Sivaganga Yoga Centre ವಿಶ್ವದಲ್ಲಿ ಶಾಂತಿ ಆರೋಗ್ಯ ನೆಮ್ಮದಿ ನೆಲೆಸಲು ಎಲ್ಲರೂ ನಿತ್ಯ ಯೋಗ ಅಭ್ಯಾಸ ಮಾಡಬೇಕು ಎಂದು ಶ್ರೀ ಶಿವಗಂಗಾ ಯೋಗಕೇಂದ್ರದ ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಅಭಿಪ್ರಾಯಪಟ್ಟರು.
ಪ್ರತ್ಯಕ್ಷ ದೈವ ಜಗತ್ತಿಗೆ ಬೆಳಕನ್ನು ನೀಡುತ್ತಿರುವಂತಹ ಸೂರ್ಯ ದೇವನಿಗೆ ಪೂಜೆ ರಥಸಪ್ತಮಿಯ ಹಬ್ಬದ ಪ್ರಯುಕ್ತ ಶಿವಮೊಗ್ಗ ನಗರದ ಕಲ್ಲಹಳ್ಳಿಯ ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಆದಿಯೋಗಿ ಜಾನಪದ ಶಿವನ ಮೂರ್ತಿಗೆ ಪೂಜೆ ಹಾಗೂ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲಾ ದೇಶಗಳನ್ನು ಒಂದುಗೂಡಿಸುವ ಶಕ್ತಿ ಯೋಗಕ್ಕಿದೆ. ಯೋಗವನ್ನು ಹೆಚ್ಚು ಪ್ರಸರಿಸುವುದರ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿ ಮಾಡಬಹುದು ಎಂದು ತಿಳಿಸಿದರು.
Sivaganga Yoga Centre ಯೋಗ ಕೇಂದ್ರದ ಕಾರ್ಯದರ್ಶಿ ಎಸ್ ಎಸ್ ಜ್ಯೋತಿಪ್ರಕಾಶ್ ಮಾತನಾಡಿ, ಉದ್ಯಮ, ಉದ್ಯೋಗದಲ್ಲಿ ಅನೇಕ ರೀತಿಯ ಒತ್ತಡಗಳು ಇರುತ್ತವೆ. ನಿತ್ಯ ಯೋಗ ಪ್ರಾಣಾಯಾಮ ಧ್ಯಾನವನ್ನು ತಮ್ಮ ದೈನಂದಿನ ಭಾಗವಾಗಿಸುವುದರಿಂದ ಅವುಗಳನ್ನೆಲ್ಲ ಸಮಸ್ಥಿತಿಯಿಂದ ನಿಭಾಯಿಸುವಲ್ಲಿ ಯೋಗ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಯೋಗ ಶಿಕ್ಷಣಾರ್ಥಿಗಳಾದ ವಿದ್ಯಾರ್ಥಿಗಳು, ಪುರುಷರು, ಸ್ತ್ರೀಯರು ಹಾಗೂ ಸಾರ್ವಜನಿಕರು ಅಖಂಡ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಯೋಗ ಕೇಂದ್ರದ ಆವರಣದಲ್ಲಿ ಸ್ಥಾಪಿಸಲಾಗಿರುವ ಅದಿಯೋಗಿ ಧ್ಯಾನಸ್ಥ ಶಿವನ ಮೂರ್ತಿ ಪ್ರತಿಷ್ಠಾಪಿಸಿ ಒಂದು ವರ್ಷ ಆಗಿರುವುದರಿಂದ ವಿಶೇಷ ಪೂಜೆ ಮತ್ತು ರುದ್ರಾಭಿಷೇಕ ಏರ್ಪಡಿಸಲಾಗಿತ್ತು.
ಸಂಸ್ಕೃತ ಉಪನ್ಯಾಸಕ ವಿದ್ವಾನ್ ದಾರುಕೇಶ್ವರ ಶಾಸ್ತಿçಯವರಿಂದ ಪೂಜೆ ಮತ್ತು ರುದ್ರಾಭಿಷೇಕ ನೆರವೇರಿತು. ಮಂತ್ರ ಪುಷ್ಪಾಜಲಿ, ಶಿವನಾಮ ಸ್ಮರಣೆ ಮತ್ತು ಭಜನೆ ಏರ್ಪಡಿಸಲಾಗಿತ್ತು. ಪೂಜಾ ಪ್ರಸಾದ ವಿತರಿಸಲಾಯಿತು.
ರಥಸಪ್ತಮಿ ಆಚರಣೆ ಮತ್ತು ವಿಶೇಷತೆ ಕುರಿತು ಉಪನ್ಯಾಸಕಿ ಶ್ರೀಮತಿ ಪದ್ಮ ಮಾತನಾಡಿದರು. ಜಿ. ಎಸ್. ಓಂಕಾರ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಹೂವಯ್ಯಗೌಡ, ಹರೀಶ್.ಹೆಚ್.ಕೆ, ಜಿ.ವಿಜಯಕುಮಾರ್, ಲವಕುಮಾರ್, ಬಸವರಾಜ್ ಎಲ್.ಎಚ್, ಆನಂದ, ವಿಜಯ ಬಾಯರ್ ಉಪಸ್ಥಿತರಿದ್ದರು. ಯೋಗ ಶಿಕ್ಷಣಾರ್ಥಿಗಳು ಮತ್ತು ಭಕ್ತರು ಅತ್ಯಂತ ಸಂಭ್ರಮದಿಂದ ಭಾಗವಹಿಸಿದ್ದರು.