Bharat Scouts and Guides ವಿದ್ಯಾರ್ಥಿಯು ಉತ್ತಮ ಹಾಗೂ ಶಿಸ್ತಿನ ಜೀವನ ಶೈಲಿ ರೂಪಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ ಎಂದು ಭಾರತ್ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಶಾಖೆಯ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಹೇಳಿದರು.
ಗಾಜನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಐದು ದಿನಗಳ “ರಾಜ್ಯ ಪುರಸ್ಕಾರ” ಟೆಸ್ಟಿಂಗ್ ಕ್ಯಾಂಪ್ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳಿಂದ ಆಕರ್ಷಿತರಾಗಿ ದೈಹಿಕ ವ್ಯಾಯಾಮ, ಯೋಗ ಮುಂತಾದ ಚಟುವಟಿಕೆಗಳನ್ನು ಮರೆಯುತ್ತಿದ್ದಾರೆ. ಒಳ್ಳೆಯ ಚಿಂತನೆಯು ಕಡಿಮೆ ಆಗುತ್ತಿದೆ. ಮಕ್ಕಳಿಗೆ ಒಳ್ಳೆಯ ಜೀವನಶೈಲಿ, ಅಲೋಚನಾ ಕ್ರಮ ಬೆಳೆಯಲು ಸ್ಕೌಟ್ ಮತ್ತು ಗೈಡ್ಸ್ನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತ ಕೆ.ರವಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಯಾಶೀಲ ಮನೋಭಾವ ವೃದ್ಧಿಸಿಕೊಳ್ಳುವ ಜತೆಯಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸ್ಕೌಟ್ ಮತ್ತು ಗೈಡ್ಸ್ ಉತ್ತಮ ವೇದಿಕೆ ಒದಗಿಸುತ್ತದೆ. ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ವಳ್ಳಿಯಮೈ ಮಾತನಾಡಿ, ನಮ್ಮ ವಿದ್ಯಾಲಯದಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ರಾಜ್ಯ ಪುರಸ್ಕಾರ ಪಡೆದುಕೊಳ್ಳಲು ಗುರಿ ಹೊಂದಬೇಕು. ಒಟ್ಟು 9 ಜಿಲ್ಲೆಗಳಿಂದ ನವೋದಯ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.
Bharat Scouts and Guides ಕಾರ್ಯಕ್ರಮದಲ್ಲಿ ಡಿಟಿಸಿ ಶಿವಶಂಕರ್, ಮಲ್ಲಿಕಾರ್ಜುನ ಕಾನೂರ್, ನಿವೃತ್ತ ಎಎಸ್‌ಐ ವಿ.ಆರ್.ಚಂದ್ರಶೇಖರ್, ಕಾರ್ಯಕ್ರಮ ಸಂಯೋಜನಾಧಿಕಾರಿ ಜಿ.ರಾಥೋಡ್, ಉಮಾ ಹೆಗಡೆ, 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.