Police Jobs 2024 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿದ್ದ 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್ ಶಿಪ್ ನ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭಾಗವಹಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಯು, ಅಖಿಲ ಭಾರತ ಪೊಲೀಸ್ ಕ್ರೀಡಾ ಕಂಟ್ರೋಲ್ ಬೋರ್ಡ್ ಸಹಯೋಗದೊಂದಿಗೆ ರಾಜ್ಯ ಪೊಲೀಸ್ ದಳ ಹಾಗೂ ಕೇಂದ್ರ ಪಾರಾ ಮಿಲಟರಿ ದಳದವರು ಭಾಗವಹಿಸುವ 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್ ಶಿಪ್‌ನ್ನು ಜನವರಿ 30 ರಿಂದ ಫೆಬ್ರವರಿ 4ರವರೆಗೆ ಆಯೋಜಿಸಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪೊಲೀಸ್ ಸೇರಿದಂತೆ ವಿವಿಧ ರಾಜ್ಯಗಳ ಪೊಲೀಸ್ ದಳ ಹಾಗೂ ಕೇಂದ್ರ ಪೊಲೀಸ್ ಸಂಸ್ಥೆಗಳ 24 ತಂಡಗಳು ಭಾಗವಹಿಸಿರುವುದು ಅತ್ಯಂತ ಸಂತೋಷದ ವಿಚಾರ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಪ್ರಥಮ ಬಾರಿಗೆ 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್ಷಿಪ್ ನ್ನು ಆಯೋಜಿಸಿದ್ದು ಪ್ರಥಮ ಬಾರಿಗೆ ಕರ್ನಾಟಕ ಪೊಲೀಸ್ ತಂಡವಾಗೊ ಆರ್ಚರಿಯಲ್ಲಿ ಭಾಗವಹಿಸಿದೆ.
ಯೋಜನಾಬದ್ಧ ಸಿದ್ದತೆ ಹಾಗೂ ಪರಿಶ್ರಮದಿಂದ ಇಂತಹ ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜಿಸಿರುವ ಪೊಲೀಸ್ ಮಹಾನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಡಾ.ಅಲೋಕ್ ಮೋಹನ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸಲಿಚ್ಛಿಸುತ್ತೇನೆ ಎಂದು ತಿಳಿಸಿದರು.
Police Jobs 2024 ವಿವಿಧ ಶ್ರೇಣಿಯ ಮಹಿಳಾ ಆರ್ಚರ್ಸ್ ಸೇರಿದಂತೆ ಒಟ್ಟು 436 ಆರ್ಚರ್ಗಳು , ರೀಕರ್ವ್ , ಕಾಂಪೌಂಡ್ ಮತ್ತು ಇಂಡಿಯನ್ ರೌಂಡ್ ಎಂಬ 3 ವರ್ಗಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಒಟ್ಟು 174 ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಅಲ್ಲದೇ ಮೊದಲ ಮೂರು ಮಹಿಳಾ ಹಾಗೂ ಪುರುಷ ತಂಡಗಳು ಟ್ರೋಫಿಯನ್ನು ಗೆದ್ದಿದ್ದಾರೆ.
ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಎಲ್ಲ ಪದಕವಿಜೇತರು ಹಾಗೂ ಕ್ರೀಡಾಪಟುಗಳಿಗೆ ನನ್ನ ಅಭಿನಂದನೆಗಳು.
ಕರ್ನಾಟಕ ಸರ್ಕಾರ ಕ್ರೀಡಾ ಕ್ಷೇತ್ರವನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿದೆ. 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್ಷಿಪ್ 2023-24ಗಾಗಿ ಸರ್ಕಾರ 25 ಲಕ್ಷ ರೂ.ಗಳ ಅನುದಾನವನ್ನು ಒದಗಿಸಿದೆ.
ಕ್ರೀಡಾಪಟುಗಳು ರಾಜ್ಯ ಪೊಲೀಸ್ ಇಲಾಖೆಯ ಸೇವೆಗಾಗಿ ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಶೇ. 2 ರಷ್ಟು ಮೀಸಲಾತಿಯನ್ನುಒದಗಿಸಲು ನಿರ್ಧರಿಸಿದ್ದು, ಭವಿಷ್ಯದಲ್ಲಿ ಈ ಮೀಸಲಾತಿಯನ್ನು ಹೆಚ್ಚಿಸುವಲ್ಲಿ ಸರ್ಕಾರ ಚಿಂತನೆ ನಡೆಸಲಿದೆ.2022-23ನೇ ಸಾಲಿನಲ್ಲಿ, 80 ಸಿವಿಲ್ ಪೇದೆಗಳು ಹಾಗೂ 20 ಪಿಎಸ್ ಐಗಳನ್ನು ಕ್ರೀಡೆ ಕೋಟಾದಡಿ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಬಿಲ್ಲು ವಿದ್ಯೆ, ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಈ ವಿದ್ಯೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಿದ್ದ ಏಕಲವ್ಯ, ಅರ್ಜುನ, ಕರ್ಣ, ದ್ರೋಣಾಚಾರ್ಯರ ಕೊಡುಗೆಯನ್ನು ಮರೆಯುವಂತಿಲ್ಲ.
ಒಬ್ಬ ಉತ್ತಮ ಬಿಲ್ಲುಗಾರನಿಗೆ ಸದೃಢ ಮಾನಸಿಕ ಶಿಸ್ತು, ಉತ್ತಮ ತಂತ್ರಗಾರಿಕೆ, ಗುರಿ, ಸದೃಢ ಸ್ನಾಯುಗಳು ಹಾಗೂ ಪರಿಶ್ರಮದ ಅಗತ್ಯವಿರುತ್ತದೆ.
ಐತಿಹಾಸಿಕವಾಗಿ, ಬಿಲ್ಲುಗಾರಿಕೆ ಯಾವುದೇ ಪುರಾತನ ಭಾರತದ ಯುದ್ಧಕಲೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. ಬಿಲ್ಲುಗಾರಿಕೆ ಕೌಶಲ್ಯವನ್ನು ಸಾಧಿಸಿದ್ದ ಮೌರ್ಯ ಹಾಗೂ ಗುಪ್ತಾ ಸಾಮ್ರಾಜ್ಯದವರು ದೂರದಿಂದಲೇ ತಮ್ಮ ಶತ್ರುಗಳ ಮೇಲೆ ಬಾಣಗಳ ಸುರಿಮಳೆಗೈದು ಯುದ್ದಗಳಲ್ಲಿ ಯೋಜನಾಬದ್ಧವಾಗಿ ಗೆಲುವು ಸಾಧಿಸುತ್ತಿದ್ದರು.
ಆಧುನಿಕ ಭಾರತದಲ್ಲಿ ಆರ್ಚರಿ ತನ್ನ ಐತಿಹಾಸಿಕ ಮತ್ತು ಪೌರಾಣಿಕ ಬೇರುಗಳಿಂದ ಸ್ಪರ್ಧಾತ್ಮಕ ಕ್ರೀಡೆ ಯಾಗಿ ಬೆಳೆದಿದೆ.
ಸಾಂಸ್ಕೃತಿಕ ಆಚರಣೆಗಳಲ್ಲಿ ಹಾಗೂ ಹಬ್ಬಗಳಲ್ಲಿ ಸಾಂಪ್ರದಾಯಿಕ ಮಹತ್ವ ಉಳಿದುಕೊಂಡಿದೆಯಾದಾರೂ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಗಳಿಸಿದೆ.
ಭಾರತದಲ್ಲಿ ಆರ್ಚರಿ ಮಾನ್ಯತೆ ಹಾಗೂ ಗೌರವ ಪಡೆದ ಕ್ರೀಡೆಯಾಗಿದ್ದು, ಒಲಂಪಿಕ್ ಗೇಮ್ಸ್ ಸೇರಿದಂತೆ ಇತರೆ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಆರ್ಚರ್ ಗಳು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಹೇಳಿದರು.
ಭಾರತೀಯ ಆರ್ಚರ್ ಗಳು ವಿವಿಧ ಒಲಂಪಿಕ್ ಆವೃತ್ತಿಗಳಲ್ಲಿ ಭಾಗವಹಿಸಿದ್ದು, ತಮ್ಮ ಕೌಶಲ್ಯ ವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿದ್ದಾರೆ. ಪ್ರಮುಖ ಆರ್ಚರ್ ಗಳಾದ ಲಿಂಬಾ ರಾಮ್ , ಸತೀಶ್ ಕುಮಾರ್ ಮತ್ತು ದೀಪಿಕಾ ಕುಮಾರಿ ಒಲಂಪಿಕ್ ನಲ್ಲಿ ದೇಶದ ಬಾವುಟವನ್ನು ಹೊತ್ತು ನಡೆದಿದ್ದಾರೆ. ಪ್ರಸ್ತುತ ಲೀಗ್ ನಲ್ಲಿ ಜ್ಯೋತಿ ಸುರೇಖಾ ವೆನ್ನಂ, ಕೋಮಲಿಕಾ ಬಾರಿ ಮತ್ತು.ಅಂಕಿತಾ ಭಕತ್ ಇದ್ದಾರೆ.
ಚ್ಯಾಂಪಿಯನ್ ಶಿಪ್ ನಲ್ಲಿ ಅರ್ಜುನ ಪ್ರಶಸ್ತಿ ಗೆ ಭಾಜನರಾಗಿರುವ ರಾಜಸ್ತಾನ ಪೊಲೀಸ್ ನ ಡಿ.ಎಸ್.ಪಿ ಶ್ರೀ ರಜತ್ ಚೌಹಾಣ್, ಐ.ಟಿ. ಬಿ.ಪಿ ಏಷಿಯನ್ ಗೇಮ್ಸ್ ಮೇಡಲಿಸ್ಟ್ ಶ್ರೀ ತುಷಾರ್ ಪ್ರಭಾಕರ್ ಶಿಲ್ಕೆ, ಮತ್ತು 12 ಇತರೆ ಅಂತರರಾಷ್ಟ್ರೀಯ ಮಟ್ಟದ ಲ್ಲಿ ಖ್ಯಾತಿ ಪಡೆದಿರುವ ಪೊಲೀಸ್ ಆರ್ಚರ್ ಗಳು ಭಾಗವಹಿಸಿರುವುದು ಸಂತಸದ ಸಂಗತಿ.ಎಲ್ಲರೂ ಅರ್ಜುನನಿಗೆ ಇದ್ದಷ್ಟು ಗಮನವನ್ನು ಪಡೆದು ತಮ್ಮ ಎಲ್ಲಾ ಕಾರ್ಯದಲ್ಲಿಯೂ ಯಶಸ್ಸು ಗಳಿಸುವಂತಾಗಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.