Rotary Club Shimoga ಸುಗಮ ಸಂಗೀತ ಕ್ಷೇತ್ರದ ಸಾಹಿತ್ಯ ಲೋಕದಲ್ಲಿ ನಾಡಿನ ಸುಪ್ರಸಿದ್ದ ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕೊಡುಗೆ ಅಪಾರ. ಅವರ ಪ್ರತಿಯೊಂದು ಕವನಗಳು ನಾಡಿನ ಜನಮಾನಸವನ್ನು ಗೆದ್ದಿದೆ ಎಂದು ಪಿ.ಕಾಳಿಂಗರಾವ್ ಮೊಮ್ಮಗ, ಹಿನ್ನಲೆ ಗಾಯಕ, ನಟ ರಾಜೇಶ್ ಶಾನಭಾಗ್ ಅಭಿಪ್ರಾಯಪಟ್ಟರು.
ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ನಾಡಿನ ಸುಪ್ರಸಿದ್ಧ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಜನ್ಮದಿನದ ಪ್ರಯುಕ್ತ ಅವರ ರಚನೆಯ ಗೀತ ಗಾಯನ “ಗಾನ ಮಲ್ಲಿಗೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲ ವಯಸ್ಸಿನ ಕೇಳುಗರಿಗೆ ಕವನಗಳು ತಲುಪಿವೆ. ಹಾಡುವುದಕ್ಕೂ ತುಂಬಾ ಸಂತೋಷ ನೀಡಬಲ್ಲ ಸಾಹಿತ್ಯ ಎಂದು ತಿಳಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತಾ ಎಸ್.ಶೆಟ್ಟಿ ಮಾತನಾಡಿ, ನಾಡಿನಲ್ಲಿ ವಿಶೇಷ ಸಾಧನೆ ಮಾಡಿದ ಕವಿಗಳ ತಂಡ ಇದ್ದು, ರಚನೆಗಳ ಕೇಳುವ ಜತೆಯಲ್ಲಿ ಅಭ್ಯಾಸ ಮಾಡಬೇಕು. ಉತ್ತಮ ಗಾಯಕರಾಗಬೇಕು ಎಂದು ಹೇಳಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಕೋಶಾಧ್ಯಕ್ಷ ಜಿ.ವಿಜಯಕುಮಾರ ಮಾತನಾಡಿ, ಮಕ್ಕಳು ರಿಯಾಲಿಟಿ ಶೋ, ಕಡಿಮೆ ಸಮಯದಲ್ಲಿ ಗಾಯಕರಾಗಬೇಕು ಎಂಬ ಆತುರ ತೋರದೇ ತಾಳ್ಮೆಯಿಂದ ಅಭ್ಯಾಸ ನಡೆಸಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ರೋಟರಿ ಸಂಸ್ಥೆಯು ಸೇವಾ ಕಾರ್ಯಗಳ ಜತೆಯಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಸುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ರಾಜೇಶ್ ಶಾನಭಾಗ್ ಅವರನ್ನು ಸನ್ಮಾನಿಸಲಾಯಿತು.
Rotary Club Shimoga ಕವಿ ಕೆ.ಎಸ್.ಎನ್. ಗೀತೆಗಳನ್ನು ಹಾಡಿ ನುಡಿ ನಮನ ಅರ್ಪಿಸಲಾಯಿತು. ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರಕುಮಾರ್, ಮಂಜುನಾಥ್.ಕೆ.ಎಸ್., ಭದ್ರಾವತಿ ವಾಸು, ಜಾನಪದ ಕಲಾವಿದ ಕೆ.ಯುವರಾಜ್, ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.