Police Department ಮಕ್ಕಳ ರಕ್ಷಣೆಯ ವಿಷಯದಲ್ಲಿ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡುವುದು ಅಗತ್ಯವಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಅನಿಲ್‍ಕುಮಾರ್ ಭೂಮರಡ್ಡಿ ಅವರು ತಿಳಿಸಿದರು.
ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‍ರ್ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ಕಾನೂನುಗಳ ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ವೈದ್ಯರು, ನರ್ಸ್‍ಗಳು, ಆಸ್ಪತ್ರೆ ಸಿಬ್ಬಂದಿಗಳಿಗೆ “ಬಾಲನ್ಯಾಯ ಕಾಯ್ದೆ -2015 ತಿದ್ದುಪಡಿ -2021, ಬಾಲ್ಯ ವಿವಾಹ ನಿಷೇಧ ಕಾಯ್ದೆ -2006, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012, ದತ್ತು ಮಾರ್ಗಸೂಚಿ -2022 ಬಾಲ ಕಾರ್ಮಿಕತೆ, ಬಾಲ ಭಿಕ್ಷಾಟಣೆ,ಸಿಗರೇಟ್ ಮತ್ತು ಇನ್ನಿತರ ಮಾದಕ ವ್ಯಸನ ಮತ್ತು ಮಧ್ಯಪಾನ ನಿಷೇಧ, 18 ವರ್ಷದೊಳಗಿನ ಬಾಲಗರ್ಭಿಣಿಯರಿಗೆ ನಿರ್ದೇಶನಾಲಯದಲ್ಲಿರುವ ಸೌಲಭ್ಯಗಳು ಮಕ್ಕಳ ಸಹಾಯವಾಣಿ -1098 /122, ಮಮತೆಯ ತೊಟ್ಟಿಲು ಹಾಗೂ ಮಗು ಮಾರಾಟ ಮತ್ತು ಸಾಗಣೆಯ ವಿರುದ್ಧ ಜಿಲ್ಲೆಯಲ್ಲಿ ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಲುದಾರ ಇಲಾಖೆಗಳಾದ ಸಿಬ್ಬಂದಿಗಳಿಗೆ ಡಿಎಆರ್ ಸಭಾಂಗಣದಲ್ಲಿ ಏರ್ಪಡಿಸಲಾಗಿರುವ ಜಿಲ್ಲಾ ಮಟ್ಟದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ರಕ್ಷಣೆಗಳ ಕುರಿತು ಅನೇಕ ಒಪ್ಪಂದಗಳಿಗೆ ಸಹಿ ಮಾಡಿದೆ. ಮತ್ತು ಮಕ್ಕಳ ರಕ್ಷಣೆಯ ಕುರಿತು ಕಾಯ್ದೆ ಕಾನೂನುಗಳನ್ನು ಅನುಷ್ಟಾನ ಮಾಡಿ ಸಮಾಜ ಮುಖಿಯಾಗಿ ಕಾರ್ಯಗಳನ್ನು ಮಾಡುತ್ತಿದ್ದೇವೆ. ಮಕ್ಕಳ ರಕ್ಷಣೆಯಲ್ಲಿ ಬಹುಮುಖ್ಯವಾಗಿ ಹೆಣ್ಣು ಮಕ್ಕಳ ವಿಷಯದಲ್ಲಿ ಕೆಲವು ಪ್ರಕರಣಗಳು ಅತೀ ಸೂಕ್ಷ್ಮ ಮತ್ತು ಸಂವೆಂದನಾಶೀಲತೆಯಿಂದ ಕೂಡಿರುತ್ತದೆ. ಆದ್ದರಿಂದ ವೈದ್ಯಕೀಯ ಇಲಾಖೆ ಸಿಬ್ಬಂದಿಗಳು 18 ವರ್ಷದೊಳಗಿನ ಹೆಣ್ಣು ಮಕ್ಕಳ ದೌರ್ಜನ್ಯ, ದಬ್ಬಾಳಿಕೆಯ ಬಗ್ಗೆ ಅತೀ ಸೂಕ್ಷ್ಮವಾಗಿ ಅರಿತು ತನಿಖೆಯನ್ನು ನಡೆಸಬೇಕಾಗಿದೆ. ಅವರ ರಕ್ಷಣೆಗೆ ಸಂಬಂಧಿಸಿದಂತೆ ಒಂದು ಇಲಾಖೆ ಇನ್ನೊಂದು ಇಲಾಖೆ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಸಂಬಂಧಿಸಿದ ಎಲ್ಲ ಇಲಾಖೆಗಳು ಪರಸ್ಪರ ಸಹಕಾರದಿಂದ ಕಾರ್ಯವನ್ನು ನಿರ್ವವಹಿಸಬೇಕಾಗಿದೆ ಎಂದರು.
ಕಾಯ್ದೆ ಕಾನೂಗಳು ಕುರಿತು ತರಬೇತಿ ಪಡೆಯುವುದು ಮುಖ್ಯವಲ್ಲ. ಅದನ್ನು ಅನುಷ್ಠಾನಕ್ಕೆ ತಂದು ನೊಂದವರಿಗೆ ನ್ಯಾಯವನ್ನು ಒದಗಿಸಿದರೆ ಕಾನೂನುಗಳಿಗೆ ನಾವು ನೀಡುವ ಗೌರವವಾಗಿದೆ. ಮಕ್ಕಳ ರಕ್ಷಣಾ ವಿಷಯದಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಗಮನ ನೀಡಬೇಕು. ಯಾರು ಕೂಡ ಜವಾಬ್ದಾರಿಯಿಂದ ಹಿಂಜರಿಯಬೇಡಿ. ಮಕ್ಕಳ ಮನಸ್ಸು ಅತೀ ಸೂಕ್ಷ್ಮವಾಗಿರುತ್ತದೆ. ಅವರ ಮನಸ್ಥಿತಿ ಅರಿತು ಸೂಕ್ತ ರಕ್ಷಣೆ ನೀಡಿ, ಕಾನೂನಿನ ಅರಿವು ನೀಡಬೇಕು.
Police Department ಜವಾಬ್ದಾರಿಗಳ ಜೊತೆ ನಾವು ಕೆಲವು ಸವಾಲುಗಳನ್ನು ಎದುರಬೇಕಾಗುತ್ತದೆ. ಅದಕ್ಕಾಗಿ ಅಗತ್ಯವಾದ ಕಾನೂನು ಕಾಯ್ದೆಗಳ ಕುರಿತು ಇಂತಹ ತರಬೇತಿ ಕಾರ್ಯಾಗಾರಗಳ ಮೂಲಕ ತಿಳಿದುಕೊಂಡು ಸಾಮಾಜಿಕ ಸೇವೆಯಲ್ಲಿ ಅಧಿಕಾರಿಗಳಾದ ನಾವು ನಮ್ಮನ್ನು ನಂಬಿ ಬಂದವರಿಗೆ ನ್ಯಾಯವನ್ನು ಒದಗಿಸಬೇಕಾಗಿದೆ ಎಂದರು.
ಡಿಹೆಚ್‍ಓ ಡಾ. ರಾಜೇಶ್ ಸುರಗಿಹಳ್ಳಿ ಮಾತನಾಡಿ, ಮಕ್ಕಳ ರಕ್ಷಣೆಯಲ್ಲಿ ಆರೋಗ್ಯ ಇಲಾಖೆಯ ಪಾತ್ರ ಅತೀ ಮುಖ್ಯವಾಗಿದೆ. ಫೋಕ್ಸೋ ಕಾಯ್ದೆಯಡಿ ಪ್ರಕರಣಗಳು ಬಂದಾಗ ಸಾಮಾಜಿಕ ತುರ್ತು ಸೇವೆ ಎಂದು ಪರಿಗಣಿಸಿ ಸಂರಸ್ತರನ್ನು ಎಲ್ಲರಂತೆ ಅವರನ್ನು ಸರತಿ ಸಾಲಿನಲ್ಲಿ ನಿಲ್ಲಸದೇ ಅವರಿಗೆ ವಿಶೇಷ ವಾರ್ಡ್‍ಗಳಿಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡಿಬೇಕು. ಮತ್ತು ನಿಯಮದ ಪ್ರಕಾರ ಸೇವೆ ಸಲ್ಲಿಸಬೇಕು. ಯಾರು ಕೂಡ ಕರ್ತವ್ಯ ಲೋಪ ಮಾಡುವಂತಿಲ್ಲ. ಪ್ರತಿಯೊಂದು ಹಾಸ್ಟೆಲ್‍ಗಳು ಹಾಗೂ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಈ ಎಲ್ಲಾ ಕಾಯ್ದೆ-ಕಾನೂನುಗಳ ಕುರಿತು ಇಲಾಖೆಯ ಸಿಬ್ಬಂದಿಗಳು ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ ಆರ್ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಜಿ.ಎಂ, ಮೆಗ್ಗಾನ್ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಿದ್ದನಗೌಡ ಪಾಟೀಲ್, ಪೋಲಿಸ್ ಉಪಾಧೀಕ್ಷಕ ಬಾಬು ಅಂಜನಪ್ಪ, ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಪೋಲಿಸ್ ಇಲಾಖೆಯ ಸೋಮಶೇಖರ್ ಜಿ.ಎಸ್ ಮತ್ತು ಗಾಯಿತ್ರಿ ಡಿ.ಎಸ್ ಉಪಸ್ಥಿತರಿದ್ದರು.