Saturday, September 28, 2024
Saturday, September 28, 2024

Mulugade Odalala Book ಮುಳುಗಡೆ ಒಡಲಾಳ’ ಪುಸ್ತಕ ಲೋಕಾರ್ಪಣೆ, ನಿರ್ವಸತಿಗರ ನೆನಪು ಕಣ್ಣಂಚಿನಲ್ಲಿ ನೀರು- ಡಾ.ಗಜಾನನ ಶರ್ಮ

Date:

Mulugade Odalala Book ದಿನಾಂಕ 28-1-2024ರಂದು ವಾರಾಹಿ ಹಿ‌ನ್ನೀರಿನ ಮೇಲುಸುಂಕದ ದುರ್ಗಾಪರಮೇಶ್ವರೀ ದೇಗುಲದ ಆವರಣದಲ್ಲಿ, ನೆರೆದಿದ್ದ ಸುಮಾರು ಐನೂರರಷ್ಟು ಮಂದಿ ಮುಳುಗಡೆಯ ಸಂತ್ರಸ್ಥರು ಮತ್ತು ನಡುಗುಡ್ಡೆ ನಿವಾಸಿಗಳ ನಿಟ್ಟುಸಿರ ನಡುವೆ, ವಾರಾಹಿ ಮುಳುಗಡೆ ಸಂತ್ರಸ್ಥರಲ್ಲೊಬ್ಬರಾದ ಹೊಸಕೊಪ್ಪದ ಪ್ರತ್ರಕರ್ತ, ಲೇಖಕ, ಮಿತ್ರ ಪ್ರಭಾಕರ ಕಾರಂತರ “ಮುಳುಗಡೆಯ ಒಡಲಾಳ” ಕೃತಿ ಲೋಕಾರ್ಪಣೆಗೊಂಡಿತು.

ಸೇರಿದ್ದ ಬಹುತೇಕ ಮಂದಿ ಮುಳುಗಡೆಯ ಸಂಕಟದಲ್ಲಿ ಬೆಂದು ಪರಿತಾಪಪಟ್ಟು ಊರು ತೊರೆದವರು ಮತ್ತು ತುತ್ತಿನ ಚೀಲ ತುಂಬಿಕೊಳ್ಳುವ ಅನಿವಾರ್ಯತೆಗೆ ಸಿಲುಕಿ ಹಿನ್ನೀರಿನ ನಡುಗುಡ್ಡೆಗಳ ನಡುವೆ ಬದುಕಿ, ಇಂದಿಗೂ ನಾಗರಿಕ ಪ್ರಪಂಚದ ಬಹುತೇಕ ಸೌಲಭ್ಯಗಳಿಂದ ವಂಚಿತರಾದ ಮುಳುಗಡೆ ನಿರ್ವಸತಿಗರು.

ವಾರಾಹಿ ಕರ್ನಾಟಕದ ಪ್ರಥಮ ಮತ್ತು ಇಂದಿಗೂ ಏಕಮಾತ್ರ ಭೂಗರ್ಭ ಜಲವಿದ್ಯುದಾಗರವೆಂದು ಖ್ಯಾತವಾದ ಜಲವಿದ್ಯುತ್ ಯೋಜನೆ. ಆಗುಂಬೆ ಬಳಿಯ ಹೆಬ್ಬಾಗಿಲು ಬಳಿಯ ಕಾಡಿನಲ್ಲಿ ಸಮುದ್ರ ಮಟ್ಟದಿಂದ 780 ಮೀಟರ್ ಎತ್ತರದಲ್ಲಿ ಹುಟ್ಟಿ, ಕುಂಚಿಕಲ್ ಬಳಿ 455 ಮೀಟರ್ ತಗ್ಗಿಗೆ ಧುಮಿಕಿ, ಒಟ್ಟು 72 ಕಿಲೋಮೀಟರ್ ದೂರ ಹರಿಯುವ ವಾರಾಹಿ ನದಿಯ ಒಟ್ಟು ಜಲಾನಯನ ಪ್ರದೇಶ 221.38 ಚದರ ಕಿಲೋಮೀಟರ್.

ವಾರಾಹಿ ನದಿಯ ವಾರ್ಷಿಕ ಹರಿವಿನ ಪ್ರಮಾಣ ಕನಿಷ್ಟ 1063ರಿಂದ ಗರಿಷ್ಟ 1513 ಮಿಲಿಯನ್ ಕ್ಯೂಬಿಕ್ ಮೀಟರ್ ಎಂದು ಅಳತೆ ಮಾಡಿ, ಎಪ್ಪತ್ತರ ದಶಕಾಂತ್ಯದಲ್ಲಿ ಒಟ್ಟು 959 ಮಿಲಿಯನ್ ಕ್ಯೂಬಿಕ್ ಮೀಟರ್ ( 33.6ಟಿ ಎಂ ಸಿ) ನೀರು ಸಂಗ್ರಹಿಸಬಲ್ಲ ಆಣೆಕಟ್ಟನ್ನು ಕಟ್ಟಲು ಕರ್ನಾಟಕ ಸರ್ಕಾರ ತೀರ್ಮಾನಿಸಿತು. ಇದಕ್ಕಾಗಿ ಹೊಸನಗರ ತಾಲ್ಲೋಕಿನ ಯಡೂರು ಗ್ರಾಮದ ಬಳಿ ಮಾಣಿ ಎಂಬಲ್ಲಿ 58 ಮೀಟರ್ ಎತ್ತರದ 580 ಮೀಟರ್ ಉದ್ದದ ಆಣೆಕಟ್ಟನ್ನೂ, ಹುಲಿಕಲ್ ಹೊಳೆಗೆ ಬ್ಯಾಲೆನ್ಸಿಂಗ್ ರಿಸರ್ವಯರನ್ನೂ ಕಟ್ಟಿ ಹೊಸಂಗಡಿ ಸಮೀಪದ ಭೂಗರ್ಭದಲ್ಲಿ ತಲಾ 115 ಮೆಗಾವಾಟ್ ಸಾಮರ್ಥ್ಯದ ನಾಲ್ಕು ವಿದ್ಯುತ್ ಘಟಕಗಳನ್ನು ಮತ್ತು ಮಾಣಿ ಆಣೆಕಟ್ಟಿನ ಬಳಿ ತಲಾ ನಾಲ್ಕೂವರೆ ಮೆಗಾವಾಟಿನ ಎರಡು ಘಟಕಗಳನ್ನು ಸ್ಥಾಪಿಸಲು ನಿಶ್ಚಯಿಸಿತು.

ಮಾಣಿ ಆಣೆಕಟ್ಟಿನ ನಿರ್ಮಾಣ 1979ರಲ್ಲಿ ಆರಂಭವಾಗಿ 1989ರಲ್ಲಿ ಸಂಪೂರ್ಣಗೊಂಡು, ವಿದ್ಯುದಾಗರದ ಮೊದಲ ಘಟಕ 12-8-1889ರಂದು‌ ಉದ್ಘಾಟನೆಗೊಂಡಿತು. ಕ್ರಮೇಣ ಒಂದಾದ ಮೇಲೆ ಒಂದರಂತೆ ಉಳಿದ ಘಟಕಗಳೂ ಚಾಲನೆಗೊಂಡವು.

Mulugade Odalala Book ಈ ಯೋಜನೆಯಿಂದ ಸರಾಸರಿ ವಾರ್ಷಿಕ 110 ಕೋಟಿ ಯೂನಿಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಿದೆ.

ಯೋಜನೆಯಿಂದಾಗಿ 25 ಹಳ್ಳಿಗಳು ಮುಳುಗಡೆಯಾಗಿವೆ. 5707 ಹೆಕ್ಟೇರ್ ಸಮೃದ್ಧ ನಿತ್ಯ ಹರಿದ್ವರ್ಣದ ದಟ್ಟಡವಿ, 1849 ಹೆಕ್ಟೇರ್ ಕೃಷಿಭೂಮಿ ಮುಳುಗಡೆ ಆಯಿತೆಂದು ಸರ್ಕಾರದ ದಾಖಲೆಗಳು ಹೇಳುತ್ತವೆ. ಇದರಲ್ಲಿ ವಿದ್ಯುತ್ ಮಾರ್ಗ, ಪ್ರಸರಣ ಮಾರ್ಗ, ರಸ್ತೆ, ಕಾಲೋನಿ ಮತ್ತು ಮೂಲಸೌಲಭ್ಯಗಳ ಲೆಕ್ಕ ಸೇರಿದಂತಿಲ್ಲ. ಹೆಚ್ಚು ಭಾಗ ಹೊಸನಗರ ತಾಲ್ಲೋಕಿನ ಮತ್ತು ತೀರ್ಥಹಳ್ಳಿ ತಾಲ್ಲೋಕಿನ ಒಂದಷ್ಟು ಭಾಗದ 7200 ಮಂದಿ ನಿರ್ವಸತಿಗರಾದರೆ, 14 ಶಾಲಾ ಕಟ್ಟಡಗಳು, ಹಲವಾರು ದೇವಾಲಯಗಳು, ಪಾರಂಪರಿಕ ಕೇಂದ್ರಗಳು ಮುಳುಗಡೆಯಾದವು. ಒಟ್ಟು ಮೂರು ಸಾವಿರ ಮನೆಗಳು ಮುಳುಗಡೆಯಾದ ಲೆಕ್ಕವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಲೆನಾಡು ಮತ್ತು ಕರಾವಳಿಯ ನಡುವೆ, ಎರಡೂ ಸಂಸ್ಕೃತಿಗಳ ಕಸುವನ್ನು ಉಂಡು ಸಶಕ್ತವಾಗಿ, ಸಮೃದ್ಧವಾಗಿ, ಬೆಳೆದು ಬಾಳಿ ಬಂದಿದ್ದ ಸಾವಯವ ಪರಂಪರೆಯೊಂದು ಹಿನ್ನೀರಿನ ಒಡಲಾಳದ ತಳ ಸೇರಿ ಇನ್ನಿಲ್ಲವಾಯಿತು.

ಸಾವಿರಾರು ವರ್ಷಗಳಿಂದ ದಟ್ಟ ಮಲೆನಾಡಿನ ನೆಲ ಜಲ ಕಾನು ಕಣಿವೆ ಗುಡ್ಡ ಬೆಟ್ಟಗಳ ನಡುವೆ, ಪ್ರಾಣಿ, ಪಕ್ಷಿ ಜೀವ ಜಂತುಗಳೊಡನೆ ವರ್ಷದ ಆರು ತಿಂಗಳುಗಳ ಕಾಲ ಕುಂಭದ್ರೋಣ ಎಂಬಂತೆ ಸುರಿಯುತ್ತಿದ್ದ ಮಳೆಗೆ ಮೈಯ್ಯೊಡ್ಡಿ, ಕಾಡುಪ್ರಾಣಿಗಳ ಕಾಟವನ್ನೂ, ಕ್ರಿಮಿಕೀಟಗಳ ಉಪಟಳವನ್ನೂ, ರೋಗರುಜಿನಗಳ ಬಾಧೆಯನ್ನೂ ಲೆಕ್ಕಿಸದೆ ಬಂದ ಬೆಳೆಯಲ್ಲಿ ಉಳಿದದ್ದಷ್ಟೇ ತಮ್ಮದೆಂದು ಸಂತೃಪ್ತಿಯ ಬದುಕು ನಡೆಸುತ್ತ ಸಾಗಿದ್ದ ಸಾತ್ವಿಕ ಸಮಾಜವೊಂದು ಮಾಣಿ ಜಲಾಶಯದ ಹಿನ್ನೀರಿಗೆ ಕಣ್ಣೀರು ಬೆರೆಸುತ್ತ ಮೌನವಾಗಿ ಹುಟ್ಟಿದೂರಿನಲ್ಲೇ ಅನಾಥವಾಗಿ, ಅನಿವಾರ್ಯವಾಗಿ ಬೇರಿನಿಂದ ಬೇರ್ಪಟ್ಟು ಊರು ತೊರೆಯಿತು. ಅದೂ ಸಾಧ್ಯವಾಗದ ಹಲವು ನಿರ್ಗತಿಕರು ಅತ್ತ ಊರು ತೊರೆಯಲಾಗದೆ, ಇತ್ತ ಸಾಗುವಳಿ ಮಾಡುತ್ತಿದ್ದ ನೆಲ ಜಲಾವೃತವಾದುದನ್ನು ಕಾಣುತ್ತ, ಅಂದಿನವರೆಗೂ ತಮ್ಮದಾಗಿದ್ದ ಮನೆ ಮಠಗಳು ಸರ್ಕಾರದ ಪೌರೋಹಿತ್ಯದಲ್ಲಿ ಜಲತರ್ಪಣಗೊಂಡದ್ದನ್ನು ಕಂಡು ಕಣ್ಣೀರಿಡುತ್ತ ಅಲ್ಲೇ ನಡುಗುಡ್ಡೆಗಳ ನಡುವೆ ಅಳಿದುಳಿದ ಅಂಗೈಯಗಲದ ಭೂಮಿಯಲ್ಲಿ, ತಮ್ಮಂತೆಯೇ ಊರು ತೊರೆಯದ ಕಾಡುಪ್ರಾಣಿಗಳ ಜೊತೆ ರಾಜಿ ಮಾಡಿಕೊಂಡು, ತಾವು ಬೆಳೆದಿದ್ದರಲ್ಲಿ ಹೆಚ್ಚು ಭಾಗ ಆ ಮೃಗಸಂತತಿಗೊಪ್ಪಿಸುತ್ತ ಉಳಿದಿದ್ದರಲ್ಲಿ ಬೆನ್ನಿಗೆ ತಾಕುತ್ತಿದ್ದ ಮಕ್ಕಳ ಬರಿಹೊಟ್ಟೆಗಿಕ್ಕುತ್ತ ಬದುಕಿದರು. ರಸ್ತೆ, ಶಾಲೆ, ಆಸ್ಪತ್ರೆ, ಕರೆಂಟು, ಮುಂತಾದ ನಾಗರಿಕ ಸೌಲಭ್ಯಗಳನ್ನು ಕೇಳಲು ಅವರೇನು ಕಾಲೋನಿಯ ಕೆ ಪಿ ಸಿ ನೌಕರರೇ? ಸರ್ಕಾರದ ಸಿಬ್ಬಂದಿಯೇ? ಅಥವಾ ನಗರದ ನಾಗರಿಕರೇ? ಸರ್ಕಾರದ ಲೆಕ್ಕದಲ್ಲಿ ಊರು ಬಿಡದೆ ಹಿನ್ನೀರಿನ ನಡುವೆ ಕದ್ದು ಉಳಿದ, ದಟ್ಟ ದರಿದ್ರರಲ್ಲವೇ? ಹುಟ್ಟಿದ‌ ಮಣ್ಣಿನಲ್ಲೇ ನಿರಾಶ್ರಿತರಾದ ಹತಭಾಗ್ಯರಲ್ಲವೇ? ಇನ್ನೂ ಆಲಂಕಾರಿಕ ಶಬ್ಧಗಳಲ್ಲಿ ಹೇಳುವುದಾದರೆ ದೇಶಕ್ಕಾಗಿ ನೆಲವನ್ನು ಕೊಡುಗೆ ನೀಡಿದ ತ್ಯಾಗಜೀವಿಗಳು. ತಮ್ಮ ಬದುಕನ್ನು ಮುಳುಗಿಸಿಕೊಂಡು ಹೆರವರ ಮನೆ ಬೆಳಗಿದ ಮಹಾನುಭಾವರು. ಹಾಗೆಂದು ಮುಳುಗಡೆಯ ಸಂದರ್ಭದಲ್ಲಿ ಭೂ ರಹಿತ ಕಾರ್ಮಿಕರನ್ನೂ ಸರ್ಕಾರ ಮರೆಯಲ್ಲಿಲ್ಲ ಎಂದು ಸರ್ಕಾರ ಮತ್ತು ಕೆ ಪಿ ಸಿ ಎಲ್ ದಾಖಲೆಗಳು ಹೆಮ್ಮೆಯಿಂದ ಹೇಳುತ್ತವೆ. ಭೂರಹಿತ ಕುಟುಂಬಗಳಿಗೂ ತಲಾ ಹತ್ತು ಸಾವಿರ ರೂಪಾಯಿಗಳಷ್ಟು‌ ( ತಲೆಮಾರುಗಳಿಂದ ಅಲ್ಲಿಯೇ ಬಾಳ ಬದುಕಿದ ಕುಟುಂಬಗಳಿಗೆ, ಅಬ್ಬಬ್ಬಾ, ಎಷ್ಟು ದೊಡ್ಡ ಮೊತ್ತ!?) ಉದಾರ ಪರಿಹಾರ ನೀಡಿತೆಂಬುದು ಕೆ ಪಿ ಸಿ ಎಲ್ ಪುನರ್ವಸತಿ ಕಛೇರಿಯ ದಾಖಲೆಗಳ ಹೇಳಿಕೆ. ಹಾಗೆ ಉದಾರವಾಗಿ ಕೊಟ್ಟ ಒಟ್ಟು ಹಣ ಹದಿನೆಂಟು‌ ಲಕ್ಷದ ಹತ್ತು ಸಾವಿರ ರೂಪಾಯಿಗಳೆಂದರೆ ಸರ್ಕಾರದ ಘನ ಔದಾರ್ಯವನ್ನು ಗಮನಿಸಿ!

ವಾರಾಹಿಯ ವಿದ್ಯುತ್ ಉತ್ಪಾದನೆಯ ಪ್ರಮಾಣ ವಾರ್ಷಿಕವಾಗಿ ಸುಮಾರು ಒಂದುನೂರಾ ಹತ್ತು ಕೋಟಿ ಯೂನಿಟ್ಟುಗಳು. ಆದರೆ ಇದರಲ್ಲಿ ನೂರರಲ್ಲಿ ಒಂದು ಪಾಲೂ ಹಿನ್ನೀರು ಪ್ರದೇಶದ ಅಭಿವೃದ್ಧಿಗಾಗಲೀ, ಕನಿಷ್ಟ ಮೂಲ ಸೌಕರ್ಯ ಒದಗಿಸುವುದಕ್ಕಾಗಲೀ ಬಳಕೆ ಆಗಿದ್ದರೆ ಅವರಿಂದ ಮಾಣಿ ಜಲಾಶಯದ ಹಿನ್ನೀರು ನಿರ್ವಸತಿಗರ ಕಣ್ಣೀರಿನಿಂದ ತುಂಬ ಬೇಕಿರಲಿಲ್ಲ. ಹಲವು ಹಳ್ಳಿಗಳಿಗೆ ಸರಿಯಾದ ರಸ್ತೆಗಳಿಲ್ಲ. ಮಕ್ಕಳಿಗೆ ಶಾಲೆಗಳಿಲ್ಲ. ಆಸ್ಪತ್ರೆಗಳಿಲ್ಲ. ವಿದ್ಯುತ್, ವಾಹನ ಸೌಲಭ್ಯಗಳಿಲ್ಲ. ಎಷ್ಟೋ‌ ಹಳ್ಳಿಗರು ಈಗಲೂ ತಮ್ಮದೇ ಹಳ್ಳಿಗೆ ಹೋಗಲು ಕೆಪಿಸಿಯವರ ಪರವಾನಗಿ ಪಡೆಯಬೇಕು.‌ಉದಾಹರಣೆಗೆ ಕಾರ್ಯಕ್ರಮ ನಡೆದ ಮೇಲುಸುಂಕದ ದುರ್ಗಾಪರಮೇಶ್ವರಿಯ ದರ್ಶನಕ್ಕೂ ಭದ್ರತಾ ಸಿಬ್ಬಂದಿಯ ಕೃಪಾಕಟಾಕ್ಷಬೇಕು.

ಇನ್ನು ಮುಳುಗಡೆಯಲ್ಲಿ ಭೂಮಿಯನ್ನು ಕಳೆದುಕೊಂಡವರಿಗೂ ಪರಿಹಾರ ನೀಡುವಲ್ಲಿ ನಡೆದ ಅಧ್ವಾನಗಳ ಕತೆ ಕೇಳುವುದೇ ಬೇಡ. ಮೊನ್ನೆ ಮೇಲುಸುಂಕಕ್ಕೆ ಬಂದಿದ್ದ ಹಲವು ಮುಳುಗಡೆ ಮಂದಿಯ ಬಾಯಲ್ಲಿ ಮುಳುಗಡೆಯ ವ್ಯಥೆಯ ಕಥೆಯನ್ನು ಕೇಳುತ್ತಿದ್ದರೆ ಕೇಳಿದವರ ಕಣ್ಣು ಒದ್ದೆಯಾಗುತ್ತಿತ್ತು. ಕಿರಿ ಕಿರಿಯಾದರೂ, ಕಿರುಕುಳದಿಂದ ತಪ್ಪಿಸಿಕೊಂಡು, ಕಿರು ಪರಿಹಾರ ಪಡೆದು ಪುನೀತರಾದೆವೆಂದು ಅವರು ತಮ್ಮ ತಮ್ಮ ದುರಂತ ಕತೆಗಳನ್ನು ಹೇಳುತ್ತಿದ್ದರೆ ನಮ್ಮ ಅಂತರಂಗಕ್ಕೆ ಬೆಂಕಿ ಬೀಳುತ್ತಿತ್ತು. ಮುಳುಗಿದ ಅರಣ್ಯ ಒಂದು ಪಟ್ಟಾದರೆ ಕಡಿದ ಅರಣ್ಯ ಎಷ್ಟು ಪಟ್ಟೋ ಅಧಿಕೃತವಾಗಿ ಹೇಳಲಾಗದು ಎಂಬ ಮಾತೂ ಅಲ್ಲಲ್ಲಿ ಕೇಳಿಬಂದದ್ದು ಸುಳ್ಳಲ್ಲ.

ಪತ್ರಕರ್ತ ಕೃಷಿಕ ಪ್ರಭಾಕರ ಕಾರಂತರು ಇಂತಹ ಅನೇಕ ವಿಕೃತಿಗಳನ್ನು ಕಣ್ಣಾರೆ ಕಂಡವರು ಮತ್ತು ಸಾಕಷ್ಟು ನೋವು ಉಂಡವರು. ಈ ಕೃತಿಯನ್ನು ಅವರು ಮೂವತ್ತು ವರ್ಷಗಳ ಹಿಂದೆಯೇ ಬರೆದಿದ್ದರೆ ಅದರಲ್ಲಿ ಸಂಪೂರ್ಣ ವ್ಯವಸ್ಥೆಯ ವಿರುದ್ಧದ ಆಕ್ರೋಶಗಳೇ ತುಂಬಿರುತ್ತಿತ್ತೇನೋ. ಈಗ ಅವರು ಮಾಗಿದ್ದಾರೆ. ಮನುಷ್ಯನ ಸ್ವಭಾವ ವೈಚಿತ್ರ್ಯ ಹಾಗೂ ಮಾನವ ಸಮಾಜದ ಗುಣಾವಗುಣಗಳ ಅರಿವು ಅವರಿಗಿದೆ. ಹಲವು ಅಧಿಕಾರಿಗಳ ಹೃದಯಹೀನ ವರ್ತನೆ ಮತ್ತು ಸ್ವಾರ್ಥಪರ ನಡೆವಳಿಕೆಗಳ ಕುರಿತು ತಿಳಿದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಮೀಣ ಜನರ ಮುಗ್ಧತೆ ಮತ್ತು ಋಜು ಸ್ವಭಾವಗಳ ಪರಿಚಯವಿದೆ. ಅವರ ಕಷ್ಟ ಕಾರ್ಪಣ್ಯ, ಅವರ ಬದುಕಿನ ನೋವು ನಲಿವುಗಳು, ಅವರ ಹೃದಯ ವೈಶಾಲ್ಯಗಳ ಪರಿಚಯವಿದೆ. ಹಾಗಾಗಿಯೇ ಅವರು ತಮಗೆ ಸಂಪರ್ಕವಿದ್ದ, ತಾವು ಕಂಡ ಜನರ ಬದುಕಿನ ಮೇಲೆ ಮುಳುಗಡೆಯೆಂಬ ದುರ್ಘಟನೆ ಉಂಟುಮಾಡಿದ ಆಘಾತದ ಕಥನವನ್ನು ನೇರವಾಗಿ ಚಿತ್ರಿಸಿದ್ದಾರೆ. ಮೂಲಭೂತವಾಗಿ ಅವರ ಗುಣ ನೇರ ನಿಷ್ಠುರ ಮತ್ತು ಸತ್ಯದ ಪರ. ನಿರ್ಭಿಡೆಯಿಂದ ಬರೆಯುವುದು ಅವರ ಸಹಜ ಗುಣ. ಹಾಗಾಗಿ ತಾವು ಕಂಡುಂಡ ಸತ್ಯ ಸಂಗತಿಗಳನ್ನು ಸರಳವಾಗಿ, ನೇರವಾಗಿ ಬರೆದಿದ್ದಾರೆ. ಅವರು ಹಿನ್ನೀರು ಪ್ರದೇಶದ ಜನಾನುರಾಗಿಗಳಲ್ಲಿ ಒಬ್ಬರಾಗಿದ್ದರು ಎಂಬುದಕ್ಕೆ ಮೊನ್ನೆ ಸೇರಿದ್ದ ಜನಜಂಗುಳಿಯೇ ನಿದರ್ಶನ. ಶಿವಾನಂದ ಕಳವೆಯವರಿಂದ ಹಿಡಿದು ಶರತ್ ಕಲ್ಕೋಡರಂತಹ ಹಿರಿಯರವರೆಗೆ, ಸಾಹಿತಿ ಗಿರಿಜಾಶಂಕರ್ ರವರಿಂದ ಹಿಡಿದು ಕ್ಯಾಂಪ್ಕೋ ಆಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿಯವರವರೆಗೆ, ಸಾಗರದ ಜಯಪ್ರಕಾಶ್ ಮಾವಿನಕುಳಿಯವರಿಂದ ಹಿಡಿದು ದೂರದ ಬಳ್ಳಾರಿಯ ಮುರುಳಿ ಕೃಷ್ಣರವರೆಗೆ, ಶಿರನಾಳಿ ಕುಟುಂಬದಿಂದ ಹಿಡಿದು ಇತರ ಅನೇಕ ಪ್ರತಿಷ್ಟಿತ ಕುಟುಂಬದ ಸದಸ್ಯರವರೆಗೆ, ಭೂರಹಿತ ಕಾರ್ಮಿಕರಿಂದ ಹಿಡಿದು ನಡುಗುಡ್ಡೆಗಳ ಕಡುಬಡ ಜನರವರೆಗೆ ಎಲ್ಲರೂ ಪ್ರೀತಿಯಿಂದ ನಮ್ಮ ಕಾರಂತರ ಪುಸ್ತಕ ಬಿಡುಗಡೆಯೆಂಬ ಅಭಿಮಾನದಿಂದ, ಅಕ್ಕರೆಯಿಂದ ,ಆತ್ಮೀಯತೆಯಿಂದ ಸೇರಿದ್ದರು. ಚಂಡಿ ಹೋಮ, ಊಟೋಪಚಾರ ಪ್ರತಿಯೊಂದೂ ಅಚ್ಚುಕಟ್ಟಾಗಿ ಸಂಪನ್ನಗೊಂಡಿತು.

ಬಿಡುಗಡೆಯ ಕಾರ್ಯಕ್ರಮವಂತೂ ಅತಿ ವಿಶಿಷ್ಟ ಮಾದರಿಯಲ್ಲಿ, ಆಪ್ತವಾಗಿ, ಸಹಜವಾಗಿ, ಸರಳವಾಗಿ ನಡೆಯಿತು. ಹಿನ್ನೀರಿನ ಹಸಿರು ವಾತಾವರಣದಲ್ಲಿ ಮುಳುಗಡೆಯ ಒಡಲಾಳ ಅಲ್ಲಿನ ಸಂತ್ರಸ್ಥರ ಒಡಲಾಳದ ಮುಳಗಡೆಯ ಸಂಕಥನವನ್ನು ತೆರೆದಿಟ್ಟಿತು. ಅತಿಥಿಗಳೆಲ್ಲರ ಮಾತುಗಳೂ ನೆರೆದವರ ಒಳಮನಸ್ಸಿನ ತಳದಲ್ಲಿ ಹುದುಗಿದ್ದ ಭಾವನೆಗಳಿಗೆ ಇಂಬುಕೊಟ್ಟವು. ಒಟ್ಟಿನಲ್ಲಿ ಕೃತಿ ಬೆಂಗಳೂರಿನಲ್ಲೋ, ಶೃಂಗೇರಿಯಲ್ಲೋ ಬಿಡುಗಡೆಗೊಂಡಿದ್ದರೆ ಒಂದಿಷ್ಟು ಹೆಚ್ಚು ಪ್ರಚಾರ ಪಡೆಯುತ್ತಿತ್ತೇನೋ…? ಆದರೆ ಈ ಸಾರ್ಥಕತೆ ಅದಕ್ಕೆ ದಕ್ಕುತ್ತಿರಲಿಲ್ಲ ಎಂಬುದು ಉತ್ಪ್ರೇಕ್ಷೆಯಲ್ಲ. ಆತ್ಮೀಯ ಆಹ್ವಾನ ಮತ್ತು ಅಪರೂಪದ ಅವಕಾಶಕ್ಕಾಗಿ ವಂದನೆಗಳು ಪ್ರಭಾಕರ ಕಾರಂತರೇ. ನಿಮ್ಮ ಕುಟುಂಬದ ಅಕ್ಕರೆ, ಆತಿಥ್ಯ, ಅನ್ಯಾದೃಶ. ಸ್ತುತ್ಯ ಕಾರ್ಯಕ್ಕಾಗಿ ಅಭಿನಂದನೆಗಳು ನಿಮಗೆ…

ಲೇ:ಡಾ.ಗಜಾನನ ಶರ್ಮ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...