Guarantee scheme ಗ್ಯಾರಂಟಿ ಯೋಜನೆಗಳು 420 ಎಂದು ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಹೇಳುತ್ತಾರೆ. 420 ಕಾರ್ಯಕ್ರಮಗಳ ಹಣ ಪಡೆದುಕೊಳ್ಳದಂತೆ ಯಡಿಯೂರಪ್ಪ, ವಿಜಯೇಂದ್ರ ಅವರು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಕರೆ ಕೊಡಲಿ ನೋಡೊಣ. ಆದರೆ ಓರ್ವ ಮಹಿಳೆಯು ಹಣ ವಾಪಾಸ್ ಕೊಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಶನಿವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿದ ನಂತರ ಸಮಾರಂಭವನ್ನುದ್ಧೇಶಿಸಿ ಅವರು ಮಾತನಾಡಿದರು.
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಗ್ಯಾರಂಟಿ ಕಾರ್ಯಕ್ರಮಗಳನ್ನು 420 ಎಂದು ಕರೆದಿದ್ದಾರೆ. ಜ್ಞಾನೇಂದ್ರ ನಿನಗೆ ಜ್ಞಾನವಿದೆಯಾ? ಅರ್ಧ ಜ್ಞಾನವಿದೆ ಎಂದು ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಯಾವುದೇ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಲಿಲ್ಲ. ಈಗ ಮೋದಿ ಗ್ಯಾರಂಟಿ, ಮೋದಿ ಗ್ಯಾರಂಟಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಕೊಟ್ಟಿದ್ದು ಒಂದು ಸೀರೆ, ಸೈಕಲ್ ಮಾತ್ರ. ಬಡವರ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ ಮಾಡಲಿಲ್ಲ. ಬಡವರ ಶ್ರೇಯೋಭಿವೃದ್ದಿಗೆ ಯಾವುದೇ ಯೋಜನೆ ಜಾರಿಗೊಳಿಸಲಿಲ್ಲ. ಇದೀಗ ಬರೀ ಖಾಲಿ ಮಾತನಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ಟೀಕಿಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದರೆ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದೆಲ್ಲ ಹೇಳುತ್ತಿದ್ದಾರೆ.
Guarantee scheme ಇಂತಹ ಸುಳ್ಳು ಮಾತುಗಳಿಗೆ ಕಿವಿಗೊಡಬೇಡಿ. ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ಸ್ಥಗಿತವಾಗುವುದಿಲ್ಲ. ಮುಂದಿನ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಗ್ಯಾರಂಟಿ ಯೋಜನೆಗಳು ಎಂದಿಗೂ ನಿಲ್ಲುವುದಿಲ್ಲವಾಗಿದೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.