Davanagere ಆಸಕ್ತಿ ಅಧ್ಯಯನ ಹಾಗೂ ಆತ್ಮವಿಶ್ವಾಸಗಳಿದ್ದಲ್ಲಿ ಪರೀಕ್ಷೆ ಎಂದೂ ಭಯ ಅಲ್ಲ ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ದಾವಣಗೆರೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಏರ್ಪಾಡಾಗಿದ್ದ ಪರೀಕ್ಷಾಪೂರ್ವ ಶ್ರೀ ಶಾರದಾ ಪೂಜೆ ಹಾಗೂ ಕಳೆದ ಶೈಕ್ಷಣಿಕ ವರ್ಷದ ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿ ಗಳಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪರೀಕ್ಷಾ ಭಯ ಎಂಬುದು ಸ್ವಯಂ ಸೃಷ್ಟಿಯೇ ಹೊರತು ಸ್ವಾಭಾವಿಕವಲ್ಲ, ಆಸಕ್ತಿ ಅಧ್ಯಯನ ಹಾಗೂ ಆತ್ಮವಿಶ್ವಾಸದ ಕೊರತೆಯೇ ಭಯಕ್ಕೆ ಕಾರಣ, ಆಸಕ್ತಿಯಿಂದ ಅರ್ಥಮಾಡಿಕೊಳ್ಳುತ್ತಾ ಓದಿದಾಗ ಎಲ್ಲವೂ ಸುಲಭವಾಗುತ್ತದೆ ಹಾಗೂ ಆತ್ಮವಿಶ್ವಾಸ ತಾನಾಗಿಯೇ ಮೂಡುತ್ತದೆ ಎಂದರಲ್ಲದೆ ಖಾಸಗಿ ಶಾಲಾ ಕಾಲೇಜುಗಳಿಗಿಂತ ಈಗ ಸರ್ಕಾರಿ ಶಾಲಾ ಕಾಲೇಜುಗಳೇ ಗುಣಮಟ್ಟದ ಶಿಕ್ಷಕರು ಶಿಕ್ಷಣ ಹಾಗೂ ಶೈಕ್ಷಣಿಕ ಸವಲತ್ತುಗಳಲ್ಲಿ ಮುಂದಿವೆ, ಆದ್ದರಿಂದಲೇ ಈಗ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲಾ ಕಾಲೇಜುಗಳಿಗೆ ಸೇರಿಸಲು ಬಯಸುತ್ತಿದ್ದಾರೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ರಾಮಪ್ಪನವರ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಷ್ತಾಕ್ ರವರು ವಿದ್ಯಾರ್ಥಿಗಳಿಗೆ ಉತ್ತಮ ಸಲಹೆಗಳನ್ನು ನೀಡಿದರು. ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಗುರುಕೀರ್ತಿ ಅರವಿಂದ್ ಹಾಗೂ ಮಂಜುನಾಥರನ್ನು ಪುರಸ್ಕರಿಸಲಾಯಿತು.
ಶಾಲಾ ಸಮಿತಿಯ ಸದಸ್ಯ ಜಿತೇಂದ್ರ, ಗುರುಮೂರ್ತಿ, ಸುಧಾ ನಾರಾಯಣ್ ಮುಂತಾದವರು ಉಪಸ್ಥಿತರಿದ್ದು ಶಿಕ್ಷಕಿ ವಿಶಾಲಾಕ್ಷಿಯವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಗುರುಕೀರ್ತಿ ಹಾಡಿದರೆ ಸ್ವಾಗತವನ್ನು ಶಿಕ್ಷಕ ಜಿ ಪಿ ಬಸಪ್ಪ ಕೋರಿದರು. ಶಿಕ್ಷಕ ಎಂ ಆರ್ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
Davanagere ಶಿಕ್ಷಕಿ ಸರಸ್ವತಿ ಪುರಸ್ಕಾರ ನಿರೂಪಣೆ ಮಾಡಿದರು. ಶಿಕ್ಷೀರ ವೃಂದದವರು ಉಪಸ್ಥಿತರಿದ್ದು ಪೋಷಕರೂ ಆಗಮಿಸಿದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಪ್ರಸ್ತುತಿಗಳನ್ನು ನೆರವೇರಿಸಿದರು.