K.S.Eshwarappa ರಾಜ್ಯದಲ್ಲಿ ಪಕ್ಷವನ್ನು ಯಡಿಯೂರಪ್ಪ, ಈಶ್ವರಪ್ಪ, ಅನಂತಕುಮಾರ್ ಸೇರಿ ಕಟ್ಟಿದ್ದಾರೆ. ಅಧಿಕಾರ ಮಾತ್ರ ಯಡಿಯೂರಪ್ಪ ಕುಟುಂಬಕ್ಕೆ ಇರಲಿ ಎಂದು ವಿಜಯೇಂದ್ರ ಬಹಿರಂಗವಾಗಿ ಹೇಳಲಿ ಎಂದು ಮಾಜಿ ಸಚಿವ, ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ ನಗರದ ಶುಭಮಂಗಳ ಕಲ್ಯಾಣ ಮಂದಿರದ ಆವರಣದಲ್ಲಿ ಭಾನುವಾರ ರಾಷ್ಟ್ರ ಭಕ್ತರ ಬಳಗ ವತಿಯಿಂದ ಆಯೋಜಿಸಿದ್ದ ಶಿವಮೊಗ್ಗ ನಗರ ಬೂತ್ ಸಮಿತಿಯ ಕಾರ್ಯಕರ್ತರ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಸ್ಪರ್ಧೆ ಮಾಡಬಾರದು ಎಂದರೆ ವಿಜಯೆಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಈಶ್ವರಪ್ಪ ಕೇಂದ್ರದ ನಾಯಕರ ಜೊತೆ ಮಾತನಾಡುತ್ತಿದ್ದಾರೆ ಎಂದು ಹೇಳಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ಹರಿಹಾಯ್ದರು.
ವಿಜಯೇಂದ್ರ ಅವರ ಅಪ್ಪ ಕೇಂದ್ರದ ಚುನಾವಣ ಸಮಿತಿ ಅಧ್ಯಕ್ಷ. ಅವರಣ್ಣ ರಾಘವೇಂದ್ರ ಸಂಸದ, ವಿಜಯೇಂದ್ರ ಶಾಸಕ, ಆರು ತಿಂಗಳು ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇಟ್ಟು ಹಠ ಮಾಡಿ ರಾಜ್ಯಾಧ್ಯಕ್ಷ ಸ್ಥಾನ ತೆಗೆದೊಕೊಂಡಿದ್ದಾರೆ. ಎಲ್ಲಾ ಅಧಿಕಾರ ಯಡಿಯೂರಪ್ಪ ಮತ್ತು ಅವರ ಮಕ್ಕಳ ಕೈನಲ್ಲಿ ಇರಬೇಕಾ..? ಲಿಂಗಾಯತರು ಬೇಕೆಂದರೆ ಯತ್ನಾಳ್ ಗೆ , ಒಕ್ಕಲಿಗರು ಬೇಕೆಂದರೆ ಸಿ.ಟಿ.ರವಿಗೆ, ಓಬಿಸಿ ಬೇಕೆಂದರೆ ನನಗೆ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟು ಕೊಡಲಿ ನೋಡೋಣ ಎಂದು ಸವಾಲು ಎಸೆದರು.
ನನಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೊದಲು ಈಶ್ವರಪ್ಪ ಗೆಲ್ಲಲ್ಲಿ ಬಿಡು ನೀನು ವಾಪಸ್ ತೆಗೆದುಕೋ ಅಂತಾ ನಿಮ್ಮಣ್ಣ ರಾಘವೇಂದ್ರ ಅವರಿಗೆ ಹೇಳು. ನಾನು ಈಗಲೂ ಕೂಡಾ ಬಿಜೆಪಿ ಕಾರ್ಯಕರ್ತ. ನಾನು ಸ್ಪರ್ಧೆ ಮಾಡಲು ನಿರ್ಧರಿಸಿ ಆಗಿದೆ
ನಾನು ಸ್ಪರ್ಧೆ ಮಾಡಿದರೆ ಬಿಜೆಪಿಯವರು ಏನು ಮಾಡಬಹುದು ಉಚ್ಚಾಟನೆ ಮಾಡಬಹುದು. ಅಷ್ಟೇ ತಾನೇ ಇನ್ನೇನೂ ಮಾಡಲು ಸಾಧ್ಯ. ನಾನೇನು ಪಕ್ಷ ಬಿಟ್ಟು ಹೋಗಿದ್ದೇನಾ? ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿಗೆ ಹೋಗಿದ್ದರು. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಹೋಗಿ ಮತ್ತೆ ಪಕ್ಷಕ್ಕೆ ಸೇರಿ ಟಿಕೆಟ್ ತೆಗೆದುಕೊಂಡಿದ್ದಾರೆ. ನಾನೇನು ಹಾಗೆ ಮಾಡಿದ್ದೇನಾ? ನಾನು ಈ ಬಾರಿ 3 ಲಕ್ಷ ಅಂತರದಲ್ಲಿ ಗೆಲ್ಲುತ್ತೇನೆ. ಗೆದ್ದ ನಂತರ ಬಿಜೆಪಿಗೆ ಮತ್ತೆ ಸೇರುತ್ತೇನೆ. ಮುಂಬರುವ ಕಾರ್ಪೋರೇಷನ್ ಚುನಾವಣೆಗೆ ನಾನೇ ಟಿಕೇಟ್ ಕೊಡೋದು ಎಂದು ಹೇಳಿದರು.
K.S.Eshwarappa ಕೇಂದ್ರದ ನಾಯಕರು ದೆಹಲಿಗೆ ಕರೆಸಿದಾಗ ಅವರನ್ನು ಭೇಟಿಯಾಗಲು ಆಗಲಿಲ್ಲ. ಇದರ ಅರ್ಥ ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಪಕ್ಷವನ್ನು ಮುಕ್ತ ಮಾಡಬೇಕಿದೆ. ಅಪ್ಪ ಮಕ್ಕಳ ಕೈನಿಂದ ಪಕ್ಷವನ್ನು ಉಳಿಸಿ ಚುನಾವಣೆಯಲ್ಲಿ ರಾಘವೇಂದ್ರರನ್ನು ಸೋಲಿಸಲಿ ಎಂಬ ಅರ್ಥ ಎಂದು ತಿಳಿದುಕೊಳ್ಳಲಿ ಎಂದು ಕುಟುಕಿದರು.
ಈಶ್ವರಪ್ಪ ಪಕ್ಷ ಕಟ್ಟಿ ಮನೆಯಲ್ಲಿ ನೀವು, ನಿಮ್ಮಪ್ಪ ಅಧಿಕಾರದಲ್ಲಿ ಇರುತ್ತೇವೆ ಎನ್ನವುದು ಯಾವ ನ್ಯಾಯ. ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ನಮ್ಮ ನಾಯಕ ಎಂದು ಹೇಳಿಕೊಂಡು ಯತ್ನಾಳ್, ಅನಂತ ಕುಮಾರ್ ಹೆಗ್ಗಡೆ, ಪ್ರತಾಪ್ ಸಿಂಹ, ಸಿ.ಟಿ.ರವಿ, ಸದಾನಂದ ಗೌಡ ಎಲ್ಲರನ್ನೂ ಪಕ್ಕಕ್ಕೆ ಇಟ್ಟಿದ್ದೀರ ಇನ್ನು ಎಷ್ಟು ಜನಕ್ಕೆ ಪಕ್ಕಕ್ಕೆ ಕೂರಿಸುತ್ತೀರಾ?
ಇದರಿಂದ ಕಾರ್ಯಕರ್ತರಲ್ಲರೂ ನೋವಿನಲ್ಲಿದ್ದಾರೆ. ಅವರೆಲ್ಲರ ನೋವಿಗೆ ಪರಿಹಾರ ತರಲು ನಾನು ಚುನಾವಣೆಗೆ ನಿಂತಿದ್ದೇನೆ. ಚುನಾವಣೆಯಲ್ಲಿ ಗೆದ್ದು ಹಿಂದುತ್ವಕ್ಕಾಗಿ ಹೋರಾಡಿದ ಅವರಿಗೆಲ್ಲಾ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ಕೊಡುತ್ತೇನೆ ಎಂದರು.
ನಾನು ಹಿಂದೆ ವಿಧಾನ ಸಭಾ ಚುನಾವಣೆಯಲ್ಲಿ ಐದು ಬಾರಿ ಶಾಸಕನಾಗಿ ಗೆದ್ದಿದ್ದೇನೆ. ಈಗ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮಾಡಿದ್ದೇನೆ. ಹಿಂದೆ ನನಗೆ ದೊರಕಿದ ಜನರ ಬೆಂಬಲಕ್ಕಿಂತ ಈಗ ನಾಲ್ಕು ಪಟ್ಟು ಹೆಚ್ಚು ಜನ ನನಗೆ ಬೆಂಬಲ ಕೊಡುತ್ತಿದ್ದಾರೆ. ಯಾವ ಹಳ್ಳಿ ಕಡೆ ಹೋದರು ನಿಮಗೆ ಅನ್ಯಾಯವಾಗಿದ. ನಿಮಗೆ ಓಟ್ ಹಾಕುತ್ತೇವೆ ಎಂದರು.
ಹಳ್ಳಿಯಲ್ಲಿರುವ ರೈತನ ಮಕ್ಕಳು ಹೇಳಿತ್ತಿದ್ದಾರೆ. ನನ್ನ ಜೀವನದಲ್ಲಿ ಎಂದೂ ಕೂಡ ಇಷ್ಟೊಂದು ಪ್ರೋತ್ಸಾಹ ನೋಡಿರಲಿಲ್ಲ ಎಂದರು.
ಬೂತ್ ಮಟ್ಟದ ಸಮಾವೇಶಕ್ಕೆ 285 ಬೂತ್ ನಿಂದ ಹನ್ನೆರಡು ಜನ ಬರಲು ಸೂಚನೆ ನೀಡಲಾಗಿತ್ತು. ಆದರೆ, ಹೇಳಿದಕ್ಕಿಂತ ನಾಲ್ಕೈದು ಜನ ಹೆಚ್ಚಾಗಿ ಬಂದಿದ್ದಾರೆ. ಆದ್ದರಿಂದ ಆಸನಗಳ ಕೊರತೆ ಉಂಟಾಗಿತ್ತು. ಮತ್ತಷ್ಟು ಆಸನಗಳನ್ನು ತರಿಸಿ ವ್ಯವಸ್ಥೆ ಮಾಡಲಾಗಿದೆ. ಬೂತ್ ಮಟ್ಟದ ಕಾರ್ಯಕ್ರಮ ಬಹಳ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಸಾಗರ, ಸೊರಬ ವಿಧಾನ ಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದೆ. ಸೊರಬದಲ್ಲಿ ಕಾರ್ಯಾಲಯ ಉದ್ಘಾಟನೆಯಾಗಿ ಅಲ್ಲಿಯೂ ಸಹ ಕೆಲಸ ಆರಂಭವಾಗಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಿಂದ ಬೆಂಬಲ ಪ್ರೋತ್ಸಾಹ ಹೆಚ್ಚಾಗಿ ಸಿಗುತ್ತಿದೆ ನೂರಕ್ಕೆ ನೂರು ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.