Madhu Bangarappa ಜನರನ್ನು ಕಚೇರಿಯಿಂದ ಕಚೇರಿಗೆ ಅಲೆಸದೇ ಒಂದೇ ಸೂರಿನಡಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಆಡಳಿತ ಸೌಧ ನಿರ್ಮಿಸಲಾಗಿದ್ದು, ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ನುಡಿದರು.
ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸಾಗರ ತಾಲ್ಲೂಕಿನ ನೂತನ ಆಡಳಿತ ಸೌಧ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಪದೇ ಪದೇ ಸರ್ಕಾರಿ ಕಚೇರಿ ಅಲೆಯುವುದನ್ನು ಅಧಿಕಾರಿಗಳು ತಪ್ಪಿಸಬೇಕು. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಒದಗಿಸಬೇಕು ಎಂದರು.
ಸರ್ಕಾರ ರಚನೆ ಆಗುವ ಪೂರ್ವದಲ್ಲಿ ನೀಡಲಾಗಿದ್ದ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿದೆ. ಸರ್ಕಾರ ನುಡಿದಂತೆ ನಡೆದು ತನ್ನ ಮಾತನ್ನು ಉಳಿಸಿಕೊಂಡಿದೆ. ಇನ್ನು ಮುಂದೆ ಅಭಿವೃದ್ದಿ ಕೆಲಸಗಳು ವೇಗ ಪಡೆದುಕೊಳ್ಳಲಿವೆ.
ಸರ್ಕಾರ 57 ಸಾವಿರ ಕೋಟಿಯನ್ನು ಬಡವರ ಮಡಿಲಿಗೆ ಹಾಕಿದೆ. ಬಡವರಿಗೆ ಹಣ ನೀಡಿದರೆ ಅವರು ಖರ್ಚು ಮಾಡು ಪುನಃ ಸರ್ಕಾರಕ್ಕೆ ಅನುಕೂಲವಾಗುವಂತೆ ಮಾಡುತ್ತಾರೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಿಲ್ಲ.
ಇದೀಗ ತಾನೆ ಸೊರಬ ತಾಲ್ಲೂಕಿನ ಭೈರೇಕೊಪ್ಪದಲ್ಲಿ ರೂ. 18 ಕೋಟಿ ಮೊತ್ತದ ನಾರಾಯಣ ಗುರು ವಸತಿ ಶಾಲೆಗೆ ಗುದ್ದಲಿಪೂಜೆ ನೆರವೇರಿಸಿ ಬಂದಿದ್ದೇನೆ. ಹಾಗೂ ಸಾಗರ ತಾಲ್ಲೂಕಿನ ಗೆಣಸಿನಕುಣಿಯಲ್ಲಿ ರೂ.18 ಕೋಟಿ ಅಂದಾಜು ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಶಂಕುಸ್ಥಾಪನೆ ಮಾಡಲಾಗುವುದು. ನನ್ನ ಇಲಾಖೆಗೆ ಸರ್ಕಾರ 44,500 ಕೋಟಿ ಅನುದಾನ ಒದಗಿಸಿದೆ.
ಬಂಗಾರಪ್ಪನವರು ಮುಖ್ಯಮಂತ್ರಿಯಾದಾಗ ರೈತರಿಗೆ 10 ಹೆಚ್ ಪಿ ವಿದ್ಯುತ್‍ನ್ನು ಉಚಿತವಾಗಿ ನೀಡಿದ್ದರು. ಹಾಗೂ ಕಾಗೋಡು ತಿಮ್ಮಪ್ಪನಂತಹವರು ರೈತರ ಬಗರ್‍ಹುಕುಂ ಭೂಮಿಗಾಗಿ ಸಾಕಷ್ಟು ಹೋರಾಟ ಮಾಡಿದರು. ರೈತರ, ಜನರ ಪರವಾಗಿ ನಿಂತರು. ಕಾಗೋಡು ತಿಮ್ಮಪ್ಪನವರ ಕನಸನ್ನು ನನಸು ಮಾಡುತ್ತೇವೆ ಹಾಗೂ ಹಿರಿಯರ ಹೋರಾಟವನ್ನು ಮುಂದುವರೆಸುತ್ತೇವೆ.
ಶರಾವತಿ ಮುಳುಗಡೆ ಸಂತ್ರಸ್ತರು, ಬಗರ್‍ಹುಕುಂ ಸೇರಿದಂತೆ ಹಲವಾರು ಸಮಸ್ಯೆಗಳು ಇವೆ. ಅದಕ್ಕಾಗಿ ನಾವು ಹೋರಾಡುತ್ತೇವೆ. ಸಂತ್ರಸ್ತರಿಗೆ ನ್ಯಾಯ ಒದಗಿಸಲು ಹಲವಾರು ಸಭೆಗಳನ್ನು ನಡೆಸಿದ್ದೇವೆ. ರಾಜ್ಯ ಸರ್ಕಾರ ತನ್ನ ಎಲ್ಲ ಪ್ರಯತ್ನವನ್ನು ಮಾಡುತ್ತಲಿದೆ. ಆದರೆ ಕೇಂದ್ರ ಸರ್ಕಾರ ಸಹಕರಿಸದಿದ್ದರೆ ಕಷ್ಟವಾಗುತ್ತದೆ. ಆದರೂ ತಮ್ಮ ಹೋರಾಟ ನಿರಂತರವಾಗಿರುತ್ತದೆ. ಅಧಿಕಾರಿಗಳು ಯಾವ ರೈತನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಅಧಿಕಾರಿಗಳು ಸಹ ರೈತರು, ಜನರೊಂದಿಗೆ ಸಹಕರಿಸುವಂತೆ ಸೂಚಿಸಿದ್ದೇವೆ ಎಂದರು.
ಶಾಸಕರು ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ತಕ್ಷರಾದ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಾಗರ ಕ್ಷೇತ್ರ ಬೆಳೆಯುತ್ತಿದ್ದು, ಇನ್ನೂ ಅಭಿವೃದ್ಧಿ ಹೊಂದಬೇಕಿದೆ. ಈ ಆಡಳಿತ ಸೌಧ ಮಂಜೂರಾತಿ ಪಡೆದ ನಂತರ ಮೂರು ವರ್ಷಗಳ ಕಾಲ ಕಾಮಗಾರಿ ತಡೆಹಿಡಿಯಲಾಗಿತ್ತು. ನಂತರ ಹಂತ ಹಂತವಾಗಿ ರೂ.965 ಲಕ್ಷ ಅನುದಾನದಲ್ಲಿ ಆಡಳಿತ ಸೌಧವನ್ನು ನಿರ್ಮಿಸಲಾಗಿದ್ದು ಆದಷ್ಟು ಎಲ್ಲ ಇಲಾಖೆಗಳು ಇಲ್ಲಿ ಕಾರ್ಯ ನಿರ್ವಹಿಸಲಿವೆ. ಜನರ ಕಷ್ಟಗಳಿಗೆ ಸ್ಪಂದಿಸಿ ಅಧಿಕಾರಿಗಳು ಕೆಲಸ ಮಾಡಬೇಕು.
ಸಾಗರದ ಎಲ್ಲ ವಾರ್ಡುಗಳಿಗೆ ತಲಾ ಅಂದಾಜು 1 ಕೋಟಿ ಅನುದಾನ ನೀಡಿದ್ದೇವೆ. ರೂ.4.80 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ರಂಗಮಂದಿರ ನಿರ್ಮಿಸಲಾಗುವುದು. ನಗರದ ಮೂರು ಕಡೆ ಫುಡ್‍ಕೋರ್ಟ್‍ಗಳನ್ನು ಸ್ಥಾಪಿಸಲಾಗುವುದು. ಜನರಲ್ ಆಸ್ಪತ್ರೆಗೆ ರೂ.1.45 ಕೋಟಿ ಬಿಡುಗಡೆಯಾಗಿದ್ದು 14 ಡಯಾಲಿಸಿಸ್ ಮಷೀನ್ ಮತ್ತು ಫಿಸಿಯೋಥೆರಪಿ ಕೂಡ ಆರಂಭವಾಗಲಿದೆ. ನಗರದಲ್ಲಿ ಪಾರ್ಕುಗಳನ್ನು ನಿರ್ಮಿಸಲಾಗುವುದು. ಮೀನು ಮಾರುಕಟ್ಟೆಗೆ ರೂ.1.35 ಕೋಟಿ ಮಂಜೂರಾಗಿದೆ.
ರೂ.317 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಜಾರಿಗೊಳಿಸಲಾಗಿದ್ದು ಪಂಚಾಯ್ತಿ ವ್ಯಾಪ್ತಿಯಲ್ಲಿ ಪೈಪ್‍ಲೈನ್ ಕೆಲಸ ನಡೆಯುತ್ತಿದೆ. ಯುಜಿಡಿ ಕಾಮಗಾರಿಗಳಿಗೆ ರೂ.47 ಕೋಟಿ ಮಂಜೂರಾಗಿದೆ. ಸಾಗರ ತಾಲ್ಲೂಕು ಉತ್ತಮ ಪ್ರವಾಸಿ ಕೇಂದ್ರವಾಗಿದ್ದು ಜೋಗ ಜಲಪಾತಕ್ಕೆ ನಿರಂತರವಾಗಿ ಜನರು ಬರುವಂತೆ ಮಾಡಲು ಅಭಿವೃದ್ದಿ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದ್ದು ಇಲ್ಲಿಯ ಹೋಟೆಲ್ ಹಾಗೂ ಇತರೆ ಪೂರಕ ಉದ್ಯಮಗಳು ಬೆಳೆಯಬೇಕು ಎಂದರು.
ನಮ್ಮ ಸರ್ಕಾರ ಬಡಜನತೆಗೆ ನೀಡಿರುವ ಐದು ಗ್ಯಾರಂಟಿಗಳು ಅತ್ಯಂತ ಉಪಯುಕ್ತವಾಗಿದ್ದು ನಿಜವಾಗಿ ಜನರಿಗೆ ಬದಕಲು ಅವಕಾಶ ಮಾಡಿಕೊಟ್ಟಿದೆ ಎಂದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರ ಕಾಗೋಡು ತಿಮ್ಮಪ್ಪನವರು ಆರಂಭಿಸಿದ ಕಟ್ಟಡವನ್ನು ಅವರ ಹಸ್ತದಿಂದಲೇ ಇಂದು ಲೋಕಾರ್ಪಣೆಗೊಳಿಸಿರುವುದು ಸಂತಸದ ವಿಷಯ. ಜನರನ್ನು ಕಚೇರಿ ಕೆಲಸಗಳಿಗಾಗಿ ಅಲೆಸಬಾರದೆಂಬ ಉದ್ದೇಶದಿಂದ ಆಡಳಿತ ಸೌಧ ನಿರ್ಮಿಸಲಾಗಿದೆ.
ಬಗರ್‍ಹುಕುಂ ರೈತರಿಗೆ ನ್ಯಾಯ ಸಿಗಬೇಕು. ಕಾಗೋಡು ತಿಮ್ಮಪ್ಪನವರು ಬಗರ್‍ಹುಕುಂ ರೈತರ ಪರ ಹೋರಾಡಿ ಹಕ್ಕು ನೀಡಲು ಪ್ರಯತ್ನಿಸಿದ್ದರು. ಅದರ ಫಲವಾಗಿ ಇಂದಿಗೂ ಭೂಮಿ ಹಂಚಿಕೆ ಆಗುತ್ತಿದೆ. ಬಗರ್‍ಹುಕುಂ ರೈತರ, ಶರಾವತಿ ಮುಳುಗಡೆ ಸಂತ್ರಸ್ತರ ರಕ್ಷಣೆ ಕುರಿತು ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಉಸ್ತುವಾರಿ ಸಚಿವರು ಸಹ ಅವರ ಹಕ್ಕುಗಳ ರಕ್ಷಣೆಗಾಗಿ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಮುಳುಗಡೆ ರೈತರು ಕಷ್ಟದಲ್ಲಿದ್ದು ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದ ಅವರು ಉಸ್ತುವಾರಿ ಸಚಿವರು ತಮ್ಮ ಇಲಾಖೆಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಜನಪರವಾಗಿ ಮುಂದುವರೆಯಲಿದ್ದಾರೆ ಎಂದರು.
Madhu Bangarappa ಪಿಡಬ್ಲ್ಯುಡಿ ಎಇಇ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವರು ಹಾಗೂ ಮಾಜಿ ವಿಧಾನಸಭಾ ಸಭಾಪತಿಗಳಾದ ಕಾಗೋಡು ತಿಮ್ಮಪ್ಪನವರನ್ನು ಈ ಸಂದರ್ಭದಲ್ಲಿ ಅಭಿಂದಿಸಲಾಯಿತು.
ಸಾಗರ ಎಸಿ ಯತೀಶ್ ಆರ್ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷ ತುಕಾರಾಂ, ನಗರಸಭಾ ಸದಸ್ಯರು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಇಓ ನಾಗೇಶ್ ಬ್ಯಾಲಾಳ್ , ಸಾಗರ ತಹಶಿಲ್ದಾರ್ ಸೈಯದ್ ಕಲೀಂ ಉಲ್ಲಾ, ಇತರೆ ಅಧಿಕಾರಿಗಳು ಹಾಜರಿದ್ದರು.
Madhu Bangarappa ಜನರನ್ನು ಕಚೇರಿಗೆ ಅಲೆಸದೇ ಉತ್ತಮವಾಗಿ ಸ್ಪಂದಿಸಬೇಕು : ಎಸ್.ಮಧು ಬಂಗಾರಪ್ಪ
Date: