Samanvaya Trust Shivamogga ಭಾರತ ದೇಶದತ್ತ ವಿಶ್ವವ್ಯಾಪಿ ಜನರು ಆಕರ್ಷಿತ ಆಗುತ್ತಿರುವುದಕ್ಕೆ ಕಾರಣ ಭಾರತೀಯ ಶ್ರೇಷ್ಠ ಪರಂಪರೆಯ ಶಕ್ತಿ. ಇದರ ಜತೆಯಲ್ಲಿ ವಿಶ್ವಕ್ಕೆ ಆಧ್ಯಾತ್ಮಿಕ ಸಂದೇಶ ನೀಡಿದವರು ದೇಶದ ಸಾಧು ಸಂತರು ಎಂದು ಮೈಸೂರಿನ ಪೂಜ್ಯ ಶ್ರೀ ಅರ್ಜುನ ಅವಧೂತರು ಹೇಳಿದರು.
ಶಿವಮೊಗ್ಗ ನಗರದ ವಿಮಾನ ನಿಲ್ದಾಣ ರಸ್ತೆಯ ಪೋದಾರ್ ಶಾಲೆ ಸಮೀಪದಲ್ಲಿ ಇರುವ ಸಮನ್ವಯ ಟ್ರಸ್ಟ್ ನಲ್ಲಿ ಆಯೋಜಿಸಿದ್ದ “ದತ್ತ ಪಾರಾಯಣ ಮಂಗಳ – ಸಂಕ್ರಾಂತಿ ಸಂಭ್ರಮ” ಮತ್ತು “ಅವಧೂತರ ನಡೆ, ಭಕ್ತರ ಕಡೆ” ಎನ್ನುವ ವಿಶೇಷ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರತಿಯೊಬ್ಬರಲ್ಲಿ ಏಕತಾ ಭಾವ ಮೂಡಿಸುವುದು, ಮನುಷ್ಯ ತತ್ವ ಬೆಳೆಸುವುದು, ಗುರು ಹಿರಿಯರು, ಅನ್ನದಾತರು, ಸೈನಿಕರಿಗೆ ಭಕ್ತಿ ಪೂರ್ವಕ ಗೌರವ ಸಲ್ಲಿಸುವುದು ನಮ್ಮ ಸಂಸ್ಕೃತಿ. ಎಲ್ಲ ಧರ್ಮದವರನ್ನು ಗೌರವಿಸುವುದು ನಮ್ಮ ಶ್ರೇಷ್ಠ ಪರಂಪರೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ಮಾನವ ಧರ್ಮದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಗತ್ಯ ಇರುವವರಿಗೆ ನೆರವು ಒದಗಿಸುವ ಮನೋಭಾವ ಪ್ರತಿಯೊಬ್ಬರಲ್ಲಿ ಬೆಳೆಯಬೇಕು. ಸಮಾಜಕ್ಕಾಗಿ ಬದುಕು ನಡೆಸುವುದು ಸಾರ್ಥಕ ಭಾವ ಎಂದು ಅಭಿಪ್ರಾಯಪಟ್ಟರು.
Samanvaya Trust Shivamogga ವಿಶೇಷ ಉಪನ್ಯಾಸ ನೀಡಿದ ದಾವಣಗೆರೆಯ ಶ್ರೀ ರೇಣುಕಾ ಮಾತಾಜಿ ಮಾತನಾಡಿ, ಗುರುವಿನ ಮೇಲೆ ಸದಾ ಭಕ್ತಿ ಇರಬೇಕು. ಮನಸ್ಸಿಗೆ ಸಂಸ್ಕಾರ ನೀಡುವಾತ ಗುರು, ಉತ್ತಮ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುವವರು ಗುರು. ಇನ್ನೂ ಗುರುಚರಿತ್ರೆ ಪಾರಾಯಣ ನಮ್ಮಲ್ಲಿ ವಿಶೇಷ ಅರಿವು ಮೂಡಿಸುತ್ತದೆ ಎಂದು ಹೇಳಿದರು.
ನಿತ್ಯ ಜೀವನದಲ್ಲಿ ಮೌಲ್ಯಯುತ ಸಂಸ್ಕಾರ ಗುಣಗಳನ್ನು ಗುರುಚರಿತ್ರೆ ಪಾರಾಯಣದಿಂದ ನಾವು ಅರಿತುಕೊಳ್ಳಬಹುದಾಗಿದೆ. ನಮ್ಮಲ್ಲಿನ ಸಾಮಾರ್ಥ್ಯ ಬೇರೆ ಯಾರಿಗೂ ತಿಳಿಯುವುದಿಲ್ಲ. ಆತ್ಮವಿಶ್ವಾಸದಿಂದ ಸಾಧನೆಯ ಜೀವನ ರೂಪಿಸಿಕೊಳ್ಳುವ ಶಕ್ತಿ ನಮ್ಮ ಕೈಯಲ್ಲೇ ಇದೆ ಎಂದು ತಿಳಿಸಿದರು.
ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ಸ್ವಯಂ ಸೇವಕರು ಒಟ್ಟುಗೂಡಿ ಕಟ್ಟಿರುವ ಸಂಸ್ಥೆ ಇದಾಗಿದ್ದು, ಸಾವಿರಾರು ಯುವಜನತೆ ಉತ್ತಮ ಬದುಕು ರೂಪಿಸಿಕೊಳ್ಳಲು ನೆರವಾಗಿದೆ. ಸ್ವಯಂ ಸೇವಕರ ಆರ್ಥಿಕ ನೆರವಿನಿಂದ “ಕೆ.ಎ.ದಯಾನಂದ ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ವಾಚನಾಲಯ” ನಿರ್ಮಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವಜನರನ್ನು ತರಬೇತಿಗೊಳಿಸುವುದು ಟ್ರಸ್ಟ್ ಪ್ರಮುಖ ಆಶಯ ಎಂದರು.
ಸಮನ್ವಯ ಟ್ರಸ್ಟ್ ಅಧ್ಯಕ್ಷೆ ಕೆ.ಎಂ.ಗಿರಿಜಾದೇವಿ ಅಧ್ಯಕ್ಷತೆ ವಹಿಸಿದ್ದರು. ಗುರುಗುಹ ಸಂಸ್ಥೆಯ ವಿದ್ವಾನ್ ಶೃಂಗೇರಿ ಎಚ್.ಎಸ್.ನಾಗರಾಜ್, ನಂದಿನಿ ಸಾಗರ, ಮಮತಾ, ಅಮಿತ್, ನಾರಾಯಣ, ವಿಜಯ್, ಸ್ಮಿತಾ ಭಕ್ತರು, ಸಾರ್ವಜನಿಕರು, ಸಮನ್ವಯ ಸ್ವಯಂ ಸೇವಕರು ಗುರುಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.