CM Siddharamaih ಸಾಮಾಜಿಕ ನ್ಯಾಯದ ಮೊದಲ ಹರಿಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ನಮ್ಮ ಸರ್ಕಾರದ ಈ ತೀರ್ಮಾನ ಮುಖ್ಯಮಂತ್ರಿಯಾದ ನನಗೆ ಅತೀವ ಹೆಮ್ಮೆ ಮತ್ತು ತೃಪ್ತಿಯನ್ನು ಉಂಟುಮಾಡಿದೆ. ಇದು ಕೇವಲ ಘೋಷಣೆ ಅಲ್ಲ, ಬಸವ ತತ್ವದ ಮೇಲಿರುವ ನಮ್ಮ ನಂಬಿಕೆ ಮತ್ತು ಬದ್ದತೆ ಎಂದರು.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕೆಂದು ನಾಡಿನ ಲಿಂಗಾಯತ ಮಠಗಳ ಸ್ವಾಮಿಗಳು ನನ್ನ ಬಳಿ ಬಂದು ಮನವಿ ಮಾಡಿದ್ದರು. ಇದು ವೈಯಕ್ತಿಕವಾಗಿ ನನ್ನ ಅಪೇಕ್ಷೆಯೂ ಆಗಿತ್ತು. ಸ್ವಾಮಿಗಳ ಈ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನಮ್ಮ ಸರ್ಕಾರಕ್ಕೆ ಇದೆ.ಈ ಎಲ್ಲ ಸ್ವಾಮೀಜಿಗಳ ಆಶೀರ್ವಾದ ನಮ್ಮ ಸರ್ಕಾರದ ಮೇಲೆ ಇರಲಿ ಎಂದರು.
ಇದೇ ಸಂದರ್ಭದಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ
ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ಬಸವಣ್ಣ ನನ್ನವೈಚಾರಿಕ ಗುರು. ಬಸವ ಜಯಂತಿಯ ದಿನವೇ ನಾನು ಮೊದಲ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೆ.
ಆ ನಿರ್ಧಾರ ಕಾಕತಾಳೀಯವಲ್ಲ, ಉದ್ದೇಶಪೂರ್ವಕವಾದುದು ಎಂದು ತಿಳಿಸಿದರು.
ಆ ದಿನ ಬಸವಣ್ಣನವರ ಚಿಂತನೆಗಳ ಹಾದಿಯಲ್ಲಿ ನಡೆಯುತ್ತೇನೆ ಎಂದು ನನ್ನ ಮನಸ್ಸಿನೊಳಗೆ ಪ್ರಮಾಣ ಮಾಡಿದ್ದೆ. ಅದರಂತೆ ಬಸವಣ್ಣನವರ ತತ್ವದ ದಾರಿಯಲ್ಲಿಯೇ ನಮ್ಮ ಸರ್ಕಾರ ಈಗಲೂ ಸಾಗುತ್ತಿದೆ. ಈ ಜಾಗೃತಿ ನಮ್ಮ ಸರ್ಕಾರದ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಇರಬೇಕೆಂಬ ಉದ್ದೇಶದಿಂದಲೇ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಬೇಕೆಂದು ಆದೇಶಿಸಿದ್ದೇನೆ ಎಂದರು.
ಭಾರತದ ಇತಿಹಾಸದಲ್ಲಿ ಹನ್ನೆರಡನೆ ಶತಮಾನ ಅತ್ಯಂತ ಮಹತ್ವಪೂರ್ಣವಾದುದು. ಅಜ್ಞಾನ, ಜಾತೀಯತೆ,ಮತಾಂಧತೆ,ಶೋಷಣೆ, ಮೌಡ್ಯಗಳಿಂದ ಮುಳುಗಿಹೋಗಿದ್ದ ಸಮಾಜವನ್ನು ಮೇಲೆತ್ತಲು ಅರಸ ಬಿಜ್ಜಳನಿಗೆ ಹಣಕಾಸು ಸಚಿವರಾಗಿದ್ದ ಬಸವಣ್ಣನವರು, ರಾಜಿ ಇಲ್ಲದ ಬದ್ಧತೆ, ಪ್ರಶ್ನಾತೀತವಾದ ಜನಪರ ಕಾಳಜಿ ಮೂಲಕ ಮಾಡಿದ ಪ್ರಯತ್ನ-ಪ್ರಯೋಗಗಳು ಪ್ರಪಂಚದ ಎಲ್ಲ ಆಡಳಿತಗಾರರ ಆದರ್ಶವೆಂದು ತಿಳಿಸಿದರು.
ಕಾಯಕ ಮತ್ತು ದಾಸೋಹ ನನ್ನ ಇಷ್ಟದ ಬಸವಣ್ಣನನವರ ತತ್ವದ ಮೂಲಧಾತುಗಳು. ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ವಿತರಣೆ. ಸಂಪತ್ತಿನ ಉತ್ಪಾದನೆಯ ಶಕ್ತಿ ಎಲ್ಲರದ್ದಾಗಬೇಕು, ಅದರ ವಿತರಣೆ ಸಮನಾಗಿ ನಡೆಯಬೇಕು ಎಂದು ಬಸವಣ್ಣನವರ ಆಶಯವಾಗಿತ್ತು.
CM Siddharamaih ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಇಷ್ಟೊಂದು ಸರಳವಾಗಿ ವಿಶ್ಲೇಷಿಸುವುದು ಸಾಧ್ಯ ಇಲ್ಲ.
ಅಣ್ಣನ ಅನ್ನದಾಸೋಹದ ಸಂದೇಶಕ್ಕೆ ಅನುಗುಣವಾಗಿ ಮುಖ್ಯಮಂತ್ರಿಯಾದ ಮರುಗಳಿಗೆಯಲ್ಲಿಯೇ ಅನ್ನಭಾಗ್ಯ’ಯೋಜನೆಯನ್ನು ಜಾರಿಗೊಳಿಸಿದೆ. ಈ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪ ಕೈಗೊಂಡೆ. ವಿದ್ಯಾರ್ಥಿಗಳಿಗೆ ಬಿಸಿಯೂಟ, ಕ್ಷೀರಭಾಗ್ಯದ ಮೂಲಕ ಹಾಲು, ಇಂದಿರಾ ಕ್ಯಾಂಟೀನ್, ಗರ್ಭಿಣಿ ಮತ್ತು ಬಾಣಂತಿಯರಿಗಾಗಿ ಮಾತೃಪೂರ್ಣ ಯೋಜನೆಗಳು ಬಸವಣ್ಣನವರ ಅನ್ನದಾಸೋಹದ ಚಿಂತನೆಯಿಂದಲೇ ಪ್ರೇರಿತವಾದುದು ಎಂದರು.
ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅವಕಾಶಗಳು ಸಿಗಬೇಕು ಎಂದು ಬಸವಣ್ಣ ಬಯಸಿದ್ದರು. ನಮ್ಮ ಸರ್ಕಾರದ ಯೋಜನೆಗಳತ್ತ ಕಣ್ಣು ಹಾಯಿಸಿದರೆ ಬಸವಣ್ಣನ ಆಶಯಗಳ ಪ್ರಭಾವ ಪ್ರತಿಯೋಜನೆಯಲ್ಲಿಯೂ ಕಾಣಬಹುದು ಎಂದು ಹೇಳಿದರು.
ಬಡತನ ನಿವಾರಣೆ, ಕೃಷಿ, ನೀರಾವರಿ, ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣ, ಉದ್ಯೋಗ ಸೃಷ್ಟಿಗೆ ನಮ್ಮ ಸರ್ಕಾರ ಆದ್ಯತೆ ನೀಡಿ ಅಭಿವೃದ್ಧಿಯ ಜೊತೆಯಲ್ಲಿ ಸಾಮಾಜಿಕ ನ್ಯಾಯವನ್ನು ಬೆಸೆಯುವ ನಮ್ಮ ‘’ಕರ್ನಾಟಕ ಅಭಿವೃದ್ಧಿ ಮಾದರಿಯನ್ನು ಇಡೀ ದೇಶ ಚರ್ಚಿಸುತ್ತಿದೆ. ಬಸವಣ್ಣ ಎಂಬ ಜ್ಞಾನಭಂಡಾರದ ಮಾರ್ಗದರ್ಶನ ಇಲ್ಲದೆ ಇದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.
ಕನ್ನಡ ಭಾಷೆಯ ಬಗೆಗಿನ ನಮ್ಮ ಸರ್ಕಾರದ ಬದ್ಧತೆಗೂ ಬಸವಣ್ಣನೇ ಪ್ರೇರಕ ಶಕ್ತಿ. ಬಸವಣ್ಣನವರು ಕನ್ನಡವನ್ನು ಅಂದಿನ ಧರ್ಮದ ಭಾಷೆಯಾಗಿ, ವಿಚಾರದ ಭಾಷೆಯಾಗಿ, ಸಂವಹನದ ಭಾಷೆಯಾಗಿ ಬಳಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಬೆಲೆ ಕಟ್ಟಲಾರದ್ದು. ಹಾಗೆ ನೋಡಿದರೆ ಕನ್ನಡ ಮಾಧ್ಯಮ ಪರಿಣಾಮಕಾರಿಯಾಗಿ ಜಾರಿಗೆ ಬಂದದ್ದೇ ಹನ್ನೆರಡನೇ ಶತಮಾನದಲ್ಲಿ ಎನ್ನುವುದು ಆಶ್ಚರ್ಯದ ಸಂಗತಿಯಾದರೂ ವಾಸ್ತವ ಎಂದರು.
ಅನ್ನದಾಸೋಹ ಮತ್ತು ಜ್ಞಾನದಾಸೋಹದ ಮೂಲಕ ರಾಜ್ಯದ ಲಿಂಗಾಯತ ಮಠಗಳು ನಾಡಿನ ಸರ್ವಾಂಗೀಣ ಏಳಿಗೆಗೆ ಶ್ರಮಿಸುತ್ತಿರುವುದನ್ನು ಕೂಡಾ ನಾನು ಕೃತಜ್ಞತಾ ಭಾವದಿಂದ ಸ್ಮರಿಸುತ್ತೇನೆ. ಬಡತನ ಮತ್ತು ಅಜ್ಞಾನದ ನಿವಾರಣೆಯಲ್ಲಿ ಈ ಮಠಗಳು ವಿಶೇಷ ಪಾತ್ರವಹಿಸಿವೆ. ಶಿಕ್ಷಣ ಪ್ರಸಾರಕ್ಕೆ ಧಾರ್ಮಿಕ ಮಠಮಾನ್ಯಗಳು ನೀಡಿರುವ ಕೊಡುಗೆ ಅಪಾರವಾದುದು.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆಯನ್ನಷ್ಟೇ ಮಾಡಿ ನಾವು ವಿರಮಿಸುವುದಿಲ್ಲ. ಬಸವ ತತ್ವವನ್ನು ಮನೆಮನೆಗೆ ತಲುಪಿಸುವ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತೇವೆ ಎಂದು ಮಾಹಿತಿ ನೀಡಿದರು.
ಸಮಸಮಾಜ ನಿರ್ಮಾಣದ ಬಗ್ಗೆ ಬಸವಣ್ಣ ಕಂಡ ಕನಸನ್ನು ಸಾಕಾರಗೊಳಿಸಲು ಎಲ್ಲರ ಸಹಕಾರ ಇರಲಿ ಎಂದರು.