DC Shivamogga ಲೋಕಸಭೆ ಸಾರ್ವತ್ರಿಕ ಚುನಾವಣೆ -2024 ರ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿ ಮತ್ತು ಜಾಹೀರಾತುಗಳು, ಪೇಯ್ಡ್ ನ್ಯೂಸ್ ಮತ್ತಿತರ ವಿಷಯಗಳ ಬಗ್ಗೆ ನಿಗಾ ವಹಿಸಲು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯು(ಡಿಸ್ಟ್ರಿಕ್ಟ್ ಮೀಡಿಯಾ ಆಂಡ್ ಮಾನಿಟರಿಂಗ್ ಕಮಿಟಿ) ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಭಾರತದ ಸರ್ವೋಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗ ವಿವಿಧ ಹಂತಗಳಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯನ್ನು ರಚಿಸಿದ್ದು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ರಾಜಕೀಯ ಸ್ವರೂಪದ ಜಾಹಿರಾತುಗಳನ್ನು ಪ್ರಸಾರ ಮಾಡುವ ಮುನ್ನ ಕಡ್ಡಾಯವಾಗಿ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯಿಂದ ಅನುಮೋದನೆ ಪಡೆದುಕೊಳ್ಳಬೇಕಾಗಿದೆ.
ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹಿರಾತುಗಳು, ಸುದ್ದಿರೂಪದ ಜಾಹಿರಾತುಗಳ ಬಗ್ಗೆ ನಿಗಾ ವಹಿಸಿ ಚುನಾವಣಾಧಿಕಾರಿಗಳಿಗೆ ಹಾಗೂ ವೆಚ್ಚ ವೀಕ್ಷಕರಿಗೆ ದಿನವಹಿ ವರದಿಯನ್ನು ಸಮಿತಿ ನೀಡಲಿದೆ.
ದೂರದರ್ಶನ, ರೇಡಿಯೋ, ಕೇಬಲ್ ಟೆಲಿವಿಷನ್, ಹಾಗೂ ಸುದ್ದಿಪತ್ರಿಕೆಗಳು (ಪತ್ರಿಕಾ ಮಾಧ್ಯಮಗಳು ಆನ್‍ಲೈನ್ ಸಂಚಕೆ ಹೊಂದಿರುವುದರಿಂದ ಅದನ್ನು ವಿದ್ಯುನ್ಮಾನ ಸ್ವರೂಪದ ಜಾಹೀರಾತು ಎಂದು ಪರಿಗಣಿಸಲಾಗುತ್ತದೆ), ಸೋಷಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್ ಮುಂತಾದ ವಿದ್ಯುನ್ಮಾನ ಸ್ವರೂಪದ ಜಾಹಿರಾತುಗಳನ್ನು ಪ್ರಸಾರ ಮಾಡುವ ಮುನ್ನ ಎಂಸಿಎಂಸಿ ವತಿಯಿಂದ ಕಡ್ಡಾಯವಾಗಿ ಅನುಮೋದನೆ ಪಡೆದುಕೊಳ್ಳಬೇಕು.
ಮಾಧ್ಯಮಗಳ ಪ್ರಸಾರದ ಮೇಲೆ ನಿಗಾವಹಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೀಡಿಯಾ ಮಾನಿಟರಿಂಗ್ ಸೆಲ್ ಸ್ಥಾಪಿಸಲಾಗಿದ್ದು, ಇಲ್ಲಿ ಚುನಾವಣಾ ಕರ್ತವ್ಯನಿರತ ಅಧಿಕಾರಿ/ಸಿಬ್ಬಂದಿಗಳು ಎಲ್ಲಾ ಮಾಧ್ಯಮಗಳ ಪ್ರಸಾರ/ಪ್ರಕಟಣೆ ಮೇಲೆ ನಿಗಾವಹಿಸುವರು.
DC Shivamogga ಸೋಷಿಯಲ್ ಮೀಡಿಯಾ ಒಳಗೊಂಡಂತೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡಲು ಉದ್ದೇಶಿಸಿರುವ ಜಾಹೀರಾತು ವಿಷಯ ಪ್ರಮಾಣೀಕರಣಕ್ಕೆ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ನಿಗಧಿತ ನಮೂನೆಗಳಲ್ಲಿ ಜಿಲ್ಲಾ ಎಂಸಿಎಂಸಿ ಸಮಿತಿಗೆ ಅರ್ಜಿ ಸಲ್ಲಿಸಬೇಕಾಗಿದ್ದು, ಈ ಕುರಿತು ಅನುಮೋದನೆಯನ್ನು ಪಡೆಯಲು ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಭವನ, ಶಿವಮೊಗ್ಗ ಇಲ್ಲಿ ಸಂಪರ್ಕಿಸಬಹುದಾಗಿದೆ.
ಒಂದು ವೇಳೆ ಅನುಮೋದನೆ ಪಡೆಯದೇ ಜಾಹಿರಾತು ಪ್ರಸಾರವಾದಲ್ಲಿ ಅದನ್ನು ಚುನಾವಣಾ ಅಕ್ರಮ ಎಂದು ಪರಿಗಣಿಸಲಾಗುವುದು. ಮಾಧ್ಯಮ ಕಣ್ಗಾವಲು ಸಮಿತಿಯು ಈ ಬಗ್ಗೆ ಅಗತ್ಯ ಕ್ರಮಕ್ಕಾಗಿ ಚುನಾವಣಾಧಿಕಾರಿಗಳಿಗೆ ವರದಿ ಮಾಡುವುದು. ಅಭ್ಯರ್ಥಿಯ ಗಮನಕ್ಕೆ ತಾರದೆ ಬೇರೆಯವರು ಅಭ್ಯರ್ಥಿಯ ಹೆಸರಿನಲ್ಲಿ ಜಾಹಿರಾತು ಪ್ರಕಟಿಸುವಂತಿಲ್ಲ.
ಪತ್ರಿಕೆಗಳಲ್ಲಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ ರೂಪದ ಜಾಹಿರಾತುಗಳ (ಪೇಯ್ಡ್ ನ್ಯೂಸ್) ಬಗ್ಗೆಯೂ ಸಮಿತಿ ಗಮನ ಹರಿಸಲಿದೆ. ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುವ ಈ ಪ್ರಕರಣಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಾಹಿರಾತು ದರ ಅನ್ವಯಿಸಿ ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸಲಾಗುತ್ತದೆ.
ಈ ಕಾಸಿಗಾಗಿ ಸುದ್ದಿ ಪ್ರಕಟಿಸಿದ ಮಾಧ್ಯಮಗಳ ಬಗ್ಗೆ ಮುಂದಿನ ಕ್ರಮಕ್ಕಾಗಿ ಮುಖ್ಯ ಚುನಾವಣಾಧಿಕಾರಿಗಳ ಮೂಲಕ ಭಾರತ ಚುನಾವಣಾ ಆಯೋಗಕ್ಕೆ ವರದಿ ಮಾಡಲಾಗುತ್ತದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.