Avadhuta Premium League ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರ ನೇತೃತ್ವದಲ್ಲಿ ರಾಜ್ಯಮಟ್ಟದಲ್ಲಿ ಆಯೋಜಿಸಿದ್ದ ಅವಧೂತ ಪ್ರೀಮಿಯರ್ ಲಿಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ತಂಡ ಚಾಂಪಿಯನ್ ಆಗಿ ಗೆಲುವು ಮುಡಿಗೇರಿಸಿಕೊಂಡಿದೆ.
ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕ ಸೇವಾ ಟ್ರಸ್ಟ್ ವತಿಯಿಂದ ತುಮಕೂರಿನಲ್ಲಿ ಎಸ್‌ಎಸ್‌ಐಟಿ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅವಧೂತ ಪ್ರೀಮಿಯರ್ ಲೀಗ್ 2024 ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಶಿವಮೊಗ್ಗ ತಂಡಕ್ಕೆ ಸಮನ್ವಯ ಟ್ರಸ್ಟ್ ಹಾಗೂ ಅವಧೂತ ಪರಂಪರೆ ಭಕ್ತರು ಶುಭಕೋರಿದ್ದಾರೆ.
ಎರಡು ದಿನಗಳ ಕಾಲ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಕರ್ನಾಟಕದ 8 ಜಿಲ್ಲೆಗಳಿಂದ ತಂಡಗಳು ಆಗಮಿಸಿದ್ದವು. ಶಿವಮೊಗ್ಗ ಜಿಲ್ಲೆಯ ತಂಡ ಪ್ರಥಮ ಸ್ಥಾನ ಗಳಿಸಿ 40 ಸಾವಿರ ರೂ. ನಗದು ಬಹುಮಾನ ಹಾಗೂ ಟ್ರೋಫಿ ಗೆದ್ದುಕೊಂಡಿದೆ. ಶ್ರೀ ಹರ್ಷ ತಂಡದವರು ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿದ್ದರು.
ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರು ಮಾತನಾಡಿ, ಯುವ ಸಮೂಹ ಕ್ರೀಡೆಗೆ ಒತ್ತು ನೀಡುವುದರ ಜತೆಯಲ್ಲಿ ಪೂಜೆ, ಧ್ಯಾನ, ಜಪ ಕಾರ್ಯಕ್ರಮಗಳಲ್ಲೂ ತೊಡಗುವ ಮೂಲಕ ಶಿಕ್ಷಣಾಭ್ಯಾಸಕ್ಕೂ ಆದ್ಯತೆ ನೀಡಬೇಕು. ಆಧ್ಯಾತ್ಮಿಕ ಹಾಗೂ ಪಠ್ಯೇತರ ಚಟುವಟಿಕೆಯೂ ಮುಖ್ಯ ಎಂದು ತಿಳಿಸಿದರು.
Avadhuta Premium League ಅವಧೂತ ಪ್ರೀಮಿಯರ್ ಲೀಗ್ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ಮೊದಲ ಅವಧೂತ ಪ್ರೀಮಿಯರ್ ಲೀಗ್ ಪಂದ್ಯಾವಳಿ ಅತ್ಯಂತ ಯಶಸ್ವಿ ಆಗಿದ್ದು, ಪೂಜ್ಯ ಗುರುಗಳ ಮಾರ್ಗದರ್ಶನಲ್ಲಿ ನಿರಂತರವಾಗಿ ಸಾಮಾಜಿಕ, ಧಾರ್ಮಿಕ ಹಾಗೂ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಗುಂಡ್ಲುಪೇಟೆ ತಂಡವು ದ್ವಿತೀಯ ಸ್ಥಾನ ಹಾಗೂ ತುಮಕೂರು ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಅವಧೂತ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಕಾರ್ಯಕ್ರಮದಲ್ಲಿ ಗಾಯಕ ಚಂದನ್ ಶೆಟ್ಟಿ, ಬಿಗ್ ಬಾಸ್ ನೀತು ವನಜಾಕ್ಷಿ, ಗಿರೀಶ್ ಶಿವಣ್ಣ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಗಣ್ಯರು ಆಗಮಿಸಿ ಭಾಗವಹಿಸಿದ್ದರು.