K.S.Eshwarappa ದೆಹಲಿ ನಾಯಕರು ನನ್ನೊಂದಿಗೆ ಮಾತನಾಡುವ ಬದಲು, ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದೇ ಪರಿಹಾರ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಅವರು, “ವಿಜಯೇಂದ್ರ ಅಷ್ಟೆಲ್ಲಾ ಯಾಕೆ ಕಷ್ಟಪಡ್ತಿಯಾ? ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಡು. ದೆಹಲಿ ನಾಯಕರು ಈಶ್ವರಪ್ಪನವರೊಂದಿಗೆ ಮಾತನಾಡುವ ವಿಶ್ವಾಸವಿದೆ ಎಂದು ಹೇಳುವುದಾದರೆ, ಈಶ್ವರಪ್ಪ ಸ್ಪರ್ಧೆ ಮಾಡಬಾರದು ಎಂಬ ಆಸೆ ನಿನ್ನಲ್ಲಿದ್ರೆ, ಒಂದೇ ಕುಟುಂಬದಲ್ಲಿ ಎಲ್ಲವನ್ನೂ ಇಟ್ಟುಕೊಂಡಿದ್ದೀರಲ್ಲ. ನೀನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು. ಕೇಂದ್ರದ ನಾಯಕರು ನನ್ನೊಂದಿಗೆ ಮಾತನಾಡುತ್ತಾರೆ ಎಂದು ಹೇಳಲು ನಿಮಗೆ ಅಧಿಕಾರ ಕೊಟ್ಟವರು ಯಾರು” ಎಂದು ಗರಂ ಆದರು.
“ಕೇಂದ್ರದ ನಾಯಕರಿಗೆ ಏನ್ ಮಾಡಬೇಕು ಅಂತ ಗೊತ್ತಿದೆ. ಅಮಿತ್ ಶಾ ನನ್ನನ್ನು ದೆಹಲಿಗೆ ಕರೆದರು. ಆದರೆ ಮಾತನಾಡಲಿಲ್ಲ. ಇದರ ಅರ್ಥ ಯಡಿಯೂರಪ್ಪ ಕುಟುಂಬದಿಂದ ಭಾರತೀಯ ಜನತಾ ಪಾರ್ಟಿಯನ್ನು ಮುಕ್ತ ಮಾಡಬೇಕು ಅನ್ನೋದು. ಅಪ್ಪ ಮಕ್ಕಳಿಂದ ಪಕ್ಷವನ್ನು ಹೊರತರಬೇಕಾದರೆ, ಚುನಾವಣೆಯಲ್ಲಿ ಸ್ಪರ್ಧಿಸಿ ರಾಘವೇಂದ್ರರನ್ನು ಸೋಲಿಸಿ, ಗೆಲ್ಲು ಎಂಬ ಆದೇಶವನ್ನು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕೊಟ್ಟಿದ್ದಾರೆ. ಇದನ್ನು ವಿಜಯೇಂದ್ರ ಅರ್ಥ ಮಾಡಿಕೊಳ್ಳಬೇಕು” ಎಂದರು.
“ಕೇಂದ್ರ ಚುನಾವಣಾ ಸಮಿತಿ ಸದಸ್ಯ ನಿಮ್ಮಪ್ಪ, ಸಂಸದ ನಿಮ್ಮ ಅಣ್ಣ, ನೀನು ಶಾಸಕ. ಆರು ತಿಂಗಳು ಅಧ್ಯಕ್ಷ ಸ್ಥಾನ ಖಾಲಿ ಇಟ್ಟು ನೀವು ಅಧ್ಯಕ್ಷ ಸ್ಥಾನ ತೆಗೆದುಕೊಂಡ್ರಿ. ಎಲ್ಲಾ ನಿಮ್ಮ ಕುಟುಂಬಕ್ಕೇ ಬೇಕು. ಬಿಟ್ಟು ಕೊಡು, ನನಗೆ ಕೊಡುತ್ತಿಯಾ ಕೊಡು. ಲಿಂಗಾಯತರೇ ಬೇಕಂದ್ರೆ ಯತ್ನಾಳ್ಗೆ ಕೊಡು, ಒಕ್ಕಲಿಗರಿಗೆ ಕೊಡುವುದಾದರೆ ಪ್ರತಾಪ್ ಸಿಂಹ ಇಲ್ಲವೇ ಸಿ.ಟಿ.ರವಿಗೆ ಕೊಡು. ಒಬಿಸಿಯಲ್ಲಿ ನಮಗೆ ಕೊಡು. ಈಶ್ವರಪ್ಪ ಪಕ್ಷ ಕಟ್ಟಿದ್ದಾರೆ, ನೀನು ಮನೆಯಲ್ಲಿರು. ನಾನು ನಮ್ಮಪ್ಪ, ನಮ್ಮಣ್ಣ ಚೆನ್ನಾಗಿರುತ್ತೇವೆ. ಇದು ಯಾವ ನ್ಯಾಯ ಎಂದರು.
“ನೀವು ಜನರ ದಾರಿ ತಪ್ಪಿಸುವಂತಹ ಕೆಲಸ ಮಾಡಬೇಡಿ. ಈಶ್ವರಪ್ಪ ನಮ್ಮ ನಾಯಕ ಅಂತ ಮೂಲೆಯಲ್ಲಿ ಕೂರಿಸುವ ಕೆಲಸ ಮಾಡಿದ್ದೀರಿ. ಪಕ್ಷದಲ್ಲಿ ಪಕ್ಕಕ್ಕೆ ಸರಿಸಿರುವವರ ಪರವಾಗಿ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೇನೆ. ಹಿಂದೂತ್ವದಲ್ಲಿ ಇರುವವರಿಗೆ ನ್ಯಾಯ ಸಿಗುತ್ತದೆ ಎಂದು ಸ್ಪರ್ಧಿಸಿದ್ದೇನೆ” ಎಂದರು.
K.S.Eshwarappa ಮೋದಿ ಫೋಟೊ ಬಳಕೆಗೆ ಕೇವಿಯಟ್: “ಮೋದಿ ವಿಶ್ವ ನಾಯಕ. ಅವರನ್ನು ಬಳಸಿಕೊಳ್ಳಬೇಡಿ ಎಂದು ಇದುವರೆಗೂ ಯಾರೂ ಹೇಳಿಲ್ಲ. ಅವರು ನನ್ನ ಹೃದಯದಲ್ಲಿದ್ದಾರೆ. ಯಡಿಯೂರಪ್ಪ ಹಾಗೂ ಅವರ ಮಕ್ಕಳ ಹೃದಯದಲ್ಲಿ ಯಾರಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಅವರು ಕೋರ್ಟ್ಗೆ ಹೋಗಿದ್ದಾರಂತೆ. ಅಲ್ಲಿ ನ್ಯಾಯ ನಮಗೆ ಸಿಗುತ್ತದೆಯೋ, ಅವರಿಗೆ ಸಿಗುತ್ತದೆಯೋ ಗೊತ್ತಿಲ್ಲ. ಆದರೆ ನಮ್ಮ ಹೃದಯದಲ್ಲಿ ಇರುವ ಮೋದಿಯನ್ನು ಅಳಿಸಲು ಯಾರೂ ಇಲ್ಲ. ಚುನಾವಣಾ ಆಯೋಗಕ್ಕೆ ಹೋಗಬಹುದೆಂದು ನಾವೇ ನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಕೆ ಮಾಡಿದ್ದೇವೆ” ಎಂದು ತಿಳಿಸಿದರು.