Sharada Pooja ಶಾಲೆ ಎಂದರೆ ಅಕ್ಷರ ಜ್ಞಾನ ತಿಳಿಸುತ್ತಾ, ಅಭ್ಯಾಸ ಮಾಡಿಸುತ್ತಾ, ಜೀವನದಲ್ಲಿ ಎದುರಾಗುವ ಹಲವಾರು ಸಂದರ್ಭಗಳನ್ನು ನಿಭಾಯಿಸಲು ಹಾಗೂ ಸತ್ಯದ ದಾರಿಯಲ್ಲಿ ನಡೆಯಲು ನೈತಿಕತೆಯ ಪಾಠ ಕಲಿಸುವ ದೇಗುಲ, ಇಲ್ಲಿ ಅಕ್ಷರ ಪಾಠದ ಜೊತೆಗೆ ಜೀವನದ ಪಾಠವನ್ನೂ ಕಲಿಸಲಾಗತ್ತೆ ಎಂದು ಶಿಕ್ಷಕ ಎನ್.ಎನ್.ಕಬ್ಬೂರ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸವದತ್ತಿ ಪಟ್ಟಣದ ಸ.ಕಿ.ಪ್ರಾ ಕನ್ನಡ ಶಾಲೆ ನಂ-6 ರಲ್ಲಿ ಸರಸ್ವತಿ ಪೂಜೆ ಹಾಗೂ ಐದನೇ ತರಗತಿ ಮಕ್ಕಳ ಬೀಳ್ಕೋಡುವ ಸಮಾರಂಭದಲ್ಲಿ ಅವರು ಮಾತನಾಡಿದರು. “ಇಂದಿನ ಮಕ್ಕಳು ನಾಳೆಯ ಉತ್ತಮ ನಾಗರಿಕರಾಗಲು ಅವರ ಜೀವನದಲ್ಲಿ ಶಾಲೆಯು ಭದ್ರ ಬುನಾದಿ ಹಾಕುತ್ತದೆ” ಎಂದು ಶಿಕ್ಷಕಿ ಎಮ್.ಆರ್.ಫಂಡಿ ತಮ್ಮ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ವಿದ್ಯಾ ಗಾಣಗಿ ಮಾತನಾಡಿ, ನಿಮ್ಮ ಶಿಕ್ಷಕರಿಗೆ, ನಿಮ್ಮ ಶಾಲೆಗೆ, ನಿಮ್ಮ ಕುಟುಂಬಕ್ಕೆ ಎಂದಿಗೂ ಕೆಟ್ಟ ಹೆಸರು ಬಾರದಂತೆ ಶಿಕ್ಷಣದಲ್ಲಿ ಯಶಸ್ವಿಯಾಗಿ ಎಂದು ಹಾರೈಸಿದರು.
Sharada Pooja ನಂತರ ವಿದ್ಯಾದೇವತೆ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು, ಮಕ್ಕಳು ಶಿಕ್ಷಕರ ಬಗೆಗಿನ ತಮ್ಮ ಅಭಿಪ್ರಾಯ ಹಂಚಿಕೊಂಡರು, ನಂತರ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಾಯಿತು. ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿಯವರು, ಪಾಲಕ-ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.