಡಿಕೆ ಇರಿಸಿವೆ. ಈ ಕ್ಷೇತ್ರಗಳಲ್ಲಿ ಈ ಸಮುದಾಯಗಳ ಮತದಾರರು ಶೇ 30ರಷ್ಟಿದ್ದಾರೆ. ಇಷ್ಟು ಮತಗಳು ಈ ಎಲ್ಲಾ ಕ್ಷೇತ್ರಗಳಲ್ಲಿ ನಿರ್ಣಾಯಕವಾಗಲಿವೆ. ಇನ್ನು 45 ಕ್ಷೇತ್ರಗಳಲ್ಲಿ ಇದೇ ಸಮುದಾಯದ ಮತದಾರರ ಪ್ರಮಾಣ ಶೇ 40ರಷ್ಟಿದೆ. ಈ 45 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಈಗಿನ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.
ವಸುಂಧರಾ ಸಂಸ್ಥೆಯ ಸದಸ್ಯ ತುಷಾರ್ ದಾಸ್ ಪ್ರಕಾರ, ಅರಣ್ಯ ವಾಸಿಗಳು ತಮ್ಮ ಹಕ್ಕುಗಳ ಕಾನೂನು ಮಾನ್ಯತೆಯಾಗಿ ಒತ್ತಾಯಿಸುತ್ತಿದ್ದಾರೆ.
Lok Sabha Election 2019ರಲ್ಲಿ ಈ ಸಮುದಾಯದ ಜನರು ಬಿಜೆಪಿಗೆ ಬಹುಮತ ನೀಡಿದ್ದಾರೆ. ಆದರೆ, 2019ರ ನಂತರ ಅರಣ್ಯ ಕಾನೂನುಗಳಲ್ಲಿ ಬದಲಾವಣೆಯಾಗಿದೆ. ಅರಣ್ಯವಾಸಿಗಳಿಗೆ ತಮ್ಮನ್ನು ಒಕ್ಕಲೆಬ್ಬಿಸುವ ಆತಂಕ ಎದುರಾಗಿದೆ. ಇವೆಲ್ಲವೂ ಚುನಾವಣೆಯ ಮೇಲೆ ಹೇಗೆ ಬೇಕಾದರೂ ಪರಿಣಾಮ ಬೀರಬಹುದು.
2006ರ ಅರಣ್ಯ ಹಕ್ಕು ಕಾಯಿದೆಯು ಕನಿಷ್ಠ ಮೂರು ತಲೆಮಾರು ಅಥವಾ 75 ವರ್ಷಗಳಿಂದ ತಮ್ಮ ಭೂಮಿಯಲ್ಲಿ ವಾಸಿಸುತ್ತಿರುವ ಅರಣ್ಯವಾಸಿಗಳಿಗೆ ಮಾಲೀಕತ್ವದ ಹಕ್ಕುಗಳನ್ನು ನೀಡುವ ಭರವಸೆ ನೀಡುತ್ತದೆ. ಈ ಜನರು ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿರುವ ಅರಣ್ಯ ಭೂಮಿಯ ಮೇಲೆ ಮಾಲೀಕತ್ವ ಸ್ಥಾಪಿಸುವ ಹಕ್ಕನ್ನು ಕಾಯ್ದೆ ಒದಗಿಸುತ್ತದೆ.
ಲೋಕಸಭೆ ಚುನಾವಣೆಗೆ ಬಿಜೆಪಿ ಇನ್ನೂ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ಆದರೆ, ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, “ಪ್ರತ್ಯೇಕ ಬಜೆಟ್ ಮತ್ತು ಕ್ರಿಯಾ ಯೋಜನೆಗಳ ಮೂಲಕ ಅರಣ್ಯ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಮಿಷನ್ ಅನ್ನು ಸ್ಥಾಪಿಸುವ ಭರವಸೆ ನೀಡಿದೆ.
ಕೇಂದ್ರ ಸರ್ಕಾರವು ಕಳೆದ ನವೆಂಬರ್‌ನಲ್ಲಿ 24,000 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನವನ್ನು ಪ್ರಾರಂಭಿಸಿತ್ತು.
ಇದು ನಿರ್ದಿಷ್ಟವಾಗಿ ಬುಡಕಟ್ಟು ಜನರಿಗೆ ವಸತಿ, ರಸ್ತೆಗಳು, ನೈರ್ಮಲ್ಯ, ಶುದ್ಧ ಕುಡಿಯುವ ನೀರು, ವಿದ್ಯುತ್ ಮತ್ತು ವೃತ್ತಿಪರ ಶಿಕ್ಷಣವನ್ನು ಒದಗಿಸುವ ಗುರಿ ಹೊಂದಿದೆ. ಇವೆಲ್ಲವೂ ಚುನಾವಣೆಯಲ್ಲಿ ಹೇಗೆ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.