State government ಕೇಂದ್ರ ಸರ್ಕಾರದಿಂದ ಬರ ಪರಿಹಾರ ಕೊಡಿಸುವಂತೆ ಕರ್ನಾಟಕ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಇಂದು (ಮಾ.23) ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಐದು ತಿಂಗಳು ಕಾದರೂ ಕೇಂದ್ರ ಸರ್ಕಾರ ಬರ ಪರಿಹಾರ ಕೊಟ್ಟಿಲ್ಲ. ಹಾಗಾಗಿ, ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ ಎಂದರು.
ಸರ್ಕಾರದ ವಿರುದ್ದ ಸಂವಿಧಾನದ ವಿಧಿ 32ರ ಅಡಿ ಕೇಂದ್ರ ನಾವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಇಂದು ಬೆಳಿಗ್ಗೆ ಅರ್ಜಿ ಹಾಕಿದ್ದೇವೆ. ನಮಗೆ ಸಿಗಬೇಕಾದ ಪರಿಹಾರ ಸಿಗಬೇಕು ಎಂದು ಹೇಳಿದರು.
ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ರಾಜ್ಯದ 240 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ನಾಲ್ಕು ಬಾರಿ ಮೌಲ್ಯಮಾಪನ ಮಾಡಿದ್ದೇವೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. 3 ಬಾರಿ ಸತತವಾಗಿ ಕೇಂದ್ರಕ್ಕೆ ಮನವಿ ಪತ್ರ ಬರೆದಿದ್ದೇವೆ. ಆದರೂ, ಇದುವರೆ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ನಯಾ ಪೈಸೆಯನ್ನೂ ಕೊಟ್ಟಿಲ್ಲ ಎಂದು ಸಿಎಂ ಕಿಡಿಕಾರಿದರು.
ಅಕ್ಟೋಬರ್‌ನಲ್ಲಿ ಕೇಂದ್ರ ತಂಡ ರಾಜ್ಯಕ್ಕೆ ಬಂದು ಬರ ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ನೀಡಿದೆ. ಈ ವರದಿ ಕೊಟ್ಟ ಒಂದು ತಿಂಗಳಲ್ಲಿ ರಾಜ್ಯಕ್ಕೆ ಬರ ಪರಿಹಾರ ಕೊಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದು ನಿಯಮ. ಆದರೆ, ಇದುವರೆಗೂ ಕೇಂದ್ರ ರಾಜ್ಯದ ಜನರಿಗೆ ಸ್ಪಂದಿಸಿಲ್ಲ ಎಂದ ಸಿಎಂ, ಎನ್‌ಡಿಆರ್‌ಎಫ್ ನಿಯಮಾವಳಿಗಳನ್ನು ಮಾಧ್ಯಮದವರ ಮುಂದೆ ಓದಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ದೆಹಲಿಗೆ ಹೋದರೂ, ಕೇಂದ್ರ ಸಚಿವರ ಭೇಟಿಗೆ ಅವಕಾಶವನ್ನೇ ಕೊಡಲಿಲ್ಲ. ಬಳಿಕ ನಾನೇ ಡಿಸೆಂಬರ್ 20ರಂದು ಕೃಷ್ಣಬೈರೇಗೌಡ ಜೊತೆ ಮತ್ತೆ ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆವು. ಆದರೂ, ನಮಗೆ ಪರಿಹಾರ ಕೊಡಲಿಲ್ಲ. ಬಳಿಕ ನಾನು ಬೆಂಗಳೂರಿನಲ್ಲೇ ಪ್ರಧಾನಿ ಮೋದಿಯವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿದೆ. ಆದರೂ ಪರಿಹಾರ ಸಿಗಲಿಲ್ಲ ಎಂದು ಸಿಎಂ ಹೇಳಿದರು.
State government ಇವತ್ತು ಕೊಡ್ತಾರೆ, ನಾಳೆ ಕೊಡ್ತಾರೆ, ಇವತ್ತು ಬರುತ್ತೆ, ನಾಳೆ ಬರುತ್ತೆ ಎಂದು ಐದು ತಿಂಗಳು ಕಾದಿದ್ದಾಯ್ತು. ನಮಗೆ ಕಾನೂನು ಮೊರೆ ಹೋಗುವುದು ಇಷ್ಟ ಇರಲಿಲ್ಲ. ಆದರೆ, ಆ ಅನಿವಾರ್ಯತೆಯನ್ನು ಕೇಂದ್ರ ಸೃಷ್ಟಿಸಿದೆ ಎಂದರು.
State government ಬರ ಪರಿಹಾರಕ್ಕೆ ಸುಪ್ರೀಂ ಮೆಟ್ಟಿಲೇರಿದ ರಾಜ್ಯ ಸರ್ಕಾರ
Date: