Shivamogga Press Trust ಸಮಾಜವಾದ ಸೇರಿದಂತೆ ಯಾವುದೇ ಸಿದ್ಧಾಂತ ಅಥವಾ ನಂಬಿಕೆ ಆಯಾ ಕಾಲಘಟ್ಟದಲ್ಲಿ ಪುನರ್ ನಿಷ್ಕರ್ಷೆಗೆ ಒಳಪಡಬೇಕಾಗದ ಅಗತ್ಯವಿದೆ ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶಿವಮೊಗ್ಗ ಪ್ರೆಸ್‍ಟ್ರಸ್ಟ್ ಸಹಯೋಗದೊಂದಿಗೆ ಮನುಜಮತ ಸಿನಿಯಾನ ಆಯೋಜಿಸಿದ್ದ ಎರಡು ದಿನಗಳ ಕಾಲದ ಸಮಾಜವಾದ ಕೇಂದ್ರಿತ ಶಿವಮೊಗ್ಗ ಸಿನಿಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಮಲೆನಾಡಿನ ಯುವ ಸಮೂಹಕ್ಕೆ ಸಮಾಜವಾದ ಎಂಬ ಪದ ಕೇವಲ ಕೇಳಿದ ಶಬ್ಬ ಪುಂಜವಾಗಿ ಮಾತ್ರ ಉಳಿದಿದೆ. ಭೂಮಿ ಕೇಂದ್ರಿತವಾಗಿ 60-70 ದಶಕದ ಕಾಲಘಟ್ಟದಲ್ಲಿ ನಡೆದ ಹೋರಾಟದಿಂದ ಸಮಾಜವಾದದ ಅರ್ಥ ಅಲ್ಲಿಗೇ ಸೀಮಿತವಾಗಿದೆ. ಆದರೆ ಬದಲಾದ ಸಂದರ್ಭದಲ್ಲಿ ಅವಕಾಶ ಮತ್ತು ಸಂಪತ್ತಿನ ಹಂಚಿಕೆಯ ಸಮಾಜವಾದ ಹೊರ ಹೊಮ್ಮಿದೆ ಎಂದರು.
ಎರಡು ದಿನಗಳ ಕಾಲ ನಡೆದ ಈ ಸಿನಿಹಬ್ಬದಲ್ಲಿ ಹಲವು ಪ್ರಮುಖ ಸಿನಿಮಾಗಳನ್ನು ನೋಡುವ ರೀತಿ, ಅರ್ಥೈಸಿಕೊಳ್ಳುವ, ಸಂವಹನ ನಡೆಸುವ ಕಲೆ ಸಿದ್ದಿಸಿಕೊಳ್ಳುವ ಪ್ರಯತ್ನ ನಡೆದಿದೆ. ಇಂತಹ ಸಿನಿಮಾಗಳು ನಮ್ಮ ಹೃದಯವನ್ನು ತಟ್ಟಿ ಬಡಿದೆಬ್ಬಿಸಬೇಕು. ಪ್ರಶ್ನೆಯನ್ನು ಹುಟ್ಟು ಹಾಕಬೇಕು. ಸಂಚಲನವಾಗಬೇಕು. ಆಗ ಮಾತ್ರ ಸಿನಿಮಾ ಸೇರಿದಂತೆ ಯಾವುದೇ ಕಲಾ ಮಾಧ್ಯಮಗಳು ಯಶಸ್ವಿಯಾಗಿದೆ ಎಂದರ್ಥ. ಈ ರೀತಿ ಹುಟ್ಟಿದ ಪ್ರಶ್ನೆಗಳು ನಮ್ಮ ವ್ಯಕ್ತಿತ್ವವನ್ನು ಬದಲಿಸುವ ದಿಕ್ಕಿನಲ್ಲಿ ಸಾಗಬೇಕು. ಹೊಸ ಚಿಂತನೆ ಆವರಿಸಬೇಕು. ಇಂತಹ ಚಿಂತನೆಗಳು ಒಬ್ಬರಿಂದ ಒಬ್ಬರಿಗೆ ದಾಟುವ ಮೂಲಕ ಸಮಾಜದ ಪರಿವರ್ತನೆಯ ಹಾದಿಯಲ್ಲಿ ಸಾಗಬೇಕು. ಆಗ ಇಂತಹ ಸಿನಿಹಬ್ಬಗಳು ಹೆಚ್ಚು ಯಶಸ್ವಿಯಾಗಿದೆ ಎಂದು ಹೇಳಬಹುದೆಂದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತನಾಡಿ ಸಮಾಜವಾದದ ನೆಲೆಯಾದ ಶಿವಮೊಗ್ಗ ಇಂದು ಕೋಮುವಾದದ ನೆಲೆಯಾಗಿ ವಿಜೃಂಭಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಯುವ ಸಮೂಹ ತಮಗೆ ಗೊತ್ತಿಲ್ಲದೆಯೇ ಈ ಬಲೆಗೆ ಬೀಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸಿನಿಹಬ್ಬಗಳು ಹೊಸ ತಲೆಮಾರಿನಲ್ಲಿ ಬದಲಾವಣೆ ತರಬೇಕು ಎಂದು ಹೇಳಿದರು.
Shivamogga Press Trust ಚಿಂತಕ ಮುರುಳೀಧರ್ ಮಾತನಾಡಿ, ಸಿನಿಮಾ ಸೇರಿದಂತೆ ಯಾವುದೇ ಕಲಾ ಪ್ರಾಕಾರಗಳು ನಮ್ಮ ಗ್ರಹಿಕೆಗೆ ತಕ್ಕಷ್ಟು ದಕ್ಕುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ, ರಸಗ್ರಹಣ ಮುಖ್ಯ. ಆದರೆ ಯಾವುದೇ ಕಲಾ ಪ್ರಾಕಾರಗಳಿಗೆ ಹೋಲಿಸಿದಲ್ಲಿ ಸಿನಿಮಾದಲ್ಲಿ ತಂತ್ರಜ್ಞಾನ ಹೆಚ್ಚು ಯಶಸ್ವಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಅನೇಕ ಸಿನಿಮಾಗಳು ಶ್ರಮಿಕ ವರ್ಗದ ನೋವನ್ನು, ಆ ಕತೆಯನ್ನು ಕಟ್ಟಿಕೊಡುವ ರೀತಿಯನ್ನು ಯಶಸ್ವಿಯಾಗಿ ಕಟ್ಟಿಕೊಟ್ಟಿವೆ. ಆಯಾ ಕಾಲಘಟ್ಟದ, ಆಯಾ ಪ್ರದೇಶದ ಶ್ರಮಿಕ ವರ್ಗದ ನೋವು, ಸಂಕಷ್ಟ, ಶೋಷಣೆಯನ್ನು ವಿದೇಶಿ ಸಿನಿಮಾಗಳ ನಿರ್ದೇಶಕರು ಅತ್ಯುತ್ತಮ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇವೆಲ್ಲವನ್ನೂ ನಾವು ನೋಡುವ, ವಿಶ್ಲೇಷಿಸುವ, ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಅನೇಕ ಸಿನಿಮಾಗಳು ಉದಾಹರಣೆಯೊಂದಿಗೆ ವಿವರಿಸಿದರು.
ಇನ್ನೋರ್ವ ಚಿಂತಕ ಫಣಿರಾಜ್ ಮಾತನಾಡಿ, ಇಂದಿನ ಸಿನಿಹಬ್ಬದಲ್ಲಿ ಯಾರೂ ತಮಗೆ ಸಿನಿಮಾ ಅರ್ಥ ಆಗಿಲ್ಲ ಎಂದು ಹೇಳದೆ ಇರುವುದು ಸಂತೋಷದ ಸಂಗತಿ. ಇಂತಹ ಸಿನಿಹಬ್ಬಗಳು ವ್ಯಕ್ತಿತ್ವವನ್ನು ರೂಪಿಸುವ ಜೊತೆಗೆ ಬಂಧುತ್ವವನ್ನು ಬೆಸೆಯುತ್ತದೆ. ಪತ್ರಕರ್ತರ ಸಂಘ ಮತ್ತು ಪ್ರೆಸ್‍ಟ್ರಸ್ಟ್ ಜೊತೆಯಾಗಿ ನಿಂತಿರುವುದು ಉತ್ತಮ ಬೆಳವಣಿಗೆ. ಈ ಸಹಕಾರದೊಂದಿಗೆ ಸಿನಿಹಬ್ಬವನ್ನು ಕಾಲೇಜುಗಳಿಗೆ ಕೊಂಡೊಯ್ಯುವ ಪ್ರಯತ್ನ ನಡೆಯಲಿ ಎಂದು ಆಶಿಸಿದರು.
ಪತ್ರಕರ್ತ,ರಂಗಕರ್ಮಿ, ಸಿನಿಹಬ್ಬದ ಸಂಚಾಲಕ ಹೊನ್ನಾಳಿ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪತ್ರಕರ್ತ ಜಿ. ಟಿ. ಸತೀಶ್ ವಂದಿಸಿದರು.