DC Shivamogga ಶಿವಮೊಗ್ಗ ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ತುರ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಮೇಲೆ ನಿಗಾ ವಹಿಸಬೇಕು. ಅಧಿಕಾರಿಗಳು ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಇದೆಯೇ ಎಂದು ಪರಿಶೀಲಿಸುತ್ತಿರಬೇಕು ಎಂದು ಸೂಚನೆ ನೀಡಿದ ಅವರು, ಕುಡಿಯುವ ನೀರು ಸಮಸ್ಯೆ ಇರುವ ಗ್ರಾಮಗಳಿಗೆ ಅಗತ್ಯವಾಗಿ ಬೇಕಾಗಿರುವ ಕಾಮಗಾರಿಗಳ ಕುರಿತು ತಾಲ್ಲೂಕು ಟಾಸ್ಕ್‍ಫೋರ್ಸ್ ಸಮಿತಿ ಸಲ್ಲಿಸಿರುವ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ, ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
159 ಕಾಮಗಾರಿಗೆ ಅನುಮೋದನೆ :ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಬೋರ್, ಪೈಪ್‍ಲೈನ್, ರಿ-ಡ್ರಿಲ್ ಸೇರಿದಂತೆ ಕುಡಿಯುವ ನೀರಿಗೆ ಸಂಬಂಧಿಸಿದ ಒಟ್ಟು ರೂ.272.93 ಲಕ್ಷ ಮೊತ್ತದ 159 ಕಾಮಗಾರಿಗಳಿಗೆ ಜಿ.ಪಂ.ಸಿಇಓ ಅನುಮೋದನೆ ನೀಡಿದರು.
DC Shivamogga ಕುಡಿಯುವ ನೀರಿಗೆ ಸಮಸ್ಯೆ ಇರುವ ಶಿಕಾರಿಪುರ, ಸೊರಬ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳ ಕಡೆ ಹೆಚ್ಚಿನ ಗಮನ ಹರಿಸಬೇಕು. ಹಾಗೂ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಕಂಡು ಬಂದಲ್ಲಿ ಶೀಘ್ರ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ರಿಪೇರಿಗೆ ಬಂದಿರುವ ಆರ್‍ಓ ಪ್ಲಾಂಟ್‍ಗಳನ್ನು ತಕ್ಷಣ ರಿಪೇರಿ ಪಡಿಸಬೇಕು. ಒಂದ ಘಟಕ ಕೂಡ ಕಾರ್ಯ ನಿರ್ವಹಿಸದೇ ಇರಬಾರದು. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮತ್ತು ಗ್ರಾ.ಪಂ ಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವ ಮೂಲಕ ಸಮಸ್ಯೆಗಳು ಬಾರದಂತೆ ತಡೆಯಬೇಕೆಂದರು.
ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲಿ ಸಹ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಯಲ್ಲಿದ್ದು, ಇದೊಂದು ಉತ್ತಮ ಯೋಜನೆಯಾಗಿದೆ. ಮಕ್ಕಳು ಇದರ ಸದುಪಯೋಗ ಪಡೆಯಬೇಕು. ಯಾವುದಾದರೂ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಈ ಕೂಡಲೇ ಪಟ್ಟಿ ಮಾಡಿ ನೀಡುವಂತೆ ತಿಳಿಸಿದರು.
ಬೇಸಿಗೆಯಲ್ಲಿ ಉಷ್ಣಾಂಶ ಏರುತ್ತಿದ್ದು, ಆರೋಗ್ಯ ಇಲಾಖೆಯಿಂದ ಜಿಲ್ಲೆಯಾದ್ಯಂತ ಬಿಸಿತಾಪ ನಿರ್ವಹಣೆ ಕುರಿತಾದ ಕ್ರಿಯಾ ಯೋಜನೆ ಸಿದ್ದಪಡಿಸಿಟ್ಟುಕೊಳ್ಳಬೇಕು. ಹಾಗೂ ಬಿಸಿತಾಪ ನಿರ್ವಹಿಸಲು ಏನೇನು ಕ್ರಮಗಳನ್ನು ಕೈಗೊಳ್ಳಬೇಕು, ಸಾರ್ವಜನಿಕರು ಏನು ಮಾಡಬೇಕು, ಮಾಡಬಾರದು ಎಂಬ ಕುರಿತಾದ ಪೋಸ್ಟರ್‍ನ್ನು ಸಿದ್ದಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬೇಕು. ಹೀಟ್‍ವೇವ್‍ಗೆ ಸಂಬಂಧಿಸಿದ ಔಷಧ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಡಿಹೆಚ್‍ಓ ರವರಿಗೆ ಸೂಚನೆ ನೀಡಿದರು.
ಎಲ್ಲಿ ಕುಡಿಯುವ ನೀರಿನ ಅವಶ್ಯಕತೆ ಇದೆಯೋ ಅಲ್ಲಿ ಶೀಘ್ರವಾಗಿ ಕೆಲಸಗಳು ಆಗಬೇಕು. ಹಾಗು ಕೃಷಿ ಜಂಟಿ ನಿರ್ದೇಶಕರು ಸಹ ತಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಅಭಿಯಂತರ ರಾಜೇಂದ್ರ ಪ್ರಸಾದ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ, ಡಿಹೆಚ್‍ಓ ಡಾ.ನಟರಾಜ್, ಡಿಎಸ್‍ಓ ಡಾ.ಓ.ಮಲ್ಲಪ್ಪ, ಡಿಡಿಪಿಐ ಪರಮೇಶ್ವಪ್ಪ ಇತರೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.