Shimoga District Chamber Of Commerce ಶಿವಮೊಗ್ಗ ಸಂಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತರಾಗುವ ಉದ್ಯೋಗಿಯ ಜೀವನಕ್ಕೆ ಅನುಕೂಲ ಆಗಲು ಗೌರವ ಧನ ನೀಡುವುದು ತುಂಬಾ ಮುಖ್ಯ. 1972ರಿಂದ ಗ್ರಾಚ್ಯುಟಿ ಕಾಯ್ದೆ ಜಾರಿ ಬಂದಿದ್ದು, 10ಕ್ಕಿಂತ ಹೆಚ್ಚು ಉದ್ಯೋಗಿಗಳು ಇರುವ ಸಂಸ್ಥೆಯು ಕಡ್ಡಾಯವಾಗಿ ಗ್ರಾಚ್ಯುಟಿ ನೀಡಬೇಕು ಎಂದು ಶಿವಮೊಗ್ಗ ಉಪವಿಭಾಗ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಮಾ.ಎಚ್.ಎಸ್. ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ “ಉಪಧನ ಪಾವತಿ ಕಾಯ್ದೆ” ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥೆಯು ಗ್ರಾಚ್ಯುಟಿ ಕಾಯ್ದೆ ವ್ಯಾಪ್ತಿಯೊಳಗೆ ಬಂದರೆ ಅದು ನಿರಂತರವಾಗಿ ಕಾಲ ಕಾಲಕ್ಕೆ ಆಗುವ ಕಾಯ್ದೆಗಳಲ್ಲಿ ಬದಲಾವಣೆಗಳನ್ನು ಉದ್ಯಮದಲ್ಲಿ ಅಳವಡಿಸಿಕೊಳ್ಳಬೇಕು. ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಇರುವ ಹಾಗೂ ಕೇಂದ್ರ ಸರ್ಕಾರದಿಂದ ವಿವಿಧ ರೀತಿ ಅನುಮತಿ ಪಡೆದುಕೊಳ್ಳುವ ಪ್ರತಿ ಸಂಸ್ಥೆಯು ಗ್ರಾಚ್ಯುಟಿ ಕಾಯ್ದೆಯ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಕಾರ್ಮಿಕ ಇಲಾಖೆಯ ನಿಯಮಗಳನ್ನು ವೃತ್ತಿ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು. ಕಾರ್ಮಿಕ ಇಲಾಖೆಯ ನಿಯಮಗಳಲ್ಲಿ ಕಾಲ ಕಾಲಕ್ಕೆ ಆಗುವ ಬದಲಾವಣೆಗಳನ್ನು ಹಾಗೂ ಹೊಸ ಕಾಯ್ದೆಗಳನ್ನು ಉದ್ಯಮದಲ್ಲಿ ಪಾಲಿಸಬೇಕಾಗಿರುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಉಪಧನ ಪಾವತಿ ಕಾಯ್ದೆ 1972ರ ಕಲಂ 4(ಎ) ಅನ್ವಯ ಕರ್ನಾಟಕ ಕಡ್ಡಾಯ ಉಪಧನ ವಿಮಾ ನಿಯಮಗಳು 2024 ( ದಿ ಕರ್ನಾಟಕ ಕಂಪಲ್ಸರಿ ಗ್ರಾಚ್ಯುಟಿ ಇನ್ಸೂರೆನ್ಸ್ ಪಾಲಿಸಿ ರೂಲ್ಸ್ 2024 ) ಅನ್ನು ಅಧಿಸೂಚಿಸಲಾಗಿದೆ. ಕಾಯ್ದೆ ಕುರಿತು ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Shimoga District Chamber Of Commerce ಎಲ್‌ಐಸಿ ಅಧಿಕಾರಿ ಪ್ರಭಾ ಮಾತನಾಡಿ, ಉದ್ಯೋಗಿಗೆ 15 ದಿನಗಳ ವೇತನದ ಮೊತ್ತವನ್ನು ಉದ್ಯೋಗಿಯ ಅನುಭವದ ವರ್ಷಗಳು, ಮೂಲಕ ಸಂಬಳ, ಕೊನೆ ಬಾರಿ ಪಡೆದ ತುಟ್ಟಿ ಭತ್ಯೆ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಚ್ಯುಟಿ ನೀಡಬೇಕಾಗುತ್ತದೆ ಎಂದು ತಿಳಿಸಿದರು.
10ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಯು ಗ್ರಾಚ್ಯುಟಿ ಕಾಯ್ದೆ ಹಾಗೂ ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ಪಡೆಯಲು 08242441248 ಅಥವಾ ಕಾರ್ಮಿಕ ಅಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಪ್ರದೀಪ್ ವಿ.ಎಲಿ, ಇ.ಪರಮೇಶ್ವರ್, ಭೀಮೇಶ್, ಕಾರ್ಮಿಕ ಇಲಾಖೆ ಸಿಬ್ಬಂದಿ, ಉದ್ಯಮಿಗಳು ಉಪಸ್ಥಿತರಿದ್ದರು.