T D Megharaj ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಕುಡಿಯುವ ನೀರಿಗೂ ಸಹ ಹಾಹಾಕಾರ ಎದ್ದಿದೆ. ತೋಟದ ಬೆಳೆಗಳಿಗೆ ನೀರು ಕೊರತೆಯಿಂದಾಗಿ ತೋಟಗಳು ನಾಶವಾಗುತ್ತಿವೆ ಆದರೂ ಕೂಡ ಯಾವೊಬ್ಬ ಸಚಿವರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಆರೋಪಿಸಿದರು.
ಶಿವಮೊಗ್ಗ ಬಿಜೆಪಿ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೂ ರಾಜ್ಯದಲ್ಲಿ 875ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ನೀರಿನ ಕೊರತೆ ಇದ್ದರೂ ಸಹ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಶುದ್ಧ ನೀರಿನ ಘಟಕಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ರೈತ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ದೂರಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಕಳೆದ ಸಾಲಿನಲ್ಲಿ 11500 ಕೋಟಿ ರೂ. ಹಾಗೂ ಪ್ರಸಕ್ತ ಸಾಲಿನ 14 ಸಾವಿರ ಕೋಟಿ ರೂ. ಈ ಸಮುದಾಯಗಳಿಗೆ ಇದುವರೆಗೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಪರಿಶಿಷ್ಟ ಜಾತಿ, ಪಂಗಡಗಳ ವಿರೋಧಿ ಧೋರಣೆಯನ್ನು ಸರ್ಕಾರ ಅನುಸರಿಸುತ್ತಿದೆ ಎಂದ ಅವರು, ಸರ್ಕಾರ ತುಷ್ಠೀಕರಣದ ರಾಜಕಾರಣ ಮಾಡುತ್ತಿದೆ. ಇದು ಹಿಂದೂ ವಿರೋಧಿ ಸರ್ಕಾರವಾಗಿದೆ ಎಂದರು.
ರಾಜ್ಯ ಸರ್ಕಾರ ತನ್ನ ಪೈಫಲ್ಯಗಳನ್ನು ಮರೆ ಮಾಚಲು ಕೇಂದ್ರ ಸರ್ಕಾರದ ಮೇಲೆ ಬೊಟ್ಟು ತೋರಿಸುತ್ತಿದೆ ಎಂದ ಅವರು ಕಾಂಗ್ರೆಸ್ ಸರ್ಕಾರ ದಮನಕಾರಿ ನೀತಿ ಅನುಸರಿಸುತ್ತಿದೆ. ಪಕ್ಷದ ಹೈಕಮಾಂಡ್ ಓಲೈಸುವ ದೃಷ್ಟಿಯಿಂದ ಕಾಟಾಚಾರದ ಆಡಳಿತ ನಡೆಯುತ್ತಿದೆ ಎಂದು ದೂರಿದರು.
T D Megharaj ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖ ರಾದ ಮಾಲತೇಶ್, ಚಂದ್ರಶೇಖರ್, ವಿನ್ಸೆಂಟ್ ರೋಡ್ರಿಗಸ್, ಹೃಷಿಕೇಶ್ ಪೈ, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.