Maha Shivaratri ಈಶ್ವರವನದಲ್ಲಿ ವಿಶಿಷ್ಟ ಶಿವರಾತ್ರಿ ಉತ್ಸವ.ಅಬ್ಬಲಗೆರೆಯ ಈಶ್ವರವನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಶಿಷ್ಟತೆಗಳಿಂದ ಕೂಡಿದ ಶಿವರಾತ್ರಿ ಉತ್ಸವಕ್ಕೆ ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್ ದಕ್ಷಿಣ ಪ್ರಾಂತ ಕಾರ್ಯದರ್ಶಿ, ಶಿವಮೊಗ್ಗ ಶಾಖೆಯ ಡಾ.ಶ್ರೀಧರ್ ಚಾಲನೆ ನೀಡಿದರು. ಇದೇ ಸಂಸ್ಥೆಯ ಸಹಯೋಗದಲ್ಲಿ ನವ್ಯಶ್ರೀ ಈಶ್ವರವನ ಚಾರಿಟೆಬಲ್ ಟ್ರಸ್ಟ್, ಆಯೋಜಿಸಿರುವ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ.ಶ್ರೀಧರ್ ಪಂಚ ಶಿವತತ್ವಗಳಲ್ಲಿ ಒಂದೆನಿಸಿದ ಪರೋಪಕಾರಾರ್ಥವಾಗಿ ನಡೆಯುತ್ತಿರುವ ಶಿಬಿರದಲ್ಲಿ ತಮ್ಮ ಆರೋಗ್ಯ ಸುಧಾರಣೆಗಾಗಿ ಶಿವಧ್ಯಾನದೊಂದಿಗೆ ಭಕ್ತಾದಿಗಳು ವೈದ್ಯಕೀಯ ಸೇವೆ ಪಡೆಯಬೇಕೆಂದು ವಿನಂತಿಸಿಕೊಂಡರು.
ಮೂರನೇ ವರ್ಷದ ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ನಗರದ ಖ್ಯಾತ ಕುಟುಂಬ ವೈದ್ಯರಾದ ಡಾ.ಶ್ರೀನಿವಾಸರವರು ಮಾತನಾಡಿ ಶಿವರಾತ್ರಿಯಂದು ಆಯೋಜಿಸಿರುವ ರಕ್ತದಾನ ಶಿಬಿರದಲ್ಲಿ ಭಕ್ತಾದಿಗಳು ರಕ್ತದಾನ ಮಾಡುವ ಮೂಲಕ ಶಿವನ ಕೃಪೆಗೆ ಪಾತ್ರರಾಗುವುದರ ಜೊತೆಗೆ ನಾಲ್ವರ ಪ್ರಾಣ ಕಾಪಾಡಬಹುದು ಎಂದರು.
ಧಾರ್ಮಿಕ ಆಚರಣೆಗಳು ಸಮಾಜಮುಖಿಯಾಗಲು ಈ ರೀತಿಯ ಸೇವಾಕಾರ್ಯಗಳನ್ನು ನಡೆಸುತ್ತಿರುವ ನಾಗೇಶ್ ರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೋ.ವಿಜಯಕುಮಾರ್ ಮಾತನಾಡಿ ಶಿವರಾತ್ರಿ ಉತ್ಸವವೆಂದರೆ ಕೇವಲ ಶಿವನ ಆರಾಧನೆಯಲ್ಲ ಪಂಚಭೂತಗಳ ಆರಾಧನೆಯೇ ಪ್ರಕೃತಿಯ ಆರಾಧನೆ. ಪ್ರಕೃತಿಯ ಪ್ರತಿರೂಪವೆನಿಸಿದ ಶಿವನ ಆರಾಧನೆಯೇ ಈ ಶಿವರಾತ್ರಿ. ಆದ್ದರಿಂದ ನೆಲ ಜಲ ವಾಯುರಾಕಾಶಗಳಿಗೆ ಗೌರವ ತೋರುವ ಕಾಯಕ ನಮ್ಮದಾದಾಗ ಮಾತ್ರ ಶಿವನಿಗೆ ತೋರುವ ನಿಜ ಭಕ್ತಿಯಾಗುತ್ತದೆ ಎಂದರು.
ನವ್ಯಶ್ರೀ ಈಶ್ವರವನ ಚಾರಿಟೆಬಲ್ ಟ್ರಸ್ಟ್(ರಿ) ಸಂಸ್ಥಾಪಕ ಹಾಗೂ ಈಶ್ವರವನದ ನಿರ್ಮಾತೃ ನಾಗೇಶ್ ಎಂ ವಿ ಯವರು ಮಾತನಾಡಿ ಪ್ರಕೃತಿಯಿಂದ ನಾವು ಪಡೆದಿರುವ ಸಕಲವೂ ಸೇರಿದಂತೆ ಜೀವಮಾನವಿಡೀ ತೀರಿಸಲಾರದಂತ ಋಣವನ್ನು ನಾವು ಹೊತ್ತಿದ್ದೇವೆ. ಈ ಋಣಭಾರ ತೀರಿಸುವ ಪ್ರಯತ್ನದ ಭಾಗವಾಗಿ ಈಶ್ವರವನದಲ್ಲಿ ನಡೆಯುತ್ತಿರುವ ಸಾಮಾಜಿಕ ಸೇವಾ ಕಾರ್ಯಗಳಾಗಿವೆ. ಜನರಲ್ಲಿ ಜಾಗೃತಿ ಮೂಡಿಸುವ ಧೃಷ್ಟಿಯಿಂದ ಭಕ್ತಾದಿಗಳಿಗೆ ಪರಿಸರ ಸಂರಕ್ಕಿಸುವ ಶಿವಸಂಕಲ್ಪ ಮಾಡಿಸಲಾಗುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
Maha Shivaratri ಈ ಸಂದರ್ಭದಲ್ಲಿ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರದ ಶತರಕ್ತದಾನಿ ಧರಣೇಂದ್ರ ದಿನಕರ್, ಡಾ.ದಿನಕರ್ ಮತ್ತು ಸಿಬ್ಬಂದಿವರ್ಗ, ರಂಗಕರ್ಮಿ ಕಾಂತೇಶ್ ಕದರಮಂಡಲಗಿ, ನಾಗರಾಜ್ ಶೆಟ್ಟರ್, ಪ್ರಥಮ ಮಹಿಳಾ ರಕ್ತದಾನಿ ಶ್ರೀಮತಿ ಕವಿತಾ ಹಾಗೂ ವೈದ್ಯಕೀಯ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.\